ರಾಜೀನಾಮೆ ನೀಡಿದ ಶಾಸಕರು ಬಿಜೆಪಿಯವರ ಬೆನ್ನಿಗೂ ಚೂರಿ ಹಾಕಲಿದ್ದಾರೆ: ಸಚಿವ ಡಿಕೆಶಿ

Update: 2019-07-23 18:07 GMT

ಬೆಂಗಳೂರು, ಜು. 23: ‘ರಾಜೀನಾಮೆ ನೀಡಿರುವ 15 ಮಂದಿ ಶಾಸಕರಿಗೆ ಸಚಿವ ಸ್ಥಾನದ ಆಮಿಷವೊಡ್ಡಿ ಟೋಪಿ ಹಾಕಲಾಗುತ್ತಿದೆ. ಅಲ್ಲದೆ, ಅವರ ರಾಜಕೀಯ ಭವಿಷ್ಯ ಹಾಳು ಮಾಡಲು ಬಿಜೆಪಿ ಹುನ್ನಾರ ನಡೆಸಿದೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜೀನಾಮೆ ನೀಡಿರುವ 15 ಮಂದಿ ಶಾಸಕರು ಅತೃಪ್ತರಲ್ಲ, ಬದಲಿಗೆ ಅವರೆಲ್ಲ ‘ಸಂತೃಪ್ತರು’. ಅವರ ರಾಜಕೀಯ ಭವಿಷ್ಯವನ್ನು ಸಮಾಧಿ ಮಾಡಲು ಬಿಜೆಪಿಯವರು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದಾರಿ ತಪ್ಪಿಸುವ ಕೆಲಸ: ರಾಜೀನಾಮೆ ನೀಡಿರುವ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ. ಆದರೂ ಅವರೆಲ್ಲರನ್ನೂ ಸಚಿವ ಸ್ಥಾನದ ಆಸೆ, ಹಣದ ಆಮಿಷವೊಡ್ಡಿದ್ದು, ಅವರ ಭವಿಷ್ಯವನ್ನು ಹಾಳು ಮಾಡುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಿವಕುಮಾರ್ ಲೇವಡಿ ಮಾಡಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರಿಗೆ ‘ವಿಪ್’ ಅನ್ವಯ ಆಗುವುದಿಲ್ಲ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ, ನಿನ್ನೆ ಸ್ಪೀಕರ್ ನೀಡಿರುವ ರೂಲಿಂಗ್ ಅನ್ವಯ ರಾಜೀನಾಮೆ ನೀಡಿರುವ ಶಾಸಕರಿಗೂ ವಿಪ್ ಅನ್ವಯ ಆಗಲಿದೆ ಎಂದು ಎಚ್ಚರಿಸಿದರು.

ಶಾಸಕರು ವಿಪ್ ಉಲ್ಲಂಘಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ರಾಜೀನಾಮೆ ನೀಡಿರುವ ಎಲ್ಲ ಶಾಸಕರಿಗೆ ಆಮಿಷವೊಡ್ಡಿದ್ದು, ಉಪಮುಖ್ಯಮಂತ್ರಿ, ನೀರಾವರಿ ಖಾತೆ ಸೇರಿದಂತೆ ಹಲವು ಆಸೆ ತೋರಿಸಲಾಗಿದೆ ಎಂದು ಬಿಚ್ಚಿಟ್ಟರು.

ಈ ಹಂತದಲ್ಲಿ ಎದ್ದುನಿಂತ ಬಿಜೆಪಿಯ ಜಗದೀಶ್ ಶೆಟ್ಟರ್, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವ 15 ಶಾಸಕರಿಗೆ ವಿಪ್ ಅನ್ವಯ ಆಗುವುದಿಲ್ಲ. ಆದರೆ, ಸಚಿವ ಶಿವಕುಮಾರ್ ಸದನವನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಚಿವ ಕೃಷ್ಣಬೈರೇಗೌಡ, ತಮಿಳುನಾಡಿ ಸ್ಪೀಕರ್ ಹಾಗೂ ಶರದ್ ಯಾದವ್ ಅವರಿಗೆ ಸಂಬಂಧಿಸಿದ ತೀರ್ಪುಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿರುವ ಎಲ್ಲ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗಲಿದೆ ಎಂದು ಪ್ರತಿಪಾದಿಸಿದರು.

ನಾನು ಸಾಲಗಾರನಾದೆ: ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಲು ನಾನು ಸಿದ್ದನಿರಲಿಲ್ಲ. ಆದರೆ, ಶಾಸಕರಾದ ಗೋಪಾಲಯ್ಯ, ಸೋಮಶೇಖರ್ ಹಾಗೂ ಬೈರತಿ ಬಸವರಾಜು ಒತ್ತಡಕ್ಕೆ ಮಣಿದು ಸ್ಪರ್ಧಿಸಿದೆ. ಇದೀಗ ನಾನು ಸಾಲಗಾರನಾಗಿದ್ದೇನೆಂದು ಕೃಷ್ಣಬೈರೇಗೌಡ ಬೇಸರ ವ್ಯಕ್ತಪಡಿಸಿದರು.

ಬಿಎಸ್‌ವೈ ಛಲ ಮೆಚ್ಚಬೇಕು: ಯಶಸ್ಸುಗಳಿಸಲು ಧರ್ಮರಾಯ, ಅರ್ಜುನ, ಕೃಷ್ಣ, ವಿಧುರ, ಭೀಮ ಹಾಗೂ ಕರ್ಣನ ಗುಣಗಳ ಜತೆ ಯಡಿಯೂರಪ್ಪನವರ ಛಲವೂ ಇರಬೇಕು ಎಂದು ಸಚಿವ ಶಿವಕುಮಾರ್ ವ್ಯಂಗ್ಯದಾಟಿಯಲ್ಲಿ ಲೇವಡಿ ಮಾಡಿದರು.

ರಾಜೀನಾಮೆ ನೀಡಿರುವ ಶಾಸಕರನ್ನು ಕೂಡಿ ಹಾಕಿಕೊಳ್ಳುವುದು ನಮಗೆ ಗೊತ್ತಿತ್ತು. ಆದರೆ, ಆ ಕೆಲಸವನ್ನು ನಾನು ಮಾಡಲಿಲ್ಲ ಎಂದ ಅವರು, ರಾಜೀನಾಮೆ ನೀಡಿದ ಎಲ್ಲ ಶಾಸಕರು ನಮ್ಮ ಕುಟುಂಬದ ಸ್ನೇಹಿತರು. ಅವರೆಲ್ಲರೂ ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಅದೇ ರೀತಿ ಬಿಜೆಪಿಯವರ ಬೆನ್ನಿಗೂ ಒಂದು ದಿನ ಚೂರಿ ಹಾಕಲಿದ್ದಾರೆ ಎಂದು ಎಚ್ಚರಿಸಿದರು.

ನಾನು ಕಾರಾಗೃಹ ಸಚಿವನಾಗಿದ್ದೆ. ಇದೀಗ ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ. ಜಾರಿ ನಿರ್ದೇಶನಾಲಯ(ಇಡಿ), ಆದಾಯ ತೆರಿಗೆ ಇಲಾಖೆ(ಐಟಿ)ಯಿಂದ ನಾನು ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದು ಎಲ್ಲದಕ್ಕೂ ಸಿದ್ಧನಾಗಿದ್ದೇನೆ ಎಂದು ಅವರು ತಿಳಿಸಿದರು.

‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ, ಉದ್ದರಿಸುವೆನು ಜಗವನೆನ್ನುತಿಹ ಸಖನೆ, ನಿನ್ನುದ್ದಾರವೆಷ್ಟಾಯ್ತಾ ಮಂಕುತಿಮ್ಮ’ ಎಂಬ ಡಿವಿಜಿಯವರ ಕಗ್ಗದಂತೆ ನಾವೆಲ್ಲರೂ ಗುದ್ದಾಡಿಯೂ ಸೋಲುತ್ತಿದ್ದೇನೆ ಎಂದು ಶಿವಕುಮಾರ್ ಉಲ್ಲೇಖಿಸಿದರು.

‘ಭುಜ ಹತ್ತಿರವಿದ್ದರೆ ಕೈಚಾಚಿ ಸ್ನೇಹ ಬೆಳೆಸುತ್ತೇವೆ, ಬೆನ್ನು ಹತ್ತಿರವಿದ್ದರೆ ಚೂರಿಯಿಂದ ಚುಚ್ಚುತ್ತೇವೆ. ಅದೇ ಇಂದಿನ ರಾಜಕೀಯ’

-ಕೆ.ಆರ್.ರಮೇಶ್‌ಕುಮಾರ್, ಸ್ಪೀಕರ್

‘ನಿಂಬೆಗಿಂತ ಹುಳಿ ಇಲ್ಲ, ದುಂಬಿಗಿಂತ ಕರಿ ಇಲ್ಲ, ಶಂಭುಗಿಂತ ಅಧಿಕ ದೇವನಿಲ್ಲ’

-ಡಿ.ಕೆ.ಶಿವಕುಮಾರ್, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News