ಬಿಬಿಎಂಪಿ: ಪ್ಲಾಸ್ಟಿಕ್ ಪರ್ಯಾಯ ವಸ್ತುಗಳ ಬಳಕೆ ಉತ್ತೇಜನಕ್ಕಾಗಿ ಮೇಳ

Update: 2019-07-23 18:31 GMT

ಬೆಂಗಳೂರು, ಜು.23: ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಫ್ಲೇಟ್, ಸ್ಪೂನ್ ಕಪ್‌ಗೆ ಪರ್ಯಾಯ ಏನು ಎಂಬ ಚಿಂತೆಗೆ ಒಳಗಾಗಿರುವ ನಗರದ ನಾಗರಿಕರಿಗೆ ಮತ್ತು ವ್ಯಾಪಾರಿಗಳಿಗೆ ಬಿಬಿಎಂಪಿ ಪರ್ಯಾಯ ವಸ್ತುಗಳ ಉತ್ಪಾದಕರ ಮತ್ತು ಗ್ರಾಹಕರ ಮೇಳ ಆಯೋಜನೆಗೆ ಚಿಂತನೆ ನಡೆಸಿದೆ.

ಕಳೆದ ಒಂದು ವಾರದಿಂದ ನಗರದಲ್ಲಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ವ್ಯಾಪಾರಿ ಮಳಿಗೆ, ಮಾರುಕಟ್ಟೆಗಳು ಹಾಗೂ ಇನ್ನಿತರ ಪ್ರದೇಶಗಳಲ್ಲಿ ಅನೀರಿಕ್ಷಿತ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಕ್ಕೆ ಪಡೆದು ಸಾವಿರಾರು ದಂಡ ವಿಧಿಸುತ್ತಿದ್ದಾರೆ. ಇದರಿಂದ ನಗರದ ಸಣ್ಣ- ಮಧ್ಯಮ ಮತ್ತು ಬೀದಿ ವ್ಯಾಪಾರಿಗಳು ಅಷ್ಟೇ ಅಲ್ಲ ನಾಗರಿಕರೂ ಅಕ್ಷರಶಃ ಚಿಂತೆಗೆ ಒಳಗಾಗಿದ್ದಾರೆ.

ಕ್ಯಾರಿ ಬ್ಯಾಗ್ ನೀಡದಿದ್ದರೆ ಗ್ರಾಹಕರು ತಪ್ಪಿ ಹೋಗಲಿದ್ದಾರೆ ಎಂಬ ಆತಂಕದಲ್ಲಿ ತರಕಾರಿ, ಹಣ್ಣು, ಹೂವಿನ ವ್ಯಾಪಾರಿಗಳಿದ್ದಾರೆ. ಬಟ್ಟೆ ಹಾಗೂ 40 ಮೈಕ್ರಾನ್‌ನಿಂದ ದಪ್ಪದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನೀಡಿದರೆ ವೆಚ್ಚ ಹೆಚ್ಚಾಗುತ್ತದೆ. ಇಂತಹ ಬ್ಯಾಗ್‌ಗೆ ಹಣ ಕೇಳಿದರೆ ಗ್ರಾಹಕರು ವ್ಯಾಪಾರ ಮಾಡದೇ ಹೋಗಬಹುದು ಎಂಬ ಆತಂಕದಲ್ಲಿರುವ ನಗರದ ವ್ಯಾಪಾರಿ ಮತ್ತು ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಪಾಲಿಕೆ ಮೇಳ ಆಯೋಜನೆಗೆ ಮುಂದಾಗಿದೆ.

ಮೂರು ದಿನದ ಮೇಳ: ನಿಷೇಧಿಸಲಾದ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯ ಸಾಮಗ್ರಿಗಳ ಉತ್ಪಾದಕರು ಮತ್ತು ಗ್ರಾಹಕರನ್ನು ಒಂದೇ ಸೂರಿನಡಿ ಸೇರಿ ಮೂರು ದಿನ ಮೇಳ ಆಯೋಜನೆಗೆ ಚಿಂತನೆ ಮಾಡಲಾಗಿದೆ. ಮೇಳದಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಫ್ಲೇಟ್, ಸ್ಪೂನ್ ಸೇರಿದಂತೆ ನಿಷೇಧಿಸಲಾದ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಉತ್ಪನ್ನಗಳ ಪ್ರದರ್ಶನ, ಮಾಹಿತಿ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಮೇಳ ಆಯೋಜನೆಗಾಗಿ ಬಿಬಿಎಂಪಿ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಉತ್ಪನ್ನ ತಯಾರಿಕಾ ಸಂಸ್ಥೆಗಳು, ಪ್ಲಾಸ್ಟಿಕ್ ಸಗಟು ಮತ್ತು ಸಣ್ಣ ವ್ಯಾಪಾರಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಮೇಳ ಆಯೋಜನೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪರಿಸರ ಸ್ನೇಹಿ ಬ್ಯಾಗ್ ವಿತರಣೆ: ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ನಿಷೇಧದಿಂದ ತೊಂದರೆಗೆ ಒಳಗಾಗುವ ವ್ಯಾಪಾರಿಗಳಿಗೆ ನೆರವಾಗಲು ಬಡ ಮತ್ತು ಬೀದಿ ವ್ಯಾಪಾರಿಗಳಿಗೆ ಕಾರ್ಪೋರೇಟ್ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿಯಡಿ (ಸಿಎಸ್‌ಆರ್) ಪೇಪರ್ ಅಥವಾ ಇನ್ನಿತರ ಪರಿಸರ ಸ್ನೇಹಿ ಕ್ಯಾರಿ ಬ್ಯಾಗ್, ಬಟ್ಟೆ ಬ್ಯಾಗ್ ವಿತರಣೆ ಬಿಬಿಎಂಪಿ ಚಿಂತನೆ ನಡೆಸಿದೆ. ನಗರದಲ್ಲಿರುವ ವಿವಿಧ ಬಹುರಾಷ್ಟ್ರೀಯ ಕಂಪನಿಗಳು ಸಿಎಸ್‌ಆರ್ ಧನ ಸಹಾಯ ನೀಡುವುದಕ್ಕೆ ಮುಂದೆ ಬಂದಿದೆ. ಶೀಘ್ರದಲ್ಲಿ ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ.

21.3 ಲಕ್ಷ ರೂ. ದಂಡ: ಕಳೆದ ಜು.15ರಿಂದ ಜು.22ರವರೆಗೆ ನಗರದಲ್ಲಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ಒಟ್ಟು 21.3 ಲಕ್ಷ ರೂ. ದಂಡ ವಸೂಲಿ ಮಾಡಲಿದ್ದಾರೆ. ಈ ವೇಳೆ 2,840 ವ್ಯಾಪಾರಿ ಮಳಿಗೆಗಳನ್ನು ತಪಾಸಣೆ ನಡೆಸಲಾಗಿದ್ದು, 1,108 ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿ 10,511.5 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ಲಾಸ್ಟಿಕ್ ನಿಷೇಧಕ್ಕೆ ಪಾಲಿಕೆ ತೆಗೆದುಕೊಂಡ ಕ್ರಮ

* ಪ್ಲಾಸ್ಟಿಕ್ ಉತ್ಪಾದಿಸುವ ಉದ್ದಿಮೆಗಳ ಮೇಲೆ ದಿಢೀರ್ ದಾಳಿ.

* ಎಲ್ಲ ಶಾಲಾ ಮುಖ್ಯಸ್ಥರ ಸಭೆ ಕರೆದು ಅವರೊಂದಿಗೆ ಸಮಾಲೋಚನೆ.

* ಮಕ್ಕಳ ಮೂಲಕ ಪರಿಸರ ಜಾಗೃತಿ.

* ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಹೀರಾತಿನ ಮೂಲಕ ಜಾಗೃತಿ.

* ಪ್ಲಾಸ್ಟಿಕ್ ಕವರ್‌ಗಳಿಗೆ ಪರ್ಯಾಯವಾಗಿ ಪೇಪರ್ ಬ್ಯಾಗ್.

ಪ್ಲಾಸ್ಟಿಕ್ ನಿಷೇಧ ಕಾರ್ಯಾಚರಣೆ ವಿವರ

* ತಪಾಸಣೆ ನಡೆಸಿದ ಅಂಗಡಿಗಳು- 5,318

* ತಪಾಸಣೆ ನಡೆಸಿದ ಬೀದಿಬದಿ ವ್ಯಾಪಾರಿಗಳು- 2,840

* ವಶಪಡಿಸಿಕೊಂಡಿರುವ ಪ್ಲಾಸ್ಟಿಕ್ ಪ್ರಮಾಣ ಕೆ.ಜಿಗಳಲ್ಲಿ- 10,511.5

* ನೋಟಿಸ್ ನೀಡಿರುವ ಸಂಖ್ಯೆ- 1,108

* ವಿಧಿಸಿದ ದಂಡ- 21,30,230

ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಹಾಗೂ ಇನ್ನಿತರ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯವಾಗಿ ಅನೇಕ ಉತ್ಪಾದಕರು ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಆದರೆ, ಈ ಬಗ್ಗೆ ವ್ಯಾಪಾರಿಗಳಿಗೆ ಮತ್ತು ನಾಗರಿಕರಿಗೆ ಪರಿಚಯವಿಲ್ಲ. ಹಾಗಾಗಿ, ಬಿಬಿಎಂಪಿ ವತಿಯಿಂದ ಗ್ರಾಹಕರ ಮತ್ತು ಮಾರಾಟಗಾರರ ಮೇಳ ಆಯೋಜನೆ ಚಿಂತನೆ ಮಾಡಲಾಗಿದೆ. ಪ್ಲಾಸ್ಟಿಕ್ ಸಮಸ್ಯೆಗೂ ಪರಿಹಾರ ಸಿಗಲಿದೆ.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News