ಏಕ ಭಾಷೆ ಹೇರಿಕೆಗೆ ಪ್ರತಿರೋಧ ಅಗತ್ಯ

Update: 2019-07-23 18:38 GMT

ಭಾರತ ಎಂಬುದು ಹಲವಾರು ಜನಾಂಗಗಳ, ಧರ್ಮಗಳ, ಸಂಸ್ಕೃತಿಗಳ, ಭಾಷೆಗಳ ಒಕ್ಕೂಟ. ಹೀಗೆಂದು ನಮ್ಮ ಸಂವಿಧಾನ ಹೇಳುತ್ತದೆ. ಅನೇಕತೆಯಲ್ಲಿ ಏಕತೆ ಈ ನೆಲದ ಜೀವನಾಡಿ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎಲ್ಲರೂ ಸಮಾನರು. ಭಾಷೆಗಳ ವಿಷಯದಲ್ಲೂ ಇದೇ ಮಾತನ್ನು ನಮ್ಮ ಸಂವಿಧಾನ ಹೇಳುತ್ತದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳೂ ಸಮಾನ ಎಂದು ಸಂವಿಧಾನ ಹೇಳುತ್ತದೆ. ಆದರೆ ಈ ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ದೇಶದ ಮೇಲೆ ಹೇರುವ ಹುನ್ನಾರ ನಡೆಯುತ್ತಲೇ ಇದೆ.

ಇತ್ತೀಚೆಗೆ ತಮಿಳುನಾಡಿನಲ್ಲಿ ಅಂಚೆ ಇಲಾಖೆಯ ನೇಮಕಾತಿ ಪರೀಕ್ಷೆಗಳನ್ನು ಕೇಂದ್ರ ಸರಕಾರ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಡೆಸಿತು. ಆಯಾ ರಾಜ್ಯಗಳ ಅಂಚೆ ಇಲಾಖೆಯ ಪೋಸ್ಟ್‌ಮ್ಯಾನ್ ಮತ್ತು ಪೋಸ್ಟ್ ಮಾಸ್ಟರ್ ಹಾಗೂ ಇತರ ಹುದ್ದೆಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸುತ್ತಾ ಬಂದಿದ್ದ ಕೇಂದ್ರ ಸರಕಾರ ತನ್ನ ಮುಂಚಿನ ನೀತಿಗೆ ವಿದಾಯ ಹೇಳಿದೆ. ತಮಿಳುನಾಡಿನಲ್ಲಿ ಇತ್ತೀಚೆಗೆ ತಮಿಳು ಭಾಷೆಯನ್ನು ಕೈ ಬಿಟ್ಟು ಕೇವಲ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಪರೀಕ್ಷೆ ನಡೆಸಿತು. ಆದರೆ ಹಿಂದಿ ಹೇರಿಕೆಯನ್ನು ಪೆರಿಯಾರ್, ಅಣ್ಣಾದೊರೈ ಕಾಲದಿಂದಲೂ ವಿರೋಧಿಸುತ್ತ ಬಂದಿದ್ದ ತಮಿಳುನಾಡಿನ ಜನತೆ ಈ ಹಿಂದಿ ಹೇರಿಕೆಯನ್ನು ಒಕ್ಕೊರಲಿನಿಂದ ವಿರೋಧಿಸಿದರು. ತಮಿಳು ಜನತೆಯ ಈ ಒತ್ತಡಕ್ಕೆ ಮಣಿದ ಕೇಂದ್ರ ಸರಕಾರ ಕೊನೆಗೆ ಆ ಪರೀಕ್ಷೆಗಳನ್ನೇ ರದ್ದು ಪಡಿಸಿತು.ಅಷ್ಟೇ ಅಲ್ಲ, ಹಿಂದಿನಂತೆ ರಾಜ್ಯ ಭಾಷೆಯಲ್ಲೇ ಪರೀಕ್ಷೆಗಳನ್ನು ನಡೆಸುವುದಾಗಿ ಪ್ರಕಟಿಸಿದೆ.ತಮಿಳುನಾಡಿನ ಜನತೆ ತಮ್ಮ ನೆಲದ ಭಾಷೆಯನ್ನು ಉಳಿಸಿಕೊಳ್ಳಲು ನಡೆಸಿದ ಚಾರಿತ್ರಿಕ ಹೋರಾಟದಿಂದ ಕನ್ನಡಿಗರೂ ಪಾಠ ಕಲಿಯಬೇಕಾಗಿದೆ.

ಇತ್ತೀಚಿನ ವರ್ಷಗಳಲ್ಲಿ ‘ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ’ ಎಂಬ ಹುಚ್ಚು ಕೆಲವರಿಗೆ ಹಿಡಿದಿದೆ. ಭಾರತದ ವೈವಿಧ್ಯವನ್ನು ನಾಶ ಮಾಡಿ ಏಕ ಧರ್ಮ, ಏಕ ಭಾಷೆಯನ್ನು ದೇಶದ ಮೇಲೆ ಹೇರುವ ಹುನ್ನಾರ ನಡೆದಿದೆ. ಈ ಹುನ್ನಾರದ ಭಾಗವಾಗಿಯೇ ಹಿಂದಿಯೇತರ ಭಾಷೆಗಳ ಮೇಲೆ ಬಲವಂತವಾಗಿ ಹಿಂದಿಯನ್ನು ಹೇರುವ ಮಸಲತ್ತು ನಡೆಯುತ್ತಿದೆ. ಜ್ಞಾನ ಸಂಪಾದನೆಗಾಗಿ ಯಾವುದೇ ಭಾಷೆಯನ್ನು ಕಲಿಯಲು ಯಾರ ಅಭ್ಯಂತರವೂ ಇಲ್ಲ, ಆದರೆ ಒಂದು ಹಿಡನ್ ಅಜೆಂಡಾ ಇಟ್ಟುಕೊಂಡು ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಹೇರುವ ಹುನ್ನಾರವನ್ನು ಎಲ್ಲರೂ ವಿರೋಧಿಸಬೇಕಾಗಿದೆ.ಇದಕ್ಕಾಗಿ ‘ಹಿಂದಿ ರಾಷ್ಟ್ರಭಾಷೆ’ ಎಂಬ ತಪ್ಪುಕಲ್ಪನೆಯನ್ನು ಮೂಡಿಸಲಾಗಿದೆ. ಇದನ್ನು ಮೊದಲಿನಿಂದ ವಿರೋಧಿಸುತ್ತ್ತಾ ಬಂದ ತಮಿಳುನಾಡು ಈ ಬಾರಿಯೂ ಹೋರಾಡಿ ತನ್ನ ಭಾಷೆಯನ್ನು ಕಾಪಾಡಿಕೊಂಡಿದೆ.

ಯಾವುದೇ ಒಂದು ಧರ್ಮವನ್ನು ರಾಷ್ಟ್ರ ಧರ್ಮ ಎಂದು ಹೇಳುವುದನ್ನು, ಐದಾರು ರಾಜ್ಯಗಳ ಜನ ಮಾತಾಡುವ ಭಾಷೆಯನ್ನು ರಾಷ್ಟ್ರ ಭಾಷೆಯೆಂದು ಇಡೀ ದೇಶದ ಮೇಲೆ ಹೇರುವುದು ಸರಿಯಲ್ಲ. ಹೀಗೆ ಮಾಡುವುದರಿಂದ ಭಾರತ ಒಂದಾಗಿ ಉಳಿಯುವುದಿಲ್ಲ, ಅದರ ಬದಲಾಗಿ ಎಲ್ಲ ಜನರಾಡುವ ಭಾಷೆಗಳನ್ನು, ಸಂಸ್ಕೃತಿಗಳನ್ನು ಅವರ ಭಾವನೆಗಳನ್ನು ಗೌರವಿಸಿದರೆ ಈ ದೇಶ ಒಂದಾಗಿ ಉಳಿಯುತ್ತದೆ. ಕೇಂದ್ರ ಸರಕಾರ ರೈಲ್ವೆ, ಅಂಚೆ ಹಾಗೂ ಬ್ಯಾಂಕಿಂಗ್ ಮುಂತಾದ ಸೇವೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತ್ರ ಕಡ್ಡಾಯಗೊಳಿಸಿದರೆ ಪ್ರಾದೇಶಿಕ ಭಾಷೆಗಳನ್ನು ಮಾತ್ರ ಬಲ್ಲ ಜನಸಾಮಾನ್ಯರು ಎಲ್ಲಿಗೆ ಹೋಗಬೇಕು? ಆದ್ದರಿಂದಲೇ ತಮಿಳುನಾಡಿನ ಜನತೆ ತಮ್ಮ ಭಾಷಾ ಆಸ್ಮಿತೆಗಾಗಿ ಹೋರಾಡುತ್ತ್ತಾ ಬಂದಿದ್ದಾರೆ. ನೆಲದ ಭಾಷೆಯನ್ನು ಉಳಿಸಿಕೊಳ್ಳಲು ಕನ್ನಡಿಗರೂ ಹೋರಾಟ ಮಾಡದಿದ್ದರೆ ಕನ್ನಡದ ಅಸ್ತಿತ್ವಕ್ಕೆ ಗಂಡಾಂತರ ಬರುತ್ತದೆ ಎಂಬುದನ್ನು ಮರೆಯಬಾರದು.

 ಭಾಷಾ ಸಮಾನತೆಯ ವಿಷಯದಲ್ಲಿ ಕರ್ನಾಟಕ ಇತ್ತೀಚೆಗೆ ಎಚ್ಚ್ಚೆತ್ತಿದ್ದರೂ ಅದು ಸಾಲದು.ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಮೆಟ್ರೊದಲ್ಲಿ ಕನ್ನಡಕ್ಕೆ ಗೌರವ ದೊರಕಿಸಲು ಕೈಗೊಂಡ ಕ್ರಮಗಳು ಶ್ಲಾಘನೀಯವಾಗಿವೆ. ಜನರ ಹೋರಾಟದ ಫಲವಾಗಿ ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಕ್ಕೂ ಸ್ಥಾನ ದೊರಕಿದೆ. ಆದರೆ ತಮಿಳುನಾಡಿಗೆ ಹೋಲಿಸಿದರೆ ನಮ್ಮ ಕನ್ನಡ ಪರ ಹೋರಾಟ ಸಾಧಿಸಿದ್ದು ಕಡಿಮೆ. ಇಂದಿಗೂ ಕೇಂದ್ರ ಸರಕಾರದ ಕಚೇರಿಗಳಲ್ಲಿ ಹಿಂದಿ ಇಂಗ್ಲಿಷ್ ಬಳಕೆ ಧಾರಾಳವಾಗಿದೆ. ರೈಲು ನಿಲ್ದಾಣಗಳಲ್ಲಿ, ರಿಸರ್ವೇಶನ್ ಫಾರಂಗಳಲ್ಲಿ ಕನ್ನಡಕ್ಕೆ ಸ್ಥಾನವಿಲ್ಲ. ಮುಂಚೆ ಇದ್ದ ಕನ್ನಡವನ್ನು ಕಿತ್ತು ಹಾಕಿ ಇಂಗ್ಲಿಷ್ ಮತ್ತು ಹಿಂದಿಯನ್ನು ಮಾತ್ರ ಹೇರಲಾಗಿದೆ. ಇದು ಸರಿಯಲ್ಲ. ಕರ್ನಾಟಕದಲ್ಲಿ ರೈಲ್ವೆಯ ಎಲ್ಲ ವ್ಯವಹಾರಗಳೂ ಕನ್ನಡದಲ್ಲೇ ನಡೆಯಬೇಕು.

ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ಭಾಷೆಯ ವಿಷಯದಲ್ಲಿ ಹಿಂದಿಯೇತರ ರಾಜ್ಯಗಳನ್ನು ಕೆರಳಿಸುವ ಯತ್ನಕ್ಕೆ ಕೈ ಹಾಕಬಾರದು. ಅದು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸಬೇಕೇ ಹೊರತು ನಾಗಪುರದ ಅಗೋಚರ ಅಧಿಕಾರ ಕೇಂದ್ರದ ಅಣತಿಯಂತಲ್ಲ. ಹೀಗೆ ಮನಬಂದಂತೆ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯೆಂದು ಹೇರುವುದನ್ನು ಮುಂದುವರಿಸಿದರೆ ದೇಶದಲ್ಲಿ ಪ್ರತ್ಯೇಕತಾವಾದ ಬೆಳೆಯುತ್ತದೆ. ಅದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು.

ಕರ್ನಾಟಕ ತಮಿಳುನಾಡಿನಿಂದ ಕಲಿಯುವುದು ಸಾಕಷ್ಟಿದೆ. ತಮ್ಮ ಭಾಷೆಗಾಗಿ ತಮ್ಮ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ತಮಿಳುನಾಡಿನ ಜನ ಸಮುದಾಯಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ಮತಭೇದ ಮರೆತು ಹೋರಾಡುತ್ತವೆ. ಆದರೆ ಅಂತಹ ಬದ್ಧತೆ ಕರ್ನಾಟಕದಲ್ಲಿ ಕಂಡು ಬರುತ್ತಿಲ್ಲ.

ಕಾವೇರಿ ವಿವಾದದ ಪ್ರಶ್ನೆ ಇರಲಿ, ಮಹಾದಾಯಿ ಸಮಸ್ಯೆ ಇರಲಿ, ನಾವು ಕನ್ನಡದ ಜನ ಪಟ್ಟು ಹಿಡಿದು ಹೋರಾಡಲಿಲ್ಲ. ಕೇಂದ್ರ ಸರಕಾರಕ್ಕೆ ಚುರುಕು ಮುಟ್ಟಿಸಲಿಲ್ಲ, ಅಂತಲೇ ನಮಗೆ ಅನ್ಯಾಯವಾಗುತ್ತಲೇ ಇದೆ.

ಕರ್ನಾಟಕದ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು, ಒತ್ತಡ ತರಲು ದಿಲ್ಲಿಯಲ್ಲಿ ತಮಿ ುನಾಡಿನ ರೀತಿ ಕರ್ನಾಟಕದ ಲಾಬಿಯಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಗೆ ಹೋಗುವ ನಮ್ಮ ಜನಪ್ರತಿನಿಧಿಗಳು ಸದನದಲ್ಲಿ ಮಾತಾಡುವುದು ಕಡಿಮೆ. ಅಲ್ಲಿ ರಾಜ್ಯದ ಪರವಾಗಿ ಲಾಬಿಯೂ ಇಲ್ಲ. ಹೀಗಾಗಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಈಗಲಾದರೂ ಕನ್ನಡದ ಜನತೆ ಮೈ ಕೊಡವಿ ಎದ್ದು ನಿಲ್ಲಬೇಕಾಗಿದೆ. ಧ್ವನಿಯೇರಿಸಿ ಕೂಗಿದರೆ ಮಾತ್ರ ಕೇಂದ್ರ ಸರಕಾರದ ಗಮನ ಸೆಳೆಯಬಹುದು. ಈ ನಿಟ್ಟಿನಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಗ್ಗೂಡಿ ಧ್ವನಿಯೆತ್ತಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News