ಅತೃಪ್ತರು ತೃಪ್ತರಾಗಿದ್ದಾರೆ, ನಾನು ತೃಪ್ತಿಯಾಗಿದ್ದೇನೆ: ರಮೇಶ್‌ ಕುಮಾರ್

Update: 2019-07-24 12:19 GMT

ಬೆಂಗಳೂರು, ಜು. 24: ರಾಜ್ಯದಲ್ಲಿ ಈಗ ಎಲ್ಲ ಮುಗಿದಿದೆ. ಅತೃಪ್ತರು ತೃಪ್ತಿಯಾಗಿದ್ದಾರೆ. ನಾನು ತೃಪ್ತಿಯಾಗಿದ್ದೇನೆ. ನೀವು ತೃಪ್ತಿಯಾಗಿದ್ದೀರಿ, ಇನ್ನು ಮುಂದಿನ ಕ್ರಮವಷ್ಟೆ ಉಳಿದಿದೆ ಎಂದು ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್ ತಿಳಿಸಿದ್ದಾರೆ.

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೂತನ ಸರಕಾರ ರಚನೆಯಲ್ಲಿ ನನ್ನ ಪಾತ್ರವೇನು ಇಲ್ಲ. ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸುತ್ತಾರೆ. ಅವರ ಆದೇಶದ ಪ್ರಕಾರ ನಡೆಯುತ್ತದೆ ಎಂದು ಇದೇ ವೇಳೆ ತಿಳಿಸಿದರು.

ರಾಜೀನಾಮೆ ನೀಡಿರುವ ಶಾಸಕರ ಅನರ್ಹತೆ ಬಗ್ಗೆ ಕಾನೂನು ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇನೆ. ಒಬ್ಬ ಶಾಸಕರು ಇಂದು ಸಮಯ ಕೋರಿದ್ದು, ಕಚೇರಿಗೆ ಹೋಗುತ್ತಿದ್ದೇನೆ. ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆಂದು ನೋಡಿ ಸಂವಿಧಾನದ ಕಾನೂನು ಪ್ರಕಾರ ತೀರ್ಮಾನ ತೆಗೆದುಕೊಳ್ಳುತ್ತೇನೆಯೇ ಹೊರತು ಕಾನೂನಿಗೆ ವಿರುದ್ಧವಾಗಿ ಹೋಗುವುದಿಲ್ಲ ಎಂದರು.

ನಿನ್ನೆ ನನ್ನ ಕಚೇರಿಗೆ ಅತೃಪ್ತ ಶಾಸಕರ ಪರ ವಕೀಲರು ಬಂದು ಅವರವರ ಕಕ್ಷಿದಾರರ ಪರ ಹೇಳಬೇಕಾದ್ದನ್ನು ಹೇಳಿದ್ದಾರೆ. ಎಲ್ಲವನ್ನೂ ನಾನು ಕೇಳಿದ್ದೇನೆ. ಅವೆಲ್ಲವನ್ನೂ ಪರಿಶೀಲಿಸಿ ಕಾನೂನು ಏನು ಹೇಳುತ್ತದೆ, ಜನ ಏನು ಬಯಸುತ್ತಾರೆ, ಈ ಶಾಸನವನ್ನು ದೇಶದಲ್ಲಿ ಯಾಕೆ ಮಾಡಿದ್ದಾರೆಂದು ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ನಾನು ಯಾವಾಗಲೂ ಜನರ ನಿರೀಕ್ಷೆಗೆ ಸ್ಪಂದಿಸುವವನು. ಇಂತಹ ಕಾನೂನು ಏಕೆ ಬೇಕಾಯಿತು, ಕಾನೂನು ಜಾರಿಗೆ ಬಂದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯೇ ಇಲ್ಲವೇ ಎಂದು ನೋಡಿಕೊಂಡು, ನಾವು ಹೇಗೆ ನಡೆದುಕೊಂಡರೆ ಜನ ಗೌರವಿಸುತ್ತಾರೆ, ಪ್ರೀತಿಸುತ್ತಾರೆಂದು ನೋಡಿಕೊಂಡು ಅದರ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.

‘ಸ್ಪೀಕರ್ ಸ್ಥಾನ ನನಗೆ ಯಾವಾಗಲೂ ತೃಪ್ತಿ ನೀಡುತ್ತದೆ, ನಾನು ಸರಕಾರ ಅಥವಾ ವಿಪಕ್ಷದ ಕಡೆಗೂ ನೋಡುವುದಿಲ್ಲ, ಜನರ ಹಿತ ನೋಡುತ್ತೇನೆ. ನಿಯಮ ಬಿಟ್ಟು ಹೋಗುವಂತಿಲ್ಲ. ಸದನದಲ್ಲಿ ಸದಸ್ಯರಿಗೆ ಬುದ್ಧಿವಾದ ಹೇಳುತ್ತೇನೆ. ಒಂದು ವೇಳೆ ಬೈಯುತ್ತೇನೆ, ಇನ್ನೂಂದು ವೇಳೆ ಶಹಬ್ಬಾಸ್ ಗಿರಿ ಕೊಡುತ್ತೇನೆ. ಜನಪರ ಕೆಲಸ ಮಾಡುತ್ತೇನೆ’

-ರಮೇಶ್‌ ಕುಮಾರ್, ಹಂಗಾಮಿ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News