ಹಿಂದಿನ ಸರಕಾರಗಳು ಸುಳ್ಳು ಹೇಳಿದ್ದವು, ದೇಶದಲ್ಲಿ 40 ಉಗ್ರ ಸಂಘಟನೆಗಳಿವೆ: ಪಾಕ್ ಪ್ರಧಾನಿ ಇಮ್ರಾನ್

Update: 2019-07-24 15:44 GMT

 ವಾಶಿಂಗ್ಟನ್, ಜು. 24: ತರಬೇತಿ ಪಡೆದ ಹಾಗೂ ಅಫ್ಘಾನಿಸ್ತಾನ ಅಥವಾ ಕಾಶ್ಮೀರದ ಯಾವುದೋ ಒಂದು ಭಾಗದಲ್ಲಿ ಯುದ್ಧ ಮಾಡಿದ ಸುಮಾರು 30,000ದಿಂದ 40,000 ಭಯೋತ್ಪಾದಕರು ನನ್ನ ದೇಶದಲ್ಲಿದ್ದಾರೆ ಎಂಬ ಭಯಾನಕ ಸಂಗತಿಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನದ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಗುಂಪುಗಳು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿವೆ ಎಂಬ ಭಾರತದ ಆರೋಪಗಳನ್ನು ಪಾಕ್ ಪ್ರಧಾನಿಯ ಈ ಹೇಳಿಕೆ ಸಮರ್ಥಿಸಿದೆ.

ನನ್ನ ದೇಶದಲ್ಲಿ ಸಕ್ರಿಯವಾಗಿದ್ದ ಭಯೋತ್ಪಾದಕ ಗುಂಪುಗಳ ವಿರುದ್ಧ ಕಾರ್ಯಾಚರಿಸುವ ರಾಜಕೀಯ ಸಂಕಲ್ಪ ಹಿಂದಿನ ಸರಕಾರಗಳಿಗೆ ಇರಲಿಲ್ಲ ಎಂದು ಇಲ್ಲಿನ ‘ಯುಎಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್’ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಇಮ್ರಾನ್ ಹೇಳಿದರು.

 ‘‘ನಾವು ಅಧಿಕಾರಕ್ಕೆ ಬರುವವರೆಗೆ ಸರಕಾರಗಳಿಗೆ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ. ನಮ್ಮಲ್ಲಿ ಈಗಲೂ 30,000ದಿಂದ 40,000ದಷ್ಟು ಶಸ್ತ್ರಧಾರಿ ಭಯೋತ್ಪಾದಕರಿದ್ದಾರೆ. ಅವರು ತರಬೇತಿ ಪಡೆದವರು ಹಾಗೂ ಅಫ್ಘಾನಿಸ್ತಾನದ ಯಾವುದೋ ಒಂದು ಭಾಗದಲ್ಲಿ ಅಥವಾ ಕಾಶ್ಮೀರದಲ್ಲಿ ಯುದ್ಧ ಮಾಡಿದವರು’’ ಎಂದು ಪಾಕ್ ಪ್ರಧಾನಿ ಹೇಳಿದರು.

 ಭಯೋತ್ಪಾದಕ ಗುಂಪುಗಳನ್ನು ನಿಶ್ಶಸ್ತ್ರಗೊಳಿಸಲು ಆರಂಭಿಸಿದ ಮೊದಲ ಸರಕಾರದ ನನ್ನದು ಎಂದು ಅವರು ನುಡಿದರು.

‘‘ಹೀಗೆ ಮೊದಲ ಬಾರಿಗೆ ಆಗುತ್ತಿದೆ. ನಾವು ಅವರ ಸಂಸ್ಥೆಗಳು, ಅವರ ಪ್ರವಚನ ಕೇಂದ್ರಗಳನ್ನು ವಹಿಸಿಕೊಂಡಿದ್ದೇವೆ. ಅಲ್ಲಿ ನಾವು ಆಡಳಿತಾಧಿಕಾರಿಗಳನ್ನು ನೇಮಿಸಿದ್ದೇವೆ’’ ಎಂದರು.

► ಪಾಕ್ ಸರಕಾರಗಳು ಅಮೆರಿಕಕ್ಕೆ ಸತ್ಯ ಹೇಳಿಲ್ಲ: ಇಮ್ರಾನ್

ಒಂದರ ನಂತರ ಒಂದರಂತೆ ಬಂದ ಪಾಕಿಸ್ತಾನದ ಸರಕಾರಗಳು, ಅದರಲ್ಲೂ ಮುಖ್ಯವಾಗಿ ಕಳೆದ 15 ವರ್ಷಗಳ ಅವಧಿಯಲ್ಲಿ ಬಂದ ಸರಕಾರಗಳು ಅಮೆರಿಕಕ್ಕೆ ಸತ್ಯ ಹೇಳಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹೇಳಿದ್ದಾರೆ.

  ‘‘ಭಯೋತ್ಪಾದಕರ ವಿರುದ್ಧದ ಅಮೆರಿಕದ ಹೋರಾಟವನ್ನು ನಾವು ಹೋರಾಡುತ್ತಿದ್ದೇವೆ. 9/11 ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಅಲ್-ಖಾಯಿದ ಅಫ್ಘಾನಿಸ್ತಾನದಲ್ಲಿತ್ತು. ಪಾಕಿಸ್ತಾನದಲಿ ಭಯೋತ್ಪಾದಕ ತಾಲಿಬಾನ್ ಇರಲಿಲ್ಲ. ಆದರೆ, ನಾವು ಅಮೆರಿಕದ ಯುದ್ಧದಲ್ಲಿ ಕೈಜೋಡಿಸಿದೆವು. ದುರದೃಷ್ಟವಶಾತ್, ನಾವು ಎಣಿಸಿದಂತೆ ನಡೆಯಲಿಲ್ಲ. ಇದಕ್ಕೆ ನಾನು ನಮ್ಮ ಸರಕಾರಗಳನ್ನು ದೂಷಿಸುತ್ತೇನೆ. ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ನಿಖರವಾಗಿ ಅಮೆರಿಕಕ್ಕೆ ಹೇಳಲಿಲ್ಲ’’ ಎಂದು ಅವರು ಹೇಳಿದರು.

ವಾಶಿಂಗ್ಟನ್‌ನ ಕ್ಯಾಪಿಟೋಲ್ ಹಿಲ್‌ನಲ್ಲಿ ಕಾಂಗ್ರೆಶ್ಶನಲ್ ಪಾಕಿಸ್ತಾನ್ ಕಾಕಸ್‌ನ ಅಧ್ಯಕ್ಷೆ ಹಾಗೂ ಸಂಸದೆ ಶೈಲಾ ಜಾಕ್ಸನ್ ಲೀ ಏರ್ಪಡಿಸಿದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಇದಕ್ಕೆ ಒಂದು ಕಾರಣ ಏನೆಂದರೆ, ಪಾಕಿಸ್ತಾನಿ ಸರಕಾರಗಳು ನಿಯಂತ್ರಣ ಹೊಂದಿರಲಿಲ್ಲ ಎಂದು ಇಮ್ರಾನ್ ಹೇಳಿದರು.

► 40 ಉಗ್ರ ಗುಂಪುಗಳು ಸಕ್ರಿಯ

‘‘40 ಭಯೋತ್ಪಾದಕ ಗುಂಪುಗಳು ಪಾಕಿಸ್ತಾನದಲ್ಲಿ ಸಕ್ರಿಯವಾಗಿದ್ದವು. ಇದರಿಂದ ಪಾಕಿಸ್ತಾನ ಉಳಿಯಬಹುದೇ ಎಂಬುದಾಗಿ ನಮ್ಮಂಥ ಜನರು ಯೋಚಿಸಲು ಆರಂಭಿಸಿದ ದಿನಗಳಿದ್ದವು. ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕು ಹಾಗೂ ಯುದ್ಧದಲ್ಲಿ ಜಯಿಸಲು ಪಾಕಿಸ್ತಾನ ಅಮೆರಿಕಕ್ಕೆ ಸಹಾಯ ಮಾಡಬೇಕು ಎಂದು ಅಮೆರಿಕ ಬಯಸುತ್ತಿದ್ದಾಗ, ಪಾಕಿಸ್ತಾನ ತನ್ನದೇ ಅಸ್ತಿತ್ವಕ್ಕಾಗಿ ಹೋರಾಡುತ್ತಿತ್ತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News