ತಟಸ್ಥರಾಗಿರುವಂತೆ ಸೂಚನೆ ಇದ್ದ ಕಾರಣ ಸದನಕ್ಕೆ ಗೈರು: ಶಾಸಕ ಎನ್.ಮಹೇಶ್

Update: 2019-07-24 12:34 GMT

ಬೆಂಗಳೂರು, ಜು.24: ಮೈತ್ರಿ ಸರಕಾರದ ಅಳಿವು-ಉಳಿವಿನ ವಿಶ್ವಾಸ ಮತಯಾಚನೆ ದಿನ ಯಾರ ಸಂಪರ್ಕವೂ ಇರಲಿಲ್ಲ. ಎರಡು ದಿನಗಳ ಧ್ಯಾನದಲ್ಲಿ ನಿರತವಾಗಿದ್ದೆ. ಅಷ್ಟೇ ಅಲ್ಲದೆ, ಪಕ್ಷದಿಂದ ಉಚ್ಚಾಟಿಸಿರುವ ವಿಷಯವೂ ನನಗೆ ಮುಟ್ಟಿರಲಿಲ್ಲ ಎಂದು ಬಿಎಸ್ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್ ಹೇಳಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಾಸ ಮತಯಾಚನೆ ಪ್ರಕ್ರಿಯೆ ಸಂದರ್ಭದಲ್ಲಿ ಸದನಕ್ಕೆ ಹಾಜರಾಗದ ಹಿನ್ನೆಲೆ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಮಾಹಿತಿಯೂ ಇರಲಿಲ್ಲ. ನನ್ನ ಮೊಬೈಲ್ ಸಹ ಬಂದ್ ಆಗಿತ್ತು ಎಂದು ನುಡಿದರು.

ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಕ್ಕೆ ಬೆಂಬಲ ನೀಡಿದ್ದೆವು. ಆಗ ನನಗೆ 4 ತಿಂಗಳುಗಳ ಕಾಲ ಸಚಿವ ಸ್ಥಾನ ಕೂಡ ನೀಡಿದ್ದರು. ಆದರೆ, ಆ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇರೆಗೆ ರಾಜೀನಾಮೆ ನೀಡಿದ್ದೆ. ಅಷ್ಟೇ ಅಲ್ಲದೆ, ವಿಶ್ವಾಸ ಮತಯಾಚನೆ ಹಿನ್ನೆಲೆ ನನಗೆ ತಟಸ್ಥರಾಗಿರುವಂತೆ ಹೇಳಿದ್ದರು. ಆದ್ದರಿಂದ, ಕ್ಷೇತ್ರದಿಂದ ಹೊರಗೆ ಹೋಗಿದ್ದೆ ಎಂದು ತಿಳಿಸಿದರು.

ಜು.15ರ ವರೆಗೂ ಕ್ಷೇತ್ರದಲ್ಲೇ ವಾಸ್ತವ್ಯ ಇದ್ದು, ಜನಸಂಕರ್ಪ ಸಭೆಗಳನ್ನು ನಡೆಸಲಾಗಿತ್ತು ಎಂದ ಅವರು, ವಿಧಾನಸೌಧದಲ್ಲಿ ನನಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲು ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೆ. ಪಕ್ಷದ ರಾಜ್ಯ ಉಸ್ತುವಾರಿ ಡಾ.ಅಶೋಕ್ ಸಿದ್ಧಾರ್ಥ ಅವರಿಗೂ ಈ ಬಗ್ಗೆ ಮಾಹಿತಿ ನೀಡಿ ವಿಶ್ವಾತ ಮತಯಾಚನೆ ಬಗ್ಗೆಯೂ ಚರ್ಚೆ ನಡೆಸಿದ್ದೆ. ಈ ಸಂದರ್ಭದಲ್ಲಿ ನನಗೆ ತಟಸ್ಥರಾಗಿರುವಂತೆ ಸೂಚನೆ ನೀಡಿದ್ದ ಕಾರಣ ಸದನಕ್ಕೆ ಗೈರಾಗುವ ಬಗ್ಗೆ ಮಾಹಿತಿ ನೀಡಿದ್ದೆ ಎಂದು ಮಹೇಶ್ ವಿವರಿಸಿದರು.

ಜು.16ರ ಬಳಿಕ ನಾನು ಕ್ಷೇತ್ರದಿಂದ ಹೊರ ಹೋಗಿದ್ದೆ, ಈ ಸಂದರ್ಭದಲ್ಲಿ ಮೊಬೈಲ್ ಬಂದ್ ಆಗಿತ್ತು. ಪಕ್ಷದ ಸೂಚನೆಯಂತೆ ತಟಸ್ಥರಾಗಿಯೇ ಇದ್ದರೂ ಕೂಡ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಇಲ್ಲಿ ಬಂದ ಮೇಲೆ ನನಗೆ ಅವರು ಟ್ವೀಟ್ ಮಾಡಿರುವ ಮಾಹಿತಿ ಲಭಿಸಿತು. ನಾನು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿಲ್ಲ. ಸಂವಹನ ಕೊರತೆಯಿಂದಾಗಿ ಈ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಕೂಡ ಸರಿ ಹೋಗಲಿದೆ. ನಾನು ಪಕ್ಷದ ಸದಸ್ಯನಾಗಿಯೇ ಮುಂದುವರಿಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಗೆ ಬೆಂಬಲ ಇಲ್ಲ

ಮುಂದಿನ ಅವಧಿಯಲ್ಲಿ ತಟಸ್ಥರಾಗಿಯೇ ಉಳಿಯುತ್ತೇನೆಯೇ ಹೊರತು ಬಿಜೆಪಿಗೆ ಬೆಂಬಲ ನೀಡುವುದಿಲ್ಲ. ಇನ್ನು, ಆಪರೇಷನ್ ಕಮಲಕ್ಕೆ ಒಳಗಾಗಿದ್ದೇನೆ ಎಂಬುದೆಲ್ಲ ನಾನ್‌ಸೆನ್ಸ್.

-ಎನ್.ಮಹೇಶ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News