ರಾಜ್ಯ ರಾಜಧಾನಿಯಲ್ಲಿ ಮಾರಕ ಡೆಂಗ್ ಉಲ್ಬಣ: ಬಿಬಿಎಂಪಿಯ 23 ವಾರ್ಡ್‌ಗಳು ಸೂಕ್ಷ್ಮ ಪ್ರದೇಶ

Update: 2019-07-24 17:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.24: ರಾಜಧಾನಿಯಲ್ಲಿ ಮಾರಕ ಡೆಂಗ್ ಜ್ವರ ಉಲ್ಬಣಗೊಂಡಿದ್ದು, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 23 ವಾರ್ಡ್‌ಗಳನ್ನು ಡೆಂಗ್ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದೆ.

ಮುಂಗಾರು ಆರಂಭದೊಂದಿಗೆ ನಗರದಲ್ಲಿ ಜ್ವರ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಜುಲೈ ತಿಂಗಳಲ್ಲೆ ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 125 ಶಂಕಿತರಲ್ಲಿ 22 ಮಂದಿಗೆ, ಜಯನಗರ ಜನರಲ್ ಆಸ್ಪತ್ರೆಯಲ್ಲಿ 68 ಶಂಕಿತರಲ್ಲಿ 13 ಮಂದಿಗೆ ಡೆಂಗ್ ಇರುವುದು ದೃಢಪಟ್ಟಿದೆ.

ವಿಕ್ಟೋರಿಯಾ, ಬೌರಿಂಗ್ ಮತ್ತು ಲೇಡಿ ಕರ್ಜನ್ ಸೇರಿದಂತೆ ನಗರದ ನಾನಾ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಶಂಕಿತ ಡೆಂಗ್ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಡೆಂಗ್ ಸೂಕ್ಷ್ಮ ಪ್ರದೇಶಗಳಲ್ಲಿ ರೋಗ ನಿಯಂತ್ರಣಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳಲು ಹೆಚ್ಚುವರಿ ಗ್ಯಾಂಗ್‌ಮೆನ್, ಲಿಂಕ್ ವರ್ಕರ್ಸ್ಸ್‌ಗಳನ್ನು ಬಿಬಿಎಂಪಿ ನಿಯೋಜಿಸಿದೆ. ಜತೆಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರಕ್ಕಾಗಿ ಹೆಚ್ಚುವರಿ ಆಟೋಗಳನ್ನು ಒದಗಿಸಲಾಗಿದೆ. ಟೆಮಿಫಾಸ್ ರಾಸಾಯನಿಕವನ್ನು ಸಿಂಪಡಿಸಿ ಸೊಳ್ಳೆ ಲಾರ್ವಗಳನ್ನು ನಾಶಪಡಿಸಲಾಗುತ್ತಿದೆ. ಅಲ್ಲದೆ, ಸಾಂಕ್ರಾಮಿಕ ರೋಗಗಳ ತಡೆಗೆ ವೈದ್ಯಾಧಿಕಾರಿಗಳು, ಕ್ಷೇತ್ರ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ.

ಸಮನ್ವಯದ ಕೊರತೆ: ನಗರದಲ್ಲಿ ನಾಲ್ಕು ದಿನಗಳಲ್ಲಿ 8,165 ಶಂಕಿತ ಡೆಂಗ್ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ 2,184 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ನಡೆಸಲಾಗಿದ್ದು, 442 ಮಂದಿಯಲ್ಲಿ ಡೆಂಗೆ ದೃಢಪಟ್ಟಿದೆ. ಇವರು ನಗರದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ 12 (ಒಟ್ಟು 69) ಚಿಕುನ್ ಗುನ್ಯಾ ಪ್ರಕರಣ ವರದಿಯಾಗಿದೆ. ಆದರೆ, ಬಿಬಿಎಂಪಿ ಆರೋಗ್ಯ ವಿಭಾಗದ ವರದಿಯಲ್ಲಿ ಜನವರಿಯಿಂದ ಈವರೆಗೂ 2,995 ಡೆಂಗ್ ಪ್ರಕರಣ ಕಂಡು ಬಂದಿದೆ ಎಂದು ಉಲ್ಲೇಖಿಸಲಾಗಿದೆ. ಈ ಎರಡೂ ವರದಿಗಳಿಂದ ಹಾಗೂ ಆರೋಗ್ಯ ಸೇವೆ ಒದಗಿಸುವಲ್ಲಿಯೂ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ನಡುವೆ ಸಮನ್ವಯದ ಕೊರತೆ ಇರುವುದು ಬಹಿರಂಗವಾಗಿದೆ.

ಜಾಗೃತಿ ಚಿತ್ರ: ಜನರಲ್ಲಿ ಜಾಗೃತಿ ಮೂಡಿಸಲು ಸೂಕ್ಷ್ಮ ಪ್ರದೇಶಗಳಲ್ಲಿ ಕರಪತ್ರಗಳನ್ನು ಹಂಚಲು ಬಿಬಿಎಂಪಿ ಸೂಚಿಸಿದೆ. ಆಕಾಶವಾಣಿ ಹಾಗೂ ದೂರದರ್ಶನಗಳಲ್ಲೂ ಜಾಹೀರಾತು ಮೂಲಕ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ, ಬಿಬಿಎಂಪಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪಾಲಿಕೆ ಶಾಲಾ ಗೋಡೆಗಳ ಮೇಲೆ ಡೆಂಗ್ ಕುರಿತು ಜಾಗೃತಿ ಚಿತ್ರ ಚಿತ್ರಿಸಲಾಗುತ್ತಿದೆ.

ಉಚಿತ ಬಿಳಿ ರಕ್ತಕಣ: ಡೆಂಗ್ ರೋಗಿಗಳಲ್ಲಿ ಎಲ್ಲರಿಗೂ ಬಿಳಿ ರಕ್ತಕಣ ಅಗತ್ಯ ಇರುವುದಿಲ್ಲ. ಯಾರಿಗೆ ತೀರ ಕಡಿಮೆ ಬಿಳಿ ರಕ್ತಕಣ ಇರುತ್ತದೋ ಅಂತಹವರಿಗೆ ಮಾತ್ರವೇ ನೀಡಲಾಗುವುದು. ಎಲ್ಲ ಸರಕಾರಿ ಹಾಗೂ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಬಿಳಿ ರಕ್ತಕಣವನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಆಸ್ಪತ್ರೆಗಳ ವೈದ್ಯಾಧಿಕಾರಿಗಳ ಅನುಮತಿ ಪತ್ರದೊಂದಿಗೆ, ಸರಕಾರಿ ರಕ್ತನಿಧಿಗಳಲ್ಲಿ ಬಿಪಿಎಲ್ ಕಾರ್ಡುದಾರರು ಉಚಿತವಾಗಿ ಹಾಗೂ ಎಪಿಎಲ್ ಕಾರ್ಡುದಾರರು ರಿಯಾಯಿತಿ ದರದಲ್ಲಿ ಬಿಳಿ ರಕ್ತಕಣ ಪಡೆಯಬಹುದಾಗಿದೆ.

ಸೂಕ್ಷ್ಮ ವಾರ್ಡ್‌ಗಳಲ್ಲಿ ಮನೆ ಮನೆಗೆ ಭೇಟಿ ಮಾಡಿ ಸೊಳ್ಳೆ ಲಾರ್ವಾ ಪತ್ತೆ ಹಚ್ಚಿ ನಾಶಪಡಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ವೈದ್ಯ ವಿದ್ಯಾರ್ಥಿಗಳು, ಶುಶ್ರೂಷಕರು, ಎಸ್‌ಎಸ್‌ಡಬ್ಲು ಮತ್ತು ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಬಳಸಿಕೊಳ್ಳಲಾಗುತ್ತಿದೆ.

-ಡಾ.ವಿಜಯೇಂದ್ರ, ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಸಿಇಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News