ಸರ್ವರಿಗೂ ಸಮಾನ ಶಿಕ್ಷಣವೇ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ: ಡಾ.ಕಸ್ತೂರಿ ರಂಗನ್

Update: 2019-07-25 14:36 GMT

ಬೆಂಗಳೂರು, ಜು.25: ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ಸರ್ವರಿಗೂ ಸಮಾನ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದೇ ರಾಷ್ಟ್ರೀಯ ಶಿಕ್ಷಣ ನೀತಿ-2019 ರ ಉದ್ದೇಶವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ನೂತನ ಶಿಕ್ಷಣ ನೀತಿ-2019 ಕರಡು ಸಮಿತಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಹೇಳಿದ್ದಾರೆ.

ಗುರುವಾರ ನಗರದ ಪಿಇಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2019 ಕರಡು ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರಿಗೂ ಸಮಗ್ರವಾದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಈ ನೀತಿ ರಚಿಸಲಾಗಿದೆ. ಇದಕ್ಕಾಗಿ 70 ಸಂಘ-ಸಂಸ್ಥೆಗಳೊಂದಿಗೆ ಹಾಗೂ 200 ಕ್ಕೂ ಅಧಿಕ ಶಿಕ್ಷಣ ತಜ್ಞರೊಂದಿಗೆ ಚರ್ಚೆ ನಡೆಸಿ ಕರಡು ತಯಾರಿಸಲಾಗಿದೆ ಎಂದು ವಿವರಿಸಿದರು.

ಭಾರತದಲ್ಲಿರುವ ಕಡ್ಡಾಯ ಶಿಕ್ಷಣದ ಅಡಿಯಲ್ಲಿ 6 ರಿಂದ 14 ವರ್ಷದೊಳಗಿನ ಎಲ್ಲರಿಗೂ ಕಡ್ಡಾಯ ಶಿಕ್ಷಣ ನೀಡಬೇಕಿದೆ. ಅದನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ 3 ವರ್ಷದಿಂದ 18 ವರ್ಷದೊಳಗಿನ ಎಲ್ಲರಿಗೂ ಶಿಕ್ಷಣ ಕಡ್ಡಾಯಗೊಳಿಸುವುದನ್ನು ಪ್ರಸ್ತಾಪಿಸಲಾಗಿದೆ. ಇದರಿಂದ ಮಕ್ಕಳು ಎಲ್ಲ ವಿಷಯಗಳನ್ನು ಆಳವಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.

ಈ ನೀತಿಯು ಕೇವಲ ಪ್ರಾಥಮಿಕ ಹಂತಕ್ಕೆ ಸೀಮಿತವಾಗದೇ ಉನ್ನತ ಶಿಕ್ಷಣದಲ್ಲಿಯೂ ಮಹತ್ತರವಾದ ಬದಲಾವಣೆಗೆ ಸಾಕ್ಷಿಯಾಗುತ್ತದೆ. ಪದವಿ ಮಟ್ಟದಲ್ಲಿಯೇ ಡಿಪ್ಲೊಮೋ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ತರಬೇತಿ ಕೋರ್ಸ್‌ಗಳನ್ನು ಪಡೆಯಲು ಉದ್ದೇಶಿತ ಶಿಕ್ಷಣ ನೀತಿಯಲ್ಲಿ ಇದೆ. ಉದ್ಯೋಗದ ಪ್ರಮಾಣ ಹೆಚ್ಚಳದ ಸಲುವಾಗಿ ಗುಣಮಟ್ಟ ಉನ್ನತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ನೂತನ ಶಿಕ್ಷಣ ನೀತಿಯಲ್ಲಿ ಶಾಲಾ-ಕಾಲೇಜುಗಳ ಆಡಳಿತ ನಿರ್ವಹಣೆ ಹಾಗೂ ನಕಲಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಲು ಒತ್ತು ನೀಡಲಾಗಿದೆ. ಶಿಕ್ಷಕರ ಬೋಧನ ಸಾಮರ್ಥ್ಯ ಅಭಿವೃದ್ಧಿಗೆ ಉನ್ನತ ಶಿಕ್ಷಣದಲ್ಲಿ ಇವುಗಳನ್ನು ಜಾರಿಗೆ ಶಿಫಾರಸ್ಸು ಮಾಡಲಾಗಿದೆ ಎಂದ ಅವರು, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ತರಬೇತಿ ಮೂಲಕ ಶಿಕ್ಷಣವನ್ನು ಸಶಕ್ತೀಕರಣಗೊಳಿಸಲಾಗುವುದು ಎಂದರು.

ಪ್ರಸ್ತುತವಿರುವ ಬಿ.ಇ.ಡಿ ಕೋರ್ಸ್ ಅನ್ನು ಮುಂದಿನ 10 ವರ್ಷಗಳ ವೇಳೆಗೆ ಅದನ್ನು ನಾಲ್ಕು ವರ್ಷದ ಕೋರ್ಸ್ ಆಗಿ ಬದಲಿಸಲಾಗುವುದು. ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿ ಮಾರ್ಪಾಡು ಮಾಡಲು ಕ್ರಮ ಕೈಗೊಳ್ಳಲು ನೀತಿಯಲ್ಲಿದೆ. ಅಲ್ಲದೆ, ಬೋಧನಾ ಸಾಮರ್ಥ್ಯ ಅಭಿವೃದ್ಧಿಗಾಗಿ ರಾಷ್ಟ್ರಮಟ್ಟದಲ್ಲಿ ಸಂಶೋಧನೆ ಹಾಗೂ ಆವಿಷ್ಕಾರ ನಿಧಿ ಮೀಸಲಿಡಬೇಕೆಂದು ಸೂಚಿಸಲಾಗಿದೆ ಎಂದು ಅವರು ನುಡಿದರು.

ಶಿಕ್ಷಣಕ್ಕಾಗಿ ಮೀಸಲಿಡುತ್ತಿರುವ ಅನುದಾನ ಪ್ರಮಾಣ ಹೆಚ್ಚಿಸಲು, ಸಾಮಾಜಿಕ ಕೈಗಾರಿಕೆ ಆರ್ಥಿಕತೆ, ತಾಂತ್ರಿಕ ವಲಯಗಳ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ಕರಡಿನಲ್ಲಿ ಪ್ರಸ್ತಾಪ ಮಾಡಲಾಗಿದೆ. ಈ ಮೂಲಕ ಗುಣಮಟ್ಟ ಹಾಗೂ ಉದಾರ ಶಿಕ್ಷಣಕ್ಕೆ ಒತ್ತು ನೀಡಿ, ಸಂವಿಧಾನದ ವೌಲ್ಯಗಳನ್ನು ಎತ್ತಿಹಿಡಿಯುವುದು ಎಲ್ಲ ರಂಗಗಳಿಗೆ ಪ್ರವೇಶಿಸಬಹುದಾದ ಶಿಕ್ಷಣ ವ್ಯವಸ್ಥೆ ರೂಪಿಸುವುದು ನೂತನ ಕರಡು ನೀತಿಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಪಿಇಎಸ್ ವಿವಿಯ ಕುಲಪತಿ ಡಾ.ದೊರೆಸ್ವಾಮಿ ಮಾತನಾಡಿ, ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಅನುದಾನ ಸೌಲಭ್ಯವನ್ನು ಉನ್ನತ ಶಿಕ್ಷಣ ವ್ಯವಸ್ಥೆ ಹೊಂದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಮೀಸಲಿಡಬೇಕು. ಅಲ್ಲದೆ, ಶಿಕ್ಷಣ ಸುಧಾರಣೆಗಾಗಿ ಖಾಸಗಿ ಸಂಸ್ಥೆಗಳು ಶ್ರಮಿಸುತ್ತಾ, ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ ಎಂಬುದನ್ನು ಸರಕಾರ ಮನಗಾಣಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪ ಕುಲಪತಿ ಪ್ರೊ.ಡಿ.ಜವಾಹರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

2014 ಜಿಡಿಪಿ ಪ್ರಕಾರ ದೇಶದ ಜಿಡಿಪಿಯ ಶೇ.0.7ರಷ್ಟು ಸಂಶೋಧನೆಗಳಿಗೆ ಖರ್ಚಾಗುತ್ತಿದೆ. ಆದರೆ, ಚೀನಾ ಶೇ.2.1, ಅಮೆರಿಕಾ 2.8, ಇಸ್ರೇಲ್ 4.3 ರಷ್ಟು ಖರ್ಚು ಮಾಡುತ್ತಿದೆ. ಹೀಗಾಗಿ, ಸಂಶೋಧನೆಗೆ ಒತ್ತು ನೀಡಲು ಹಾಗೂ ಆವಿಷ್ಕಾರಕ್ಕೆ ಪ್ರತ್ಯೇಕ ನಿಧಿ ಸ್ಥಾಪಿಸಲು ಶಿಫಾರಸ್ಸು ಮಾಡಲಾಗಿದೆ. ಶಿಕ್ಷಣ ನೀತಿಯಲ್ಲಿ ಕಡ್ಡಾಯ ಹಿಂದಿ ಹೇರಿಕೆ ಇಲ್ಲ. ನೀತಿಯ ಒಂದು ಪ್ಯಾರಾದಲ್ಲಿ ಹಿಂದಿ ಭಾಷೆ ಪ್ರಸ್ತಾಪಿಸಲಾಗಿದೆ. ಇದನ್ನು ತಿಳಿಯದೆ ಕೆಲವರು ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ.
-ಡಾ.ಕಸ್ತೂರಿ ರಂಗನ್, ಕರಡು ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News