ಶಿಕ್ಷಕರು ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕು: ಮೇಯರ್ ಗಂಗಾಂಬಿಕೆ

Update: 2019-07-25 19:00 GMT

ಬೆಂಗಳೂರು, ಜು.25: ನಗರದಲ್ಲಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಕಾಪಾಡುವ ಬಗ್ಗೆ ಶಿಕ್ಷಕರು ಎಲ್ಲ ಮಕ್ಕಳಲ್ಲಿಯೂ ಅರಿವು ಮೂಡಿಸಿದಾಗ ಅವರು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುತ್ತಾರೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅಭಿಪ್ರಾಯಪಟ್ಟರು.

ಗುರುವಾರ ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಆಯೋಜಿಸಿದ್ದ ಪೂರ್ವ ವಲಯದ ಶಾಲಾ ಮುಖ್ಯಸ್ಥರ ಸಭೆಯಲ್ಲಿ, ಪ್ಲಾಸ್ಟಿಕ್ ಬಳಕೆ ನಿಷೇಧ, ಕಸ ವಿಂಗಡಣೆ, ಪಿಒಪಿ ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಉಪಯೋಗಿಸುವುದು ಹಾಗೂ ನೀರನ್ನು ಮಿತವಾಗಿ ಬಳಸಿ ಪರಿಸರ ಸಂರಕ್ಷಣೆ ಮಾಡುವ ಕುರಿತು ಅವರು ಮಾತನಾಡಿದರು.

ಮಕ್ಕಳು ಮನೆಗಳಲ್ಲಿರುವುದಕ್ಕಿಂತ ಶಾಲೆಗಳಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ಶಿಕ್ಷಕರು ಹೇಳುವ ವಿಷಯವನ್ನು ಗ್ರಹಿಸುವುದರ ಜೊತೆಗೆ ಚಾಚೂತಪ್ಪದೆ ಪಾಲಿಸುತ್ತಾರೆ. ಹಾಗಾಗಿ ಅವರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಬೇಕೆಂದು ಶಾಲಾ ಮುಖ್ಯಸ್ಥರುಗಳಿಗೆ ಸಲಹೆ ನೀಡಿದರು.
ಪ್ಲಾಸ್ಟಿಕ್ ಮುಕ್ತ ಬೆಂಗಳೂರನ್ನಾಗಿಸಲು ಬಿಬಿಎಂಪಿ ಪಣತೊಟ್ಟಿದ್ದು, ಜುಲೈ 15ರಿಂದ ಆಂದೋಲನ ನಡೆಸಲಾಗುತ್ತಿದೆ. ಪಾಲಿಕೆ ಆರೋಗ್ಯಾಧಿಕಾರಿಗಳು ನಿತ್ಯ ಅನಿರೀಕ್ಷಿತ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಜಪ್ತಿ ಮಾಡುವ ಜೊತೆಗೆ ದಂಡ ವಿಧಿಸುತ್ತಿದ್ದಾರೆ. ಅದರಂತೆ ಇದುವರೆಗೆ ಸುಮಾರು 13 ಕ್ವಿಂಟಾಲ್ ಪ್ಲಾಸ್ಟಿಕ್ ಜಪ್ತಿ ಮಾಡಿದ್ದು, 25 ಲಕ್ಷ ರೂ.ಗಳಿಗೂ ಹೆಚ್ಚು ದಂಡ ಸಂಗ್ರಹಿಸಿದ್ದಾರೆ. ಆಗಸ್ಟ್ ಒಂದರಿಂದ ಪ್ಲಾಸ್ಟಿಕ್ ಬಳಕೆ ಮಾಡುವವರಿಗೆ ಐದು ಪಟ್ಟು ದಂಡ ವಿಧಿಸಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸೂಕ್ತ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

ನಗರದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚುತ್ತಿದ್ದು, ಆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಈಗಾಗಲೇ ವೈಟ್ ಟಾಪಿಂಗ್ ರಸ್ತೆಗಳಲ್ಲಿ ಹಿಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಉದ್ಯಾನ, ಪಾಲಿಕೆ ಕಚೇರಿಗಳ ಆವರಣಗಳಲ್ಲಿ ಹಿಂಗು ಗುಂಡಿ ನಿರ್ಮಾಣ ಮಾಡುವ ಬಗ್ಗೆ ಪಾಲಿಕೆ ಆಯುಕ್ತರ ಜೊತೆ ಚರ್ಚಿಸಲಾಗಿದೆ. ಅದೇ ರೀತಿ ಎಲ್ಲರೂ ಕಟ್ಟಡ ನಿರ್ಮಾಣ ಮಾಡುವ ವೇಳೆ ಹಿಂಗು ಗುಂಡಿಗಳನ್ನು ನಿರ್ಮಾಣ ಮಾಡಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕುಡಿಯುವ ನೀರನ್ನು ಮಿತವಾಗಿ ಬಳಸಿ, ಕೊಳವೆ ಬಾವಿ ಹಾಗೂ ಸಂಸ್ಕರಿಸಿದ ನೀರನ್ನು ಇತರೆ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂದರು.

ಕಸದ ಸಮಸ್ಯೆ ನಿವಾರಣೆ ಮಾಡುವ ಉದ್ದೇಶದಿಂದ ಹೊಸ ಟೆಂಡರ್ ಪ್ರಕ್ರಿಯೆ ಸೆಪ್ಟೆಂಬರ್ ಒಂದರಿಂದ ಜಾರಿಗೊಳಿಸಲಾಗುತ್ತಿದೆ. ಆ ಬಳಿಕ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೊಡಬೇಕು. ಇಲ್ಲವಾದರೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ ಎಂದರು.
ಡೆಂಗ್ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಎಲ್ಲ್ಲ ವಾರ್ಡ್‌ಗಳ ಸದಸ್ಯರುಗಳ ಜೊತೆ ಸಭೆ ನಡೆಸಿ ಫಾಗಿಂಗ್ ಮತ್ತು ಔಷಧಿ ಸಿಂಪಡಿಸುವ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿಯಂತ್ರಣ ಮಾಡಬೇಕೆಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪೂರ್ವ ವಲಯದಲ್ಲಿ ಆಗಸ್ಟ್ 3ರಂದು ಜಾಥಾ ಕಾರ್ಯಕ್ರಮ ನಡೆಸಲಾಗುವುದು. ಅದಕ್ಕೆ ಬಿಬಿಎಂಪಿ ಶಾಲಾ ಮಕ್ಕಳು ಜಾಥಾದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಆಡಳಿತ ಪಕ್ಷದ ನಾಯಕರು, ಜಂಟಿ ಆಯುಕ್ತರು, ಸಹಾಯಕ ಆಯುಕ್ತರು(ಶಿಕ್ಷಣ), ಶಿಕ್ಷಣ ವಿಭಾಗದ ಅಧಿಕಾರಿ, ಮುಖ್ಯ ಇಂಜಿನಿಯರ್‌ಗಳು, ಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರುಗಳು ಉಪಸ್ಥತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News