ಮಿಂಟೊ ಆಸ್ಪತ್ರೆ ಪ್ರಕರಣ; ಚೇತರಿಸಿಕೊಂಡ ರೋಗಿಗಳು

Update: 2019-07-25 19:01 GMT

ಬೆಂಗಳೂರು, ಜು.25: ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಿಂದಾಗಿ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದ 24 ರೋಗಿಗಳಲ್ಲಿ ಚೇತರಿಕೆ ಕಂಡು ಬಂದಿದ್ದು, 18 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಆರು ಮಂದಿಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

ದೃಷ್ಟಿ ಸಮಸ್ಯೆಯಿಂದಾಗಿ ನಾರಾಯಣ ನೇತ್ರಾಲಯದಲ್ಲಿ ಶಸ್ತ್ರಚಿಕಿತ್ಸೆ ಪಡೆದು ಬಂದಿರುವ ಕೀಸರ್ ಮಧುಮೇಹ, ಕಿಡ್ನಿ ಸಮಸ್ಯೆ ಹೊಂದಿರುವುದರಿಂದ ಅವರಿಗೆ ವಿಕ್ಟೋರಿಯಾದ ಎಮರ್ಜೆನ್ಸಿ ಮತ್ತು ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಜಾತ, ಸಾಹಿದ್ ಉನ್ನಿಸಾ ಬಾನು ಮತ್ತು ಚನ್ನಬಸಮ್ಮ ಅವರಿಗೆ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಉಳಿದಂತೆ ಪುಟ್ಟನಂಜಮ್ಮ, ಹಾಲಪ್ಪಎಂಬುವರು ಮಿಂಟೊದಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಔಷಧ ಕಾರಣ ಎಂದು ತಿಳಿಯುತ್ತಿದ್ದಂತೆ ಸಂಬಂಧ ಪಟ್ಟ ಬ್ಯಾಚ್‌ನ ಔಷಧವನ್ನು ಎಲ್ಲೆಲ್ಲಿ ವಿತರಿಸಲಾಗಿದೆ ಎಂದು ವಿತರಕರಲ್ಲಿ ಕೇಳಿದಾಗ ಕುಪ್ಪಂ ವೈದ್ಯಕೀಯ ಕಾಲೇಜು ಎಂದು ಹೇಳಿದರು. ಅಲ್ಲಿ ವಿಚಾರಿಸಿದರೆ ಅದು ಸುಳ್ಳು ಎಂಬುದು ತಿಳಿಯಿತು. ಮತ್ತೊಮ್ಮೆ ಕಾಂಬೋಡಿಯಾದ ಆಸ್ಪತ್ರೆಯೊಂದಕ್ಕೆ ಕಳುಹಿಸಿರುವುದಾಗಿ ಹೇಳಿದರು. ನಂತರದಲ್ಲಿ ಆತ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದು, ಆಸ್ಪತ್ರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ವಿರುದ್ಧ ದೂರು ನೀಡಿರುವುದರಿಂದ ಪೊಲೀಸರೇ ಕ್ರಮ ಕೈಗೊಳ್ಳಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಆಗಸ್ಟ್‌ಗೆ ವೆಲ್ಲೂರಿನ ವರದಿ
ಸಮಸ್ಯೆಗೆ ಔಷಧದ ಅಡ್ಡಪರಿಣಾಮ ಕಾರಣ ಎಂದು ಒಂಬತ್ತು ಪ್ರಯೋಗಾಲಯಗಳ ವರದಿ ದೃಢಪಡಿಸಿವೆ. ಇದಲ್ಲದೆ ಔಷಧ ನಿಯಂತ್ರಕರು ಹಾಗೂ ವೆಲ್ಲೂರಿನ ಪ್ರಯೋಗಾಲಯದ ವರದಿ ಬಾಕಿ ಇದ್ದು, ಆಗಸ್ಟ್ ಮೊದಲ ವಾರದಲ್ಲಿ ಬರಲಿದೆ. ನಂತರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಾಧಿಕಾರಿಯೊಬ್ಬರು ತಿಳಿಸಿದರು.

ಈಗ ಮನೆಗೆ ತೆರಳಿರುವ 18 ಮಂದಿಗೆ ದೃಷ್ಟಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದೆ. ಕೆಲವರಿಗೆ 2 ಮೀಟರ್, 6 ಮೀಟರ್‌ನಷ್ಟು ಅಂತರದಲ್ಲಿ ಮಬ್ಬಾಗಿ ದೃಷ್ಟಿ ಕಾಣಿಸುತ್ತಿದೆ. ಪೂರ್ಣಪ್ರಮಾಣದಲ್ಲಿ ಕಾಣಿಸುವಂತಾಗಲು ಸ್ವಲ್ಪಸಮಯ ಬೇಕಾಗುತ್ತದೆ. ಹೀಗಾಗಿ ಇವರೆಲ್ಲರಿಗೂ ಕಾಲಕಾಲಕ್ಕೆ ತಪಾಸಣೆಗೆ ಬರುವಂತೆ ಸೂಚಿಸಲಾಗಿದೆ.
-ಡಾ.ಸುಜಾತಾ ರಾಥೋಡ್, ಮಿಂಟೊ ಆಸ್ಪತ್ರೆ ನಿರ್ದೇಶಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News