ಅನರ್ಹತೆ ಹೆದರಲು ನಾವೇನು ಕಾಲೇಜು ವಿದ್ಯಾರ್ಥಿಗಳಲ್ಲ: ಶಾಸಕ ಎಚ್.ವಿಶ್ವನಾಥ್

Update: 2019-07-26 15:50 GMT

ಬೆಂಗಳೂರು, ಜು. 26: ‘ಶಾಸಕ ಸ್ಥಾನದಿಂದ ಅನರ್ಹತೆಗೊಳಿಸಿದರೆ ಹೆದರಲು ನಾವೇನೂ ಕಾಲೇಜು ವಿದ್ಯಾರ್ಥಿಗಳಲ್ಲ. ನಾವೆಲ್ಲರೂ ಸಾಕಷ್ಟು ಅನುಭವಿಗಳಾಗಿದ್ದು, ಅನರ್ಹತೆ ವಿಚಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ರಾಜೀನಾಮೆ ನೀಡಿರುವ ಅತೃಪ್ತ ಶಾಸಕ ಎಚ್.ವಿಶ್ವನಾಥ್ ತಿಳಿಸಿದ್ದಾರೆ. 

ಶುಕ್ರವಾರ ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ನಾವೆಲ್ಲರೂ ಇಂತಹ ಸಾಕಷ್ಟು ಪ್ರಕರಣಗಳನ್ನು ಕಂಡಿದ್ದೇವೆ. ಇನ್ನೆರಡು-ಮೂರು ದಿನಗಳಲ್ಲಿ ನಾವೆಲ್ಲರೂ ಬೆಂಗಳೂರಿಗೆ ಬರುತ್ತೇವೆ. ಸದ್ಯಕ್ಕೆ ನಾವೆಲ್ಲರೂ ಒಗ್ಗಟ್ಟಾಗಿದ್ದು, ಎಲ್ಲವನ್ನೂ ಎದುರಿಸಲು ಸಿದ್ದವಾಗಿದ್ದೇವೆ ಎಂದರು.

ನಮ್ಮ ರಾಜಕೀಯ ಜೀವನದಲ್ಲಿ ನಾವೆಲ್ಲರೂ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇವೆ. ಅನರ್ಹತೆಗೆ ಹೆದರಿ ಕೂರುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹತೆ ವಿಚಾರವನ್ನು ಪ್ರಸ್ನಿಸುತ್ತೇವೆ. ನಮಗೆ ಗೆಲುವು ಸಿಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ನಾವೆಲ್ಲ ಬಂಡೆಯಂತೆ ಗಟ್ಟಿಯಾಗಿದ್ದೇವೆ. ನಮ್ಮ ದಾರಿ ನಿಶ್ಚಳವಾಗಿದೆ. ಮೈತ್ರಿ ಸರಕಾರ ನಮಗೆ ಬೇಡವಾಗಿತ್ತು. ಅದು ಈಗ ಪತನವಾಗಿದೆ. ನಮ್ಮ ದಾರಿ ನಮಗೆ. ಯಾರಾದರೂ ಸಂಪರ್ಕದಲ್ಲಿರುವುದಾಗಿ ಹೇಳಿಕೊಳ್ಳುತ್ತಿದ್ದರೆ ಅದು ಅವರ ಭ್ರಮೆ. ನಮ್ಮಿಂದಿಗೆ ಮಾತನಾಡುವ ಮುಖ ಯಾರಿಗೂ ಇಲ್ಲ. ಮನವೊಲಿಸುವುದು ಮುಗಿದ ಅಧ್ಯಾಯ ಎಂದು ಅವರು ತಿಳಿಸಿದರು.

ನಿವೃತ್ತಿಯಾದರೂ ಹಿಂದೆ ಸರಿಯಲ್ಲ: ರಾಜಕೀಯದಿಂದ ನಿವೃತ್ತರಾದರೂ ಸರಿಯೇ, ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಮೂವರು ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ರಮೇಶ್‌ಕುಮಾರ್ ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ಶಾಸಕ ಬಿ.ಸಿ.ಪಾಟೀಲ್ ತಿಳಿಸಿದರು.

ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ. ಸದ್ಯಕ್ಕೆ ಬೆಂಗಳೂರಿಗೆ ಬರುವುದಿಲ್ಲ. ನಮ್ಮನ್ನು ಯಾವ ನಾಯಕರೂ ಸಂಪರ್ಕ ಮಾಡಿಲ್ಲ. ಆ ರೀತಿ ಹೇಳಿಕೊಳ್ಳುತ್ತಿದ್ದರೆ ಅದು ತಪ್ಪು ಮಾಹಿತಿ. ಸಂಪರ್ಕ ಮಾಡುವ ಅಗತ್ಯವೂ ಇಲ್ಲ ಎಂದು ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News