ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ: ಸ್ಪೀಕರ್ ರಮೇಶ್ ಕುಮಾರ್

Update: 2019-07-26 14:52 GMT

ಬೆಂಗಳೂರು, ಜು.26: ಪಕ್ಷಾಂತರ ನಿಷೇಧ ಕಾಯ್ದೆಯಡಿ ಮೂವರು ಶಾಸಕರನ್ನು ಅನರ್ಹಗೊಳಿಸಿರುವ ತೀರ್ಮಾನವು ಪಕ್ಷಪಾತದಿಂದ ಕೂಡಿದೆ ಎಂಬ ಆರೋಪಗಳು ಕೇಳಿ ಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಈ ಆರೋಪಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.

ಶುಕ್ರವಾರ ನಗರದ ದೊಮ್ಮಲೂರಿನಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ತೃಪ್ತರೋ, ಯಾರು ಅತೃಪ್ತರೋ ಆ ವಿಚಾರ ನನಗೆ ಸಂಬಂಧಿಸಿದ್ದಲ್ಲ. ದೂರುಗಳು ಬಂದಾಗ ನ್ಯಾಯಾಧೀಕರಣ ಮಾಡುವ ಕರ್ತವ್ಯವನ್ನು ನಾನು ಮಾಡಿದ್ದೇನೆ ಅಷ್ಟೇ ಎಂದರು.

ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಯಾರನ್ನೂ ಮೆಚ್ಚಿಸುವ ಉದ್ದೇಶ ನನಗಿಲ್ಲ, ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದರು.

ಇದೇ ವೇಳೆ ಶಾಸಕ ಸ್ಥಾನಗಳಿಗೆ ಸಲ್ಲಿಕೆಯಾಗಿರುವ ರಾಜೀನಾಮೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಪ್ರಕರಣವು ಒಂದೊಂದು ರೀತಿಯ ಸ್ವಭಾವ ಹೊಂದಿದೆ. ಈ ಸಂಬಂಧ ವಕೀಲರ ಜೊತೆ ಚರ್ಚೆ ಮಾಡಿ, ನ್ಯಾಯ ಸಮ್ಮತವಾದ ಆದೇಶ ನೀಡುತ್ತೇನೆ ಎಂದರು.

ರಾಜೀನಾಮೆ ನೀಡಿರುವ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಬೇಕೆ? ಅಥವಾ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕೆ? ಎಂಬುದರ ಕುರಿತು ಆಲೋಚನೆ ಮಾಡಬೇಕಿದೆ. ಇಂತಹ ಪ್ರಕರಣದಲ್ಲಿ ಈ ಹಿಂದೆ ಸಂಸತ್ತಿನಲ್ಲಿ ಏನಾಗಿದೆ? ಬೇರೆ ರಾಜ್ಯಗಳಲ್ಲಿ ಇಂತಹ ಪ್ರಕರಣಗಳಲ್ಲಿ ಯಾವ ರೀತಿಯ ತೀರ್ಮಾನ ಮಾಡಲಾಗಿದೆ? ಎಂಬುದರ ಕುರಿತು ಪರಿಶೀಲಿಸಬೇಕು ಎಂದು ರಮೇಶ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News