ಸಂವಿಧಾನ ಶಿಲ್ಪಿ ಅಂಬೇಡ್ಕರ್ ‘ಪ್ರಸ್ತುತಿ’ ಸಂದರ್ಭ ಅರುಂಧತಿ ರಾಯ್ ಸ್ಲೈಡ್ ತೆಗೆದು ಹಾಕಿದ ಭಾರತೀಯ ರಾಯಭಾರಿ ಕಚೇರಿ

Update: 2019-07-26 18:30 GMT

ಹೊಸದಿಲ್ಲಿ, ಜು. 26: ಡಾ. ಬಿ.ಆರ್. ಅಂಬೇಡ್ಕರ್ ಕುರಿತ ‘ಪ್ರಸ್ತುತಿ’ ಸಂದರ್ಭ ಭಾರತೀಯ ರಾಯಭಾರಿ ಕಚೇರಿ ಬೂಕರ್ ಪ್ರಶಸ್ತಿ ಗೌರವಾನ್ವಿತೆ ಅರುಂಧತಿ ರಾಯ್ ಅವರ ಸ್ಲೈಡ್ ತೆಗೆದು ಹಾಕಿದ ಘಟನೆ ಕೆನಡಾದ ಕಾರ್ಯಕ್ರಮವೊಂದರಲ್ಲಿ ನಡೆದಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದ ಅಂಗವಾಗಿ ವ್ಯಾಕೋವರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸ್ಥಳೀಯ ಅಂಬೇಡ್ಕರ್‌ವಾದಿಗಳ ಗುಂಪಿನ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ‘ಜಾಗತಿಕ ಸನ್ನಿವೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ್’ ಕುರಿತು ‘ಪ್ರಸ್ತುತಿ’ ಮಾಡುವಂತೆ ಅಮೆರಿಕ ಮೂಲದ ಸಂಶೋಧಕಿಯಲ್ಲಿ ಮನವಿ ಮಾಡಲಾಗಿತ್ತು. ಆದರೆ ಪ್ರಸ್ತುತಿಯಲ್ಲಿದ್ದ ಆರುಂಧತಿ ರಾಯ್ ಅವರ ಹೇಳಿಕೆಯನ್ನು ಒಳಗೊಂಡ ಸ್ಲೈಡ್ ಅನ್ನು ಅವರ ಅನುಮತಿ ಇಲ್ಲದೆ ಭಾರತೀಯ ರಾಯಭಾರಿ ಕೊನೆಯ ಕ್ಷಣ ತೆಗೆದು ಹಾಕಿತ್ತು.

ಈ ಬಗ್ಗೆ ಅವರು ಅಧಿಕಾರಿಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ಅಧಿಕಾರಿಗಳು, ಅರುಂಧತಿ ರಾಯ್ ವಿವಾದಾತ್ಮಕ ವ್ಯಕ್ತಿ ಎಂದು ಸಮಾಜಾಯಿಷಿ ನೀಡಿದ್ದರು. ಈ ಸಂದರ್ಭ ಮೌನಕ್ಕೆ ಮೊರೆ ಹೋದ ಅಂಬೇಡ್ಕರ್‌ವಾದಿಗಳ ಗುಂಪು ಮಧ್ಯಪ್ರವೇಶಿಸಲಿಲ್ಲ. ಅನಂತರ ರಾಯಭಾರಿ ಕಚೇರಿ ಈ ಪ್ರಸ್ತುತಿಯನ್ನು ಅಂಬೇಡ್ಕರ್ ವಾದಿ ಗುಂಪಿನ ಮೂಲಕ ಮಾಡಿಸಿತು. ಕೆನಡಾ ಸಂಸತ್ತು ಆರುಂಧತಿ ರಾಯ್ ಅವರಿಗೆ ಕೆನಡಾದ ಗೌರವ ಪೌರತ್ವ ನೀಡಲು ನಿರಾಕರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಅರುಂಧತಿ ರಾಯ್ ಅವರಿಗೆ ಪೌರತ್ವ ನೀಡುವಂತೆ ಆಗ್ರಹಿಸಿ ‘ಇಂಡಿಯನ್ಸ್ ಅಬ್ರೋಡ್ ಫಾರ್ ಪ್ಲೂರಲಿಸ್ಟ್ ಇಂಡಿಯಾ’ ಮೆಟ್ರೋ ವ್ಯಾಂಕೋವರ್‌ನಲ್ಲಿ ನೂರಾರು ಸಹಿ ಸಂಗ್ರಹಿಸಿ ಮನವಿ ಸಲ್ಲಿಸಿತ್ತು. ಈ ಮನವಿಗೆ ಪ್ರತಿಕ್ರಿಯಿಸಿದ ಕೆನಡಾ ಪ್ರಧಾನಿಯ ಸಂಸದೀಯ ಕಾರ್ಯದರ್ಶಿ ಪೀಟರ್ ಸ್ಕೀಫ್ಕೆ, ಪೌರತ್ವ ನಿರ್ಧರಿಸುವ ಹಕ್ಕು ಇರುವುದು ಸಂಸತ್ತಿಗೆ ಹೊರತು ಸರಕಾರಕ್ಕಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News