ವರ್ಣಾಶ್ರಮ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಮಾಜಿಕ ಜಾಲತಾಣ ಬಳಕೆ: ಬರಗೂರು ರಾಮಚಂದ್ರಪ್ಪ

Update: 2019-07-27 16:17 GMT

ಬೆಂಗಳೂರು, ಜು.27: ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವೀಟರ್, ವಾಟ್ಸ್ ಆ್ಯಪ್‌ಗಳು ದೇಶದಲ್ಲಿ ವರ್ಣಾಶ್ರಮ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬಳಕೆಯಾಗುತ್ತಿವೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ಶನಿವಾರ ನವಕರ್ನಾಟಕ ಪ್ರಕಾಶನದ 60ರ ಸಂಭ್ರಮದ ಪ್ರಯುಕ್ತ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ 12 ಅನುವಾದ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಿಂದೆ ಅಕ್ಷರ ಕಲಿತು ವರ್ಣಾಶ್ರಮ ಪದ್ಧತಿಯನ್ನು ಜಾರಿ ಮಾಡಿದರು. ಈಗ ಸಾಮಾಜಿಕ ಜಾಲತಾಣಗಳನ್ನು ತಮ್ಮ ಕೈವಶ ಮಾಡಿಕೊಂಡು ವರ್ಣಾಶ್ರಮ ವ್ಯವಸ್ಥೆಯನ್ನು ಗಟ್ಟಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಒಂದು ಅಂದಾಜಿನ ಪ್ರಕಾರ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ಒಂದು ಕೋಟಿ ಇರಬಹುದು. ಇದರಲ್ಲಿ ತೊಡಗಿರುವ ಬಹುತೇಕ ಮಂದಿ ದೇಶದ ಬಹುಜನರ ಆಲೋಚನೆ, ಅಭಿಪ್ರಾಯಗಳನ್ನು ನಿಯಂತ್ರಿಸುವುದಕ್ಕಾಗಿಯೆ ಬಳಕೆ ಮಾಡುತ್ತಿರುವುದು ದುರಂತವಾಗಿದೆ. ಜನರನ್ನು ಆಳುವುದಕ್ಕಾಗಿಯೆ ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿದೆ ಎಂದು ಅವರು ವಿಷಾದಿಸಿದರು. ಇವತ್ತು ಸಾಮೂಹಿಕ ಪ್ರಜ್ಞೆಯ ಜಾಗದಲ್ಲಿ ಸಾಮೂಹಿಕ ಸನ್ನಿ ಬಂದು ಕುಳಿತಿದೆ. ಇದು ಜನತೆಯ ಪಂಚೇಂದ್ರಿಯಗಳನ್ನು ನಿಷ್ಕ್ರಿಯಗೊಳಿಸಿ, ಸ್ವಂತ ಆಲೋಚನೆ, ವಿವೇಕ, ಸ್ವಂತಿಕೆಯನ್ನು ಇಲ್ಲವಾಗಿಸುತ್ತದೆ. ಇಂತಹ ನಿಷ್ಕ್ರಿಯಗೊಂಡ ಜನರನ್ನು ಬಳಸಿಕೊಂಡು ಸಮಾಜದಲ್ಲಿ ದ್ವೇಷ, ಅಸೂಯೆ, ಅಸಮಾನತೆ ಬಿತ್ತಲಾಗುತ್ತಿದೆ ಎಂದು ಅವರು ಹೇಳಿದರು.

ಜ್ಞಾನದ ಗಣಿ ನವಕರ್ನಾಟಕ: ಇವತ್ತಿನ ಮಾರುಕಟ್ಟೆಯ ಯುಗದಲ್ಲೂ ಭೂತ, ವರ್ತಮಾನ ಹಾಗೂ ಭವಿಷ್ಯತ್ತಿನ ಚಿಂತನೆಗಳನ್ನು ಓದುಗರಿಗೆ ಉಣ ಬಡಿಸುತ್ತಿರುವ ನವ ಕರ್ನಾಟಕ ಪ್ರಕಾಶನ ಸಂಸ್ಥೆಯು ಜ್ಞಾನ ಗಣಿಯೆಂದರೆ ತಪ್ಪಾಗಲಾರದು. ಕಳೆದ 60 ವರ್ಷಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಇದರಲ್ಲಿ ಒಂದು ಪುಸ್ತಕವೂ ಅನಗತ್ಯವೆಂದು ಗುರುತಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ಅಧ್ಯಕ್ಷತೆಯನ್ನು ವಹಿಸಿದ್ದರು.ಡಾ.ಎಚ್.ಎಸ್.ಗೋಪಾಲರಾವ್, ನೇಮಿಚಂದ್ರ ಹಾಗೂ ಡಾ.ಜಿ.ಜಯಲಕ್ಷ್ಮಿ ಪುಸ್ತಕಗಳನ್ನು ಪರಿಚಯ ಮಾಡಿಕೊಟ್ಟರು. ಈ ವೇಳೆ ನವ ಕರ್ನಾಟಕದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿದ್ಧನಗೌಡ ಪಾಟೀಲ, ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಉಡುಪ ಮತ್ತಿತರರಿದ್ದರು.

ಬಿಡುಗಡೆಗೊಂಡ ಪುಸ್ತಕಗಳು:

ಸ್ವಾತಂತ್ರೋತ್ತರ ಭಾರತ(ಡಾ.ಸಿ.ಬಿ.ಕಮತಿ), ಲೋಕರಾಜ ಸಯಜಿರಾವ ಗಾಯಕವಾಡ ಹಾಗೂ ಧರ್ಮ: ಮಾನವ ಸಂಸ್ಕೃತಿ ಮತ್ತು ವಿಕಾಸ(ಚಂದ್ರಕಾಂತ ಪೋಕಳೆ), ಹಿಂದೂ ಅಸ್ಮಿತೆಗಾಗಿ ಹುಡುಕಾಟ(ಪ್ರದೀಪ್ ಕುಮಾರ ಶೆಟ್ಟಿ), ಅಶ್ವಾಖ್ ಉಲ್ಲಾಖಾನ್(ಕಲೀಂ ಪಾಷ), ಕೃಷಿ ಬಿಕ್ಕಟ್ಟು ಮತ್ತು ಅದರ ಪರಿಹಾರ(ಎ.ಜ್ಯೋತಿ), ಒಂದು ಅರ್ಥಪೂರ್ಣ ಸತ್ಯ(ಡಾ.ಜೆ.ಎಸ್.ಕುಸುಮಗೀತೆ), ರಸ್ಕಿನ್‌ಬಾಂಡ್ ಕತೆಗಳು(ಡಿ.ಜಿ.ಮಲ್ಲಿಕಾರ್ಜುನ), ನೂರು ಹಿಂಹಾಸನಗಳು(ಕೆ.ಪ್ರಭಾಕರನ್), ಕಾಳಿಗಾಂಗಾ(ಗೀತಾಶೆಣೈ), ನನ್ನ ದೇವರು ಹೆಣ್ಣು ಹಾಗೂ ಮರೀಚಿಕೆ(ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ)

ನಮ್ಮ ಸರಕಾರಗಳು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಲ್ಯಾಪ್‌ಟಾಪ್ ಅನ್ನು ಉಚಿತವಾಗಿ ನೀಡುತ್ತಿಲ್ಲ. ಹಾಗೆ ಒಳ್ಳೆಯ ಉದ್ದೇಶವೇ ಇರುವುದಾಗಿದ್ದರೆ, ಶಾಲಾ, ಕಾಲೇಜುಗಳ ಮೂಲಭೂತ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಗೊಳಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿರುವ ಉದ್ದೇಶ ಲ್ಯಾಪ್‌ಟಾಪ್ ಕಂಪೆನಿಗಳಿಗೆ ಲಾಭ ಹಾಗೂ ಕಮಿಷನ್ ಸ್ವಾರ್ಥವಾಗಿದೆ.

-ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News