ಮಮತಾ ಬ್ಯಾನರ್ಜಿ ವಿರುದ್ಧ ಬಂಗಾಲ ರಾಜ್ಯಪಾಲರ ವಾಗ್ದಾಳಿ

Update: 2019-07-28 04:02 GMT
ಕೇಸರಿನಾಥ್ ತ್ರಿಪಾಠಿ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಓಲೈಕೆ ನೀತಿ ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತಂದಿದೆ ಎಂದು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿ ಹದಗೆಟ್ಟಿರುವ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮಮತಾ ಬ್ಯಾನರ್ಜಿಯವರಿಗೆ ನೀತಿಗಳನ್ನು ಅನುಷ್ಠಾನಗೊಳಿಸುವ ಅಧಿಕಾರ ಹಾಗೂ ಬದ್ಧತೆ ಇದೆ. ಆದರೆ ತಮ್ಮ ಭಾವನೆಗಳನ್ನು ಅವರು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ತ್ರಿಪಾಠಿ ಅಧಿಕಾರಾವಧಿಯಲ್ಲಿ ರಾಜಭವನ ಮತ್ತು ಮಮತಾ ಸರ್ಕಾರದ ನಡುವೆ ಶೀತಲ ಸಮರ ನಡೆಯುತ್ತಲೇ ಇದ್ದು, ರಾಜ್ಯಪಾಲರು ಬಿಜೆಪಿ ಆದೇಶವನ್ನು ಪಾಲಿಸುತ್ತಿದ್ದಾರೆ ಎನ್ನುವುದು ಮಮತಾ ಅವರ ಆರೋಪ. ತ್ರಿಪಾಠಿಯವರ ಉತ್ತರಾಧಿಕಾರಿ ಜಗದೀಪ್ ಧನಕರ್ ಜು. 30ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

"ಆಕೆಯ ಓಲೈಕೆ ನೀತಿಯು ಸಮಾಜದ ಸಾಮರಸ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅವರು ಎಲ್ಲ ನಾಗರಿಕರನ್ನು ಸಮಾನವಾಗಿ ಕಾಣಬೇಕು ಎನ್ನುವುದು ನನ್ನ ಭಾವನೆ. ಯಾವುದೇ ತಾರತಮ್ಯ ಇಲ್ಲದೇ ಇಡೀ ಬಂಗಾಳದ ನಾಗರಿಕರನ್ನು ಸಮಾನವಾಗಿ ಕಾಣಬೇಕು ಎನ್ನುವುದು ನನ್ನ ನಂಬಿಕೆ" ಎಂದು ಪಿಟಿಐ ಜತೆ ಮಾತನಾಡಿದ ಅವರು ಹೇಳಿದರು. "ತಾರತಮ್ಯ ಮೇಲ್ನೋಟಕ್ಕೇ ಕಾಣುತ್ತದೆ. ಅವರ ಹೇಳಿಕೆಗಳು ತಾರತಮ್ಯವನ್ನು ಸೂಚಿಸುತ್ತವೆ" ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಬೇಕು ಎಂದು ಹೇಳಿದ್ದಾರೆ. "ಜನ ಏಕೆ ಹಿಂಸಾ ಮಾರ್ಗ ಅನುಸರಿಸುತ್ತಾರೆ ತಿಳಿಯದು. ಇದಕ್ಕೆ ರಾಜಕೀಯ ಕಾರಣ, ಕೋಮು ಕಾರಣ ಅಥವಾ ಬಾಂಗ್ಲಾದೇಶಿಯರು, ರೊಹಿಂಗ್ಯಾಗಳ ಅಕ್ರಮ ನುಸುಳುವಿಕೆ ಇಲ್ಲವೇ ಇತರ ಕಾರಣಗಳು ಇರಬಹುದು" ಎಂದು ವಿಶ್ಲೇಷಿಸಿದ್ದಾರೆ.

ರಾಜ್ಯಪಾಲರ ಹೇಳಿಕೆಯನ್ನು ಟಿಎಂಸಿ ನಾಯಕತ್ವ ಕಟುವಾಗಿ ಟೀಕಿಸಿದೆ. "ರಾಜಭವನ ಬಿಜೆಪಿ ಕಚೇರಿಯಾಗಿದೆ ಎಂದು ನಾವು ಸದಾ ಹೇಳುತ್ತಿರುತ್ತೇವೆ. ರಾಜ್ಯಪಾಲರ ಪಕ್ಷಪಾತದ ಹೇಳಿಕೆ ಅದನ್ನು ದೃಢಪಡಿಸಿದೆ. ಅವರು ಹೇಳಿರುವುದು ಅವರ ಹುದ್ದೆಗೆ ಘನತೆ ತರುವಂಥದ್ದಲ್ಲ" ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News