ರಾಜಧಾನಿಯಲ್ಲಿ 10 ಸಾವಿರ ಬಾವಿ, 4 ಲಕ್ಷ ಬೋರ್‌ವೆಲ್‌ಗಳಿವೆ: ಪರಿಸರ ತಜ್ಞ ಎಸ್.ವಿಶ್ವನಾಥ

Update: 2019-07-28 13:02 GMT

ಬೆಂಗಳೂರು, ಜು.28: ರಾಜಧಾನಿಯಲ್ಲಿ 10 ಸಾವಿರ ಬಾವಿಗಳಿದ್ದು, ಅವುಗಳನ್ನು ದುರಸ್ತಿಗೊಳಿಸಬೇಕಿದೆ. ಪ್ರತಿಯೊಂದು ಬಾವಿಯಲ್ಲಿಯೂ ಗಿಡಗಂಟೆ ಬೆಳದಿದ್ದು, ಹೂಳು ತುಂಬಿದೆ ಎಂದು ಪರಿಸರ ತಜ್ಞ ಎಸ್.ವಿಶ್ವನಾಥ ತಿಳಿಸಿದರು.

ರವಿವಾರ ನಗರದ ದಿ ಮಿಥಿಕ್ ಸೊಸೈಟಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೆರೆಗಳು ಹಾಗೂ ನೀರಿನ ನಿರ್ವಹಣೆ ಕುರಿತು ಮಾತನಾಡಿದ ಅವರು, ನಗರದಲ್ಲಿರುವ ಬಾವಿಗಳನ್ನು ಸ್ವಚ್ಛ ಗೊಳಿಸಿದರೆ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ಹಾಗೇ ಪ್ರತಿಯೊಂದು ಮನೆಯಲ್ಲಿ ಬಾವಿ ತೋಡಿ ಮಳೆ ನೀರು ಸಂಗ್ರಹಿಸಿದರೆ, ಆ ಮನೆಗೆ ವರ್ಷಕ್ಕೆ ಬೇಕಾಗುವಷ್ಟು ನೀರು ಬಾವಿಯಲ್ಲಿಯೇ ಸಂಗ್ರಹಣೆಯಾಗಲಿದೆ. ಇದರಿಂದ ಬೇರೆ ಕಡೆಗಳಿಂದ ನೀರು ತರುವುದು ತಪ್ಪಲಿದೆ ಎಂದು ಸಲಹೆ ನೀಡಿದರು.

ನಗರದಲ್ಲಿ 4 ಲಕ್ಷ ಬೋರ್‌ವೆಲ್ ಕೊರೆದಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬೋರ್‌ವೆಲ್ ಹಾಕಲು ಯಾವಾಗ ಆರಂಭಿಸಲಾಯಿತೋ ಅಂದಿನಿಂದ ಜನರು ನಮ್ಮ ಕೆರೆ, ಬಾವಿಗಳನ್ನು ಕಡೆಗಣಿಸಿದರು. ಆದ್ದರಿಂದ ಪ್ರಸ್ತುತ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಬಾವಿಗಳ ಸಂರಕ್ಷಣೆ, ಕೆರೆಗಳನ್ನು ಪುನಶ್ಚೇತನಗೊಳಿಸಬೇಕಿದೆ ಎಂದು ಮನವಿ ಮಾಡಿದರು.

1876ರಲ್ಲಿ ಬೆಂಗಳೂರಿಗೆ ಭೀಕರ ಬರಗಾಲ ಬಂದಿದ್ದು, ಅಂದಿನ ಮೈಸೂರು ಮಹಾರಾಜರು ಅರ್ಕಾವತಿ ನದಿಯ ನೀರನ್ನು ಹೆಸರು ಘಟ್ಟ ಕೆರೆಗೆ ಹರಿಸಿದ್ದರು. ಅಲ್ಲಿಂದ ಪಂಪ್ ಮೂಲಕ ನಗರದ ಜನರಿಗೆ ನೀರೊದಗಿಸಿದ್ದರು. ಅಂದಿನಿಂದ ನದಿ ನೀರನ್ನೇ ಅವಲಂಬಿಸಲಾಯಿತು. ಪ್ರಸ್ತುತ ಜನರಿಗೆ ಕಾವೇರಿ ನದಿ ನೀರು ಸರಬರಾಜು ಮಾಡಲಾಗುತ್ತಿದ್ದು, ಹೆಚ್ಚಿನ ನೀರಿನ ಅಗತ್ಯತೆಗಾಗಿ ಪ್ರಸ್ತುತ ಸರಕಾರ ಲಿಂಗನಮಕ್ಕಿ ನೀರನ್ನು ತರಲು ಮುಂದಾಗುತ್ತಿದೆ. ನಮ್ಮಲ್ಲಿರುವ ಕೆರೆಗಳಿಗೆ ಮೊದಲಿನ ರೂಪ ನೀಡಿದರೆ ನದಿ ತಿರುವು ಅವಶ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ.ಜಿ.ಚಂದ್ರಕಾಂತ್ ಮಾತನಾಡಿ, ನಗರ ಪ್ರದೇಶ ಮಾತ್ರವಲ್ಲದೇ ಗ್ರಾಮೀಣ ಪ್ರದೇಶದಲ್ಲಿಯೂ ನೀರಿನ ಸಮಸ್ಯೆ ತೆಲೆದೂರಿದೆ. ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದ್ದು, ಹೆಚ್ಚು ನೀರು ಬೇಕಾಗುವ ಕೃಷಿಯನ್ನು ಕಡಿಮೆ ಮಾಡಿ ರೇಷ್ಮೆಯಂತ ಕೃಷಿ ಕಡೆ ರೈತರು ಮುಖ ಮಾಡಬೇಕಿದೆ. ಕೆಲ ಕೈಗಾರಿಕೆಗಳು ತ್ಯಾಜ್ಯವನ್ನು ಕೊಳವೆ ಬಾವಿಗೆ ಸುರಿಯುತ್ತಿದ್ದು, ಪರಿಸರಕ್ಕೆ ಮಾರಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಲ ಸಾಕ್ಷರತೆ, ಕೆರೆಗಳ ಅಭಿವೃದ್ಧಿ, ಪುನಶ್ಚೇತನಗೊಳಿಸಿದರೆ ನಗರಕ್ಕೆ ಕಾವೇರಿ, ಲಿಂಗನಮಕ್ಕಿ ನೀರು ತರುವ ಅವಶ್ಯಕತೆ ಬರುವುದಿಲ್ಲ.

- ಎಸ್.ವಿಶ್ವನಾಥ, ಪರಿಸರ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News