ಸಹಜ ಕೃಷಿಯ ಹಿಂದಿರುವ ಸರಕಾರದ ಅಸಹಜ ನಡೆಗಳು

Update: 2019-07-28 19:05 GMT

ಸಮಸ್ಯೆಗಳನ್ನು ಪರಿಹರಿಸಲು ಅಸಾಧ್ಯವಾದರೆ, ವಾಸ್ತವಗಳನ್ನು ಮರೆಮಾಚುವುದು ಅಥವಾ ಅದಕ್ಕೆ ಬೆನ್ನು ಹಾಕುವುದೇ ಇರುವ ಪರಿಹಾರ ಎನ್ನುವುದು ಸರಕಾರ ಇತ್ತೀಚಿನ ಕೆಲವು ದಶಕಗಳಿಂದ ಕಂಡು ಹಿಡಿದ ಹೊಸ ಶೋಧನೆ. ನಾಡಿನ ರೈತರು ಆಧುನಿಕ ಗೊಬ್ಬರಗಳಿಗಾಗಿ ಬೀದಿಯಲ್ಲಿ ಸಾಲುಗಟ್ಟಿ ನಿಂತಾಗ, ಅದನ್ನು ಸೂಕ್ತ ಸಮಯದಲ್ಲಿ ಒದಗಿಸಲು ವಿಫಲವಾದ ಸರಕಾರ ‘ಸಾವಯವ ಕೃಷಿ’ ಕುರಿತಂತೆ ಮಾತನಾಡತೊಡಗಿತು. ಸಾವಯವ ಕೃಷಿ ಆರೋಗ್ಯದ ದೃಷ್ಟಿಯಿಂದ ಯೋಗ್ಯವೇನೋ ನಿಜ. ಆದರೆ ಕೃಷಿಯನ್ನೇ ಜೀವನೋಪಾಯ ಮಾಡಿಕೊಂಡಿರುವವರು ಸಾವಯವ ಕೃಷಿಯ ಮೂಲಕ ತಮ್ಮ ಜಮೀನಿನಲ್ಲಿ ಅತ್ಯಧಿಕ ಬೆಳೆಯನ್ನು ಬೆಳೆಯಬಹುದು ಎನ್ನುವುದು ವೈಜ್ಞಾನಿಕವಾಗಿ ಇನ್ನೂ ಸ್ಪಷ್ಟವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕೃಷಿಕರಿಗೆ ದೊಡ್ಡ ಮಟ್ಟದಲ್ಲಿ ಸಾವಯವ ಗೊಬ್ಬರಗಳನ್ನು ತಲುಪಿಸುವ ದಾರಿಯೂ ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಸರಕಾರ ಸಾವಯವ ಗೊಬ್ಬರಗಳಿಗಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯ ಮಾಡುತ್ತಿದೆಯಾದರೂ, ಈ ಹಣ ನಿಜವಾದ ಕೃಷಿಕರನ್ನು ತಲುಪುತ್ತಿಲ್ಲ. ಹಲವು ಮಧ್ಯವರ್ತಿಗಳು, ಸಂಘಟನೆಗಳ ಕೈಗಳನ್ನು ದಾಟಿ ರೈತರನ್ನು ತಲುಪುವ ಹೊತ್ತಿಗೆ ಸಾವಯವ ಎನ್ನುವ ಕಲ್ಪನೆ ಸಾಯುವ ಹಂತಕ್ಕೆ ಬಂದಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ರೈತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣದ ಒಂದು ಭಾಗವನ್ನೇ ಸಾವಯವ ಕೃಷಿಯ ಹೆಸರಲ್ಲಿ ಹಂಚುವುದರಿಂದ, ಆಧುನಿಕ ಗೊಬ್ಬರಗಳನ್ನು ಬಳಸಿ ಒಂದಿಷ್ಟು ನೆಮ್ಮದಿ ಕಾಣುತ್ತಿದ್ದ ರೈತರು ಇನ್ನಷ್ಟು ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ತೆಗೆದುಕೊಳ್ಳೋಣ. ಹಾಗೂ ಹೀಗೂ ಸರಕಾರಿ ಆಸ್ಪತ್ರೆಗಳು ತಮ್ಮ ಮಿತಿಯಲ್ಲಿ ಬಡವರಿಗೆ ಪುಕ್ಕಟೆಯಾಗಿ ಔಷಧಿಗಳನ್ನು ಪೂರೈಕೆ ಮಾಡುತ್ತಿತ್ತು. ಸಾರ್ವಜನಿಕ ಆರೋಗ್ಯ ಕ್ಷೇತ್ರ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಇಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರುವ ಬದಲು, ಇದರೊಳಗೆ ‘ಆಯುಷ್’ನ್ನು ತುರುಕಲಾಯಿತು. ಅತ್ಯಂತ ಮಾರಕ ಕಾಯಿಲೆಗಳಿಗೆ ಆಯುರ್ವೇದ, ಅಲೋಪತಿಯಂತಹ ಪದ್ಧತಿಯಲ್ಲಿ ಔಷಧಿಗಳಿಲ್ಲ ಎನ್ನುವುದು ತಿಳಿದೂ ಸರಕಾರ ಬಲವಂತವಾಗಿ ಆಯುಷ್‌ನ್ನು ಜನರ ಮೇಲೆ ಹೇರಿತು. ಜನರನ್ನು ಉಳಿಸುವುದಕ್ಕಾಗಿಯಲ್ಲ, ಆಯುರ್ವೇದ, ಅಲೋಪತಿಯಂತಹ ಪಾರಂಪರಿಕ ಚಿಕಿತ್ಸೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಸರಕಾರ ತೆಗೆದುಕೊಂಡ ತೀರ್ಮಾನ ಇದಾಗಿದೆ. ಆಯುರ್ವೇದ ಹೆಸರಲ್ಲಿ ಕೋಟಿಕೋಟಿ ಬಾಚುತ್ತಿರುವ ರಾಮ್‌ದೇವ್‌ರಂತಹ ಸ್ವಯಂಘೋಷಿತ ಬಾಬಾಗಳ ಲಾಬಿಯೂ ಇದರ ಹಿಂದಿದೆ. ಆಯುರ್ವೇದ, ಅಲೋಪತಿ ಯಾವೆಲ್ಲ ರೋಗಗಳಿಗೆ ಪರಿಣಾಕಾರಿ ಚಿಕಿತ್ಸೆ ನೀಡುತ್ತಿದೆ ಎನ್ನುವುದನ್ನು ಇನ್ನೂ ತಜ್ಞರು ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲದೇ ಇರುವಾಗ, ಸಾರ್ವಜನಿಕ ಆರೋಗ್ಯದ ಮೇಲೆ ಆಯುಷ್‌ನ್ನು ಹೇರಿರುವುದು ಎಷ್ಟರಮಟ್ಟಿಗೆ ಸರಿ?

ಇದೀಗ ಸರಕಾರ ಕೃಷಿ ಕ್ಷೇತ್ರದಲ್ಲಿ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಸಹಜ ಕೃಷಿಯ ಬಗ್ಗೆ ತೀವ್ರ ಆಸಕ್ತಿಯನ್ನು ತಾಳಿದಂತೆ ನಟಿಸುತ್ತಿದೆ. ಸಹಜಕೃಷಿಯನ್ನು ದೇಶಾದ್ಯಂತ ಹರಡಿದವರು ಸುಭಾಷ್ ಪಾಳೇಕರ್. 2016ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಲಾಯಿತು. ಆ ಮೂಲಕ ಶೂನ್ಯ ಬಜೆಟ್ ಕೃಷಿ ಅಥವಾ ಸಹಜ ಕೃಷಿ ಪರಿಕಲ್ಪನೆಯನ್ನು ದೇಶಾದ್ಯಂತ ಸಾರ್ವಜನಿಕರ ಅವಗಾಹನೆಗೆ ತರಲಾಯಿತು. ಸಹಜ ಕೃಷಿ ಅಥವಾ ಶೂನ್ಯ ಬಜೆಟ್ ಕೃಷಿಯ ಕುರಿತಂತೆ ಸರಕಾರ ಆಸಕ್ತಿ ತಾಳಲು ಮುಖ್ಯ ಕಾರಣ, ಅದೊಂದು ಯಶಸ್ವಿ ಕೃಷಿ ವಿಧಾನವೆನ್ನುವುದು ಮನವರಿಕೆಯಾಗಿರುವುದರಿಂದ ಅಲ್ಲ. ಸರಕಾರದ ಪ್ರಕಾರ ರೈತರ ಗೊಬ್ಬರ ಮತ್ತು ಕ್ರಿಮಿನಾಶಕಗಳ ಬೇಡಿಕೆಗಳನ್ನು ಈ ಕೃಷಿ ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಬಹುದು ಎನ್ನುವ ದೂರದೃಷ್ಟಿಯೇ ಸಹಜ ಕೃಷಿ ಕುರಿತ ಆಸಕ್ತಿಗೆ ಕಾರಣವಾಗಿದೆ. ಈ ಮೂಲಕ ಕೃಷಿಕರ ಉತ್ಪಾದನಾ ವೆಚ್ಚ ಇಳಿಕೆಯಾಗುತ್ತದೆ ಎನ್ನುವುದು ಸರಕಾರದ ಲೆಕ್ಕಾಚಾರ. ಎರಡನೆಯದಾಗಿ, ಮೇಲಿನ ಕಾರಣದ ಪರಿಣಾಮವಾಗಿ ರೈತಾಪಿಯು ಸಾಲದ ಬಲೆಯಲ್ಲಿ ಸಿಲುಕುವುದನ್ನು ತಡೆಗಟ್ಟಬಹುದು. ಬಿಜೆಪಿಯು ತನ್ನ ಬಜೆಟ್‌ನ ಮೂಲಕ ಹಾಗೂ 2018-19ರ ಆರ್ಥಿಕ ಸಮೀಕ್ಷೆಯ ಮೂಲಕ ಈ ಶೂನ್ಯ ಬಜೆಟ್ ಕೃಷಿಯನ್ನು ಉತ್ತೇಜಿಸುತ್ತಿರುವುದಕ್ಕೆ ಮೇಲೆ ಹೇಳಲಾದ ವಿಷಯಗಳು ಕಾರಣವಾಗಿದ್ದರೆ ಸರಕಾರದ ಉದ್ದೇಶಗಳನ್ನು ಅನುಮಾನಿಸಬೇಕಿರಲಿಲ್ಲ.

ಪಾಳೇಕರ್ ಅವರು ಪ್ರತಿಪಾದಿಸುವ ಸಹಜ ಕೃಷಿ ಒಂದು ಆದರ್ಶವೇನೋ ನಿಜ. ಆದರೆ ಈ ಶೂನ್ಯ ಕೃಷಿ ಪದ್ಧತಿಯ ಬಗ್ಗೆ ಅವರೇ ಬರೆದ ಪುಸ್ತಕಗಳನ್ನೂ ಹಾಗೂ ಅವರಿಗೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಪತ್ರಿಕೆಗಳು ಪ್ರಕಟಿಸಿದ ಕೆಲವು ಅಧ್ಯಯನ ವರದಿಗಳನ್ನು ಹೊರತುಪಡಿಸಿದರೆ ಅವರ ಕೃಷಿ ಪದ್ಧತಿಯ ಆರ್ಥಿಕ ಅಂದಾಜುಗಳ ಬಗ್ಗೆ ಯಾವುದೇ ಆಳವಾದ ಸ್ವತಂತ್ರ ಅಧ್ಯಯನಗಳು ಸಾರ್ವಜನಿಕ ವಲಯದಲ್ಲಿ ಲಭ್ಯವಿಲ್ಲ. ಈ ಕೃಷಿ ಪದ್ಧತಿ ಮಧ್ಯಮ ರೈತರನ್ನು ಆಕರ್ಷಿಸಿದೆಯಾದರೂ, ಎಲ್ಲ ರೈತಾಪಿ ವರ್ಗವನ್ನ್ನು ಇದು ಇನ್ನೂ ಒಳಗೊಂಡಿಲ್ಲ. ಜೊತೆಗೆ ಇದಿನ್ನೂ ಪೂರ್ಣಪ್ರಮಾಣದ ಯಶಸ್ಸನ್ನು ಘೋಷಿಸಿಲ್ಲ. ಸಹಜಕೃಷಿಗೆ ಇಳಿದವರು ಮತ್ತೆ ಹಳೆಯ ಕೃಷಿ ಪದ್ಧತಿಯ ಕಡೆಗೆ ಹೊರಳಿದ ಉದಾಹರಣೆಗಳೂ ಇವೆ. ನೂತನ ಸರಕಾರದ ‘ರಾಷ್ಟ್ರೀಯತೆ’ ಎನ್ನುವ ಭಾವೋನ್ಮಾದದ ಒಳಗೆ ವಿಜ್ಞಾನ, ಆರೋಗ್ಯ, ಕೃಷಿಯಂತಹ ವಲಯಗಳೂ ಸೇರುತ್ತಿವೆ ಎನ್ನುವುದನ್ನು ನಾವು ಗಮನಿಸಬೇಕು. ವಿಮಾನ, ಪ್ರನಾಳ ಶಿಶು, ಸರ್ಜರಿ ಇತ್ಯಾದಿಗಳೆಲ್ಲ ಪುರಾಣಕಾಲದಲ್ಲೇ ಇತ್ತು ಎನ್ನುವ ಪ್ರತಿಪಾದನೆಗಳನ್ನು ಸರಕಾರ ಮಾಡತೊಡಗಿದೆ. ಒಂದು ರಾಜ್ಯದ ಮುಖ್ಯಮಂತ್ರಿ ‘ದನ ಆಮ್ಲಜನಕವನ್ನು ಸೇವಿಸಿ ಆಮ್ಲಜನಕವನ್ನು ಹೊರಗೆ ಬಿಡುವ ಪ್ರಾಣಿ’ ಎನ್ನುವುದನ್ನು ಯಾವ ಅಂಜಿಕೆಯೂ ಇಲ್ಲದೆ ಸಾರ್ವಜನಿಕ ವೇದಿಕೆಗಳಲ್ಲಿ ಆಡುತ್ತಿದ್ದಾರೆ. ಗೋಮೂತ್ರದಿಂದ ಕ್ಯಾನ್ಸರ್ ವಾಸಿಯಾಗುತ್ತದೆ, ವೇದಕಾಲದಲ್ಲೇ ಎಲ್ಲ ರೋಗಗಳಿಗೆ ಚಿಕಿತ್ಸೆಗಳಿದ್ದವು, ಅಲೋಪತಿಯಂತಹ ಔಷಧಿಗಳಿಂದಾಗಿ ರೋಗಗಳು ಉಲ್ಬಣಿಸಿದವು ಎಂಬ ಸುಳ್ಳುಗಳನ್ನೂ ಇಂದು ವ್ಯಾಪಕವಾಗಿ ಹರಿಯಬಿಡಲಾಗುತ್ತಿದೆ. ಇದೇ ಹೊತ್ತಿನಲ್ಲಿ ಸಾವಯವ ಕೃಷಿ ಮತ್ತು ಸಹಜ ಕೃಷಿಯ ಕುರಿತಂತೆಯೂ ಅಧಿಕೃತ ತಜ್ಞರ ಅಧ್ಯಯನಗಳು ಸ್ಪಷ್ಟ ನಿರ್ದೇಶನ ನೀಡುವ ಮೊದಲೇ ಸರಕಾರ ಜನರಲ್ಲಿ ಭ್ರಮೆಗಳನ್ನು ಬಿತ್ತಲು ಹೊರಟಿದೆ. ಶೂನ್ಯ ಕೃಷಿಗೆ ಪ್ರೋತ್ಸಾಹ ನೀಡುವುದೇನೋ ಸರಿ. ಆದರೆ ಅದನ್ನು ರೈತರ ಮೇಲೆ ಅಧಿಕೃತವಾಗಿ ಹೇರುವ ಪ್ರಯತ್ನವನ್ನು ಸರಕಾರ ನಡೆಸಬಾರದು. ಅದು ರೈತರ ಪರ್ಯಾಯ ಆಯ್ಕೆ ಮುಖ್ಯವಾಗಿ ಐಚ್ಛಿಕವಾದ ಆಯ್ಕೆಯಾಗಿರಬೇಕು. ಶೂನ್ಯ ಬಜೆಟ್ ಕೃಷಿಯ ಹೆಸರಿನಲ್ಲಿ ಕೃಷಿಕರಿಗಾಗಿ ವ್ಯಯ ಮಾಡಲಾಗುವ ಹಣ ಇತರರ ಪಾಲಾಗಬಾರದು. ಇದು ಕೇವಲ ಕೃಷಿಗೆ ಮಾತ್ರವಲ್ಲ, ಆರೋಗ್ಯ ಕ್ಷೇತ್ರಗಳಿಗೂ ಅನ್ವಯವಾಗಬೇಕಾದ ಅಂಶ. ಆದರ್ಶಗಳನ್ನು ವಾಸ್ತವ ಮಾಡುವ ಆತುರದಲ್ಲಿ ಇರುವ ವಾಸ್ತವಗಳನ್ನು ಇನ್ನಷ್ಟು ಹದಗೆಡಿಸುವುದಕ್ಕೆ ಸರಕಾರ ಮುಂದಾಗಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News