ಸದ್ಯದಲ್ಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡಲಿದ್ದೇನೆ: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್

Update: 2019-07-29 05:17 GMT

ಬೆಂಗಳೂರು, ಜು.29: ‌ಕಾಂಗ್ರೆಸ್ ಪಕ್ಷದ ಋಣ ತೀರಿಸುವ ಸಲುವಾಗಿ ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದನ್ನು ನಾವು ಮೊದಲೇ ಊಹೆ ಮಾಡಿದ್ದೆವು. ಹೀಗಾಗಿಯೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ಇದೀಗ ನಾವು ಮತ್ತೆ ಕಾನೂನು ಹೋರಾಟ ಮಾಡುತ್ತೇವೆ. ನಾನು ಸದ್ಯದಲ್ಲೇ ಕ್ಷೇತ್ರದ ಜನರ ಸಭೆ ಕರೆದು ಚರ್ಚಿಸಿ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಳೆದ ಕೆಲ ದಿನಗಳಿಂದ ಮುಂಬೈ ಸೇರಿದಂತೆ ಹೊರ ರಾಜ್ಯಗಳಲ್ಲಿ ಉಳಿದುಕೊಂಡಿದ್ದ ಸೋಮಶೇಖರ್ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಪ್ರತ್ಯಕ್ಷಗೊಂಡಿದ್ದು, ಮಾಧ್ಯಮದೆದುರು ಮಾತನಾಡುತ್ತಿದ್ದರು.

ನಂಬಿಕೆ ದ್ರೋಹಕ್ಕೆ ಮತ್ತೊಂದು ‌ಹೆಸರು ಕೃಷ್ಣಭೈರೇಗೌಡ. ಅವರು ಸದನದಲ್ಲಿ ನಮ್ಮ ಬಗ್ಗೆ ಮಾತನಾಡಿರುವುದನ್ನು ಗಮನಿಸಿದ್ದೇವೆ. ಕೃಷ್ಣ ಭೈರೇಗೌಡ ಸಾಚಾ ಅಲ್ಲ. ಜೆಡಿಎಸ್ ಗೆ ಬೆನ್ನಿಗೆ ‌ಚೂರಿ‌ಹಾಕಿ ಕಾಂಗ್ರೆಸ್ ಗೆ ಬಂದಿದ್ದರು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸೋಮಶೇಖರ್, ದೇವೇಗೌಡರ ಮಾತಿನಂತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆಯೇ ಹೊರತು ಅವನ ಸೋಲಿಗೆ ನಾವು ಕಾರಣವಲ್ಲ ಎಂದರು.

ನಮ್ಮನ್ನು ಬೆದರಿಸುವ ಕೆಲಸವನ್ನು ಕೆಲವು ಕಾಂಗ್ರೆಸ್ ನಾಯಕರು ವಿಧಾನಸಭೆಯಲ್ಲಿ ರಣಧೀರರಂತೆ ಮಾತನಾಡಿದ್ದಾರೆ. ಚುನಾವಣೆ ರಣರಂಗದಲ್ಲಿ ಭೇಟಿ ಮಾಡುವುದಾಗಿ ಕೆಲವರು ಹೇಳಿದ್ದಾರೆ. ಅವರನ್ನು ರಣರಂಗದಲ್ಲಿ ಸ್ವಾಗತಿಸುತ್ತೇವೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಎಸ್.ಟಿ.ಸೋಮಶೇಖರ್, ‌ಮೈತ್ರಿ ಸರ್ಕಾರ ಪತನವಾಗಬೇಕೆಂಬುದು ಕಾಂಗ್ರೆಸ್ ಪಕ್ಷದ ಬಹುತೇಕ ‌ನಾಯಕರ ಇಚ್ಛೆಯಾಗಿತ್ತು. ಆ ನಾಯಕರೇ ವಿಧಾನಸಭೆಯಲ್ಲಿ ಸರ್ಕಾರ ಉಳಿಸುವ ಪ್ರಯತ್ನ ಮಾಡುವ ಗೋಸುಂಬೆತನ ತೋರಿಸಿದ್ದಾರೆ ಎಂದು ಆರೋಪಿಸಿದರು.

ಸಿ.ಎಲ್.ಪಿ. ನಾಯಕರು ಪ್ರಳಯವಾದರೂ ನಮ್ಮನ್ನು ಪಕ್ಷಕ್ಕೆ ಸೇರಿಸಲ್ಲ ಎಂದಿದ್ದಾರೆ. ಬಳ್ಳಾರಿ ಪಾದಯಾತ್ರೆ ಸಂದರ್ಭವನ್ನು ‌ಸಿದ್ದರಾಮಯ್ಯ‌ ಮರೆತು ಪಟಾಲಾಂ ಮಾತು ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News