ಬೆಂಗಳೂರಿಗೆ ಆಗಮಿಸಿದ ಐವರು ಅನರ್ಹ ಶಾಸಕರು

Update: 2019-07-29 05:41 GMT
ಫೋಟೊ ಕೃಪೆ: ANI

ಬೆಂಗಳೂರು, ಜು.29: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿ ಮುಂಬೈ ಸೇರಿದ್ದ ಶಾಸಕರ ಪೈಕಿ ಕಾಂಗ್ರೆಸ್ ನ ಐವರು ಅನರ್ಹ ಶಾಸಕರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಪ್ರತ್ಯಕ್ಷಗೊಂಡಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕರಾಗಿದ್ದ ಮುನಿರತ್ನ, ಕೆ.ಆರ್.ಪುರದ ಬೈರತಿ ಬಸವರಾಜು, ಹೊಸಕೋಟೆಯ ಎಂಟಿಬಿ ನಾಗರಾಜ್, ಯಶವಂತಪುರದ ಎಸ್.ಟಿ. ಸೋಮಶೇಖರ್ ಹಾಗೂ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಇಂದು ಮುಂಜಾನೆ ಬೆಂಗಳೂರು ತಲುಪಿದ್ದಾರೆ.

ಇಂದು ಬೆಳಗ್ಗೆ ಮುಂಬೈಯಿಂದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಈ ಸಂದರ್ಭ ಯಾರೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ಭಿನ್ನಮತೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಒಟ್ಟು 17 ಶಾಸಕರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಮುಂಬೈ ಸೇರಿದಂತೆ ಹೊರ ರಾಜ್ಯಗಳಲ್ಲಿ ಅಜ್ಞಾತ ಸ್ಥಳಗಳಲ್ಲಿ ಉಳಿದುಕೊಂಡಿದ್ದರು.

ಈ ನಡುವೆ ಪಕ್ಷದ ವಿಪ್ ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ 17 ಶಾಸಕರನ್ನೂ ಸ್ಪೀಕರ್ ರಮೇಶ್ ಕುಮಾರ್ ರವಿವಾರ ಅನರ್ಹಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News