ವಿಶ್ವಾಸಮತದ ಅಗ್ನಿ ಪರೀಕ್ಷೆ ಗೆದ್ದ ಮುಖ್ಯಮಂತ್ರಿ ಯಡಿಯೂರಪ್ಪ

Update: 2019-07-29 14:31 GMT

ಬೆಂಗಳೂರು, ಜು. 29: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಿರೀಕ್ಷೆಯಂತೆ ಬಹುಮತ ಸಾಬೀತುಪಡಿಸುವ ಮೂಲಕ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ವಿಶ್ವಾಸಮತ ಪ್ರಸ್ತಾವಕ್ಕೆ ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ ಸಿಕ್ಕಿದೆ.

ಸೋಮವಾರ ಬೆಳಗ್ಗೆ ವಂದೇಮಾತರಂ ಗೀತೆಯೊಂದಿಗೆ ಕಲಾಪ ಆರಂಭವಾದ ಬಳಿಕ ಸ್ಪೀಕರ್ ರಮೇಶ್‌ಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಿಶ್ವಾಸಮತ ಪ್ರಸ್ತಾವ ಮಂಡಿಸಲು ಅವಕಾಶ ಕಲ್ಪಿಸಿದರು. ನಿರ್ಣಯದ ಮೇಲೆ ಅಲ್ಪಕಾಲ ಚರ್ಚೆ ಬಳಿಕ ‘ರಾಜ್ಯದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುವ ಸಂಕಲ್ಪ ಮಾಡಿದ್ದು, ವಿಶ್ವಾಸಮತ ಪ್ರಸ್ತಾವಕ್ಕೆ ಅಂಗೀಕಾರ ನೀಡಬೇಕು’ ಎಂದು ಕೋರಿದರು.

ಸ್ಪೀಕರ್ ರಮೇಶ್‌ಕುಮಾರ್ ಪ್ರಸ್ತಾವವನ್ನು ಮತಕ್ಕೆ ಹಾಕಿದ ವೇಳೆ ನಿರ್ಣಯಕ್ಕೆ ಧ್ವನಿಮತದ ಅಂಗೀಕಾರ ದೊರೆಯಿತು. ಈ ವೇಳೆ ಕಾಂಗ್ರೆಸ್-ಜೆಡಿಎಸ್ ಸೇರಿದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಲಿಲ್ಲ. ಅನಂತರ ಸ್ಪೀಕರ್ ಧ್ವನಿಮತದ ಅಂಗೀಕಾರಕ್ಕೆ ಒಪ್ಪಿಗೆ ಇದೆಯೇ ಎಂದು ಪ್ರಕಟಿಸಿದರು.

ಬಿಜೆಪಿಯ ಎಲ್ಲ 105 ಶಾಸಕರು ಸದನದಲ್ಲಿ ಹಾಜರಿದ್ದು, ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದರು. ಯಾರೂ ವಿಭಜನೆಗೆ ಆಗ್ರಹಿಸಲಿಲ್ಲ. ಪ್ರಸ್ತಾವಕ್ಕೆ ಅಂಗೀಕಾರ ಸಿಕ್ಕಿದೆ ಎಂದು ಸ್ಪೀಕರ್ ಪ್ರಕಟಿಸುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

ಜನಸೇವೆಗೆ ಸಹಕರಿಸಿ: ಆರಂಭಕ್ಕೆ ವಿಶ್ವಾಸಮತ ನಿರ್ಣಯ ಮಂಡಿಸಿ ಮಾತನಾಡಿದ ಯಡಿಯೂರಪ್ಪ, ಈ ಸಂದರ್ಭದಲ್ಲಿ ನಾಡಿನ ಅಧಿಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಗೆ ನಮಿಸಿ ಬಸವಾದಿ ಶರಣರು, ರಾಷ್ಟ್ರಪಿತ ಮಹಾತ್ಮಗಾಂಧಿ, ಸಂವಿಧಾನ ಶಿಲ್ಪಿಬಿ.ಆರ್.ಅಂಬೇಡ್ಕರ್ ಅವರಿಗೆ ವಂದಿಸುತ್ತೇನೆ.

ರಾಜ್ಯದ ಜನರ ಆಶಯದಂತೆ ಮತ್ತೊಮ್ಮೆ ನಾನು ಸಿಎಂ ಆಗಲು ದೊರೆತ ಅವಕಾಶ ನಾಡಿನ ಜನರಿಗೆ ಸಂದ ಗೌರವ. ಮುಖ್ಯಮಂತ್ರಿಯಾಗಲು ಹಲವು ಕಾರಣಗಳಿದ್ದರೂ ಅದನ್ನು ಈ ಸಂದರ್ಭದಲ್ಲಿ ವಿಶ್ಲೇಷಿಸುವುದಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸೇಡಿನ ರಾಜಕಾರಣ ಮಾಡಿಲ್ಲ ಎಂದರು.

ವಿಪಕ್ಷವಾಗಿ ಸರಕಾರವನ್ನು ಟೀಕೆ ಮಾಡುವುದು ಸಹಜ. ಮುಂದಿನ ನಾಲ್ಕೈದು ತಿಂಗಳಲ್ಲಿ ಸರಕಾರ ಜನಪರವಾಗಿ ಅಭಿವೃದ್ಧಿಯ ಗುರಿಯೊಂದಿಗೆ ಆಡಳಿತ ನಡೆಸಲಿದೆ. ಪ್ರಸ್ತುತ ಆಡಳಿತ ಯಂತ್ರ ಕುಸಿದಿದ್ದು, ಇದನ್ನು ಸರಿದಾರಿಗೆ ತರುವುದು ನಮ್ಮ ಮೊದಲ ಆದ್ಯತೆ. ನಾನೂ ಕೂಡ ದ್ವೇಷದ ರಾಜಕಾರಣ ಮಾಡುವುದಿಲ್ಲ.

ರಾಜ್ಯದ ಜನರ ಆಶೀರ್ವಾದದಿಂದ ಸಿಎಂ ಆಗಿದ್ದು, ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸುವೆ. ರಾಜ್ಯವೆ ಸಂದಿಗ್ಧ ಸ್ಥಿತಿಯಲ್ಲಿದೆ. ಜುಲೈ 31 ಕಳೆದರೆ ಸರಕಾರದ ಹಣ ಖರ್ಚು ಮಾಡಲಾಗುವುದಿಲ್ಲ. ಹೀಗಾಗಿ ರಾಜ್ಯಪಾಲರು ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಆಹ್ವಾನ ನೀಡಿದರು. ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ ಎಂದು ಹೇಳಿದರು.

82 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ಭೀಕರ ಬರಗಾಲವಿದೆ. ನಾವು-ನೀವು ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸೋಣ. ಪ್ರಧಾನಿ ಮೋದಿ ಮೂರು ಕಂತಿನಲ್ಲಿ ರೈತರಿಗೆ 6ಸಾವಿರ ರೂ.ನೆರವು ನೀಡುವ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ನಾವೂ ರಾಜ್ಯದಿಂದ 2ಕಂತಿನಲ್ಲಿ 4 ಸಾವಿರ ರೂ. ನೀಡಲು ತೀರ್ಮಾನ ಮಾಡಿದ್ದೇವೆ. ಅದೇ ರೀತಿ ನೇಕಾರರ ಸಾಲಮನ್ನಾ ಘೋಷಿಸಲಾಗಿದೆ ಎಂದರು.

‘ರಾಜ್ಯದ ರೈತರು-ನೇಕಾರರು ಎರಡು ಕಣ್ಣುಗಳಿದ್ದಂತೆ. ಮತದಾರರು ನಮ್ಮ ಮಾಲಕರಾಗಿದ್ದು, ಅವರ ಸೇವೆ ಮಾಡುವುದು ನಮ್ಮ ಧ್ಯೇಯ. ಜನಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿ ಆಡಳಿತ ನಡೆಸಲಿದ್ದು, ವಿಪಕ್ಷಗಳು ಸಹಕಾರ ಬಯಸುತ್ತೇನೆ’ ಎಂದು ಯಡಿಯೂರಪ್ಪ ತಿಳಿಸಿದರು.

ಬಾಕ್ಸ್..

‘ರಾಜ್ಯದ ಜನತೆ ಆಶೀರ್ವಾದದಿಂದ ದೊರೆತ ಅಧಿಕಾರವನ್ನು ಉಳಿದ ಮೂರು ವರ್ಷ ನಾಲ್ಕು ತಿಂಗಳು ನಾಡಿನ ಕಲ್ಯಾಣಕ್ಕಾಗಿ ಬಳಕೆ ಮಾಡಿಕೊಳ್ಳುವೆ. ಸ್ವಚ್ಛ, ದಕ್ಷ ಹಾಗೂ ಜನ ಮೆಚ್ಚುವ ರೀತಿ ಆಡಳಿತ ನೀಡುವುದು ನಮ್ಮ ಗುರಿ. ನಾಡಿನ ಹಿತಕ್ಕೆ ಧಕ್ಕೆಯಾಗುವ ಕೆಲಸವನ್ನು ವಿಪಕ್ಷ ಗಮನಿಸಿ ತಿಳಿಸಿದರೆ ಕೂಡಲೇ ಸರಿಪಡಿಸಿಕೊಳ್ಳುವೆ’

-ಯಡಿಯೂರಪ್ಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News