Breaking News: ಮೀನುಗಾರರಿಗೆ ಸಿಹಿ ಸುದ್ದಿ: ವಾಣಿಜ್ಯ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಿಂದ ಪಡೆದ ಸಾಲಮನ್ನಾ

Update: 2019-07-29 15:50 GMT

ಬೆಂಗಳೂರು, ಜು.29: ವಾಣಿಜ್ಯ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಂದ ಪಡೆದಿರುವ ಸಾಲವನ್ನು ಸೋಮವಾರ ನಡೆದ ನೂತನ ಸಚಿವ ಸಂಪುಟ ಸಭೆಯಲ್ಲಿ ಮನ್ನಾ ಮಾಡಲಾಗಿದೆ ಎಂದು ಮೀನುಗಾರಿಕೆ ನಿರ್ದೇಶನಾಲಯದ ನಿರ್ದೇಶಕರ ಪ್ರಕಟನೆ ತಿಳಿಸಿದೆ.

2017-18 ಮತ್ತು 2018-19ನೆ ಸಾಲಿನಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಒಟ್ಟು 23,507 ಮೀನುಗಾರರ 60.584 ಕೋಟಿ ರೂ.ಸಾಲ ವಸೂಲಾತಿಗೆ ಬಾಕಿ ಇದೆ. ಇವತ್ತು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರಕಾರವು ಸಾಲವನ್ನು ಮನ್ನಾ ಮಾಡಿರುವುದರಿಂದ ಸುಮಾರು 23,507 ಮೀನುಗಾರರು ಆರ್ಥಿಕ ಸಂಕಷ್ಟದಿಂದ ಹೊರ ಬಂದು ಅವರ ಜೀವನವನ್ನು ಸುಧಾರಿಸಿಕೊಂಡು ಸಮಾಜದಲ್ಲಿ ಉತ್ತಮ ಬದಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಂತಾಗಿದೆ.

ಮೀನುಗಾರರು ಹಾಗೂ ವಿಶೇಷವಾಗಿ ಮಹಿಳಾ ಮೀನುಗಾರರು, ಮೀನುಗಾರಿಕೆ ಚಟುವಟಿಕೆಗಳಾದ ಮೀನು ಮಾರಾಟ ಪರಿಕರಗಳ ಖರೀದಿ, ಮೀನಿನ ವ್ಯಾಪಾರಕ್ಕಾಗಿ ಬಂಡವಾಳ, ಮೀನಿನ ಸಂರಕ್ಷಣೆ ಹಾಗೂ ಮೀನಿನ ಸಾಗಾಣಿಕೆ ಇತರೆ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಶೇ.2ರಷ್ಟು ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ಸಾಲ ಪಡೆಯುವ ಯೋಜನೆಯನ್ನು ಮೀನುಗಾರಿಕೆ ಇಲಾಖೆ ಅನುಷ್ಠಾನಗೊಳಿಸುತ್ತಿದೆ.

ಈ ಯೋಜನೆಯಲ್ಲಿ 50 ಸಾವಿರ ರೂ.ವರೆಗೆ ಸಾಲ ಪಡೆಯಲು ಅವಕಾಶವಿದೆ. ಪಡೆದುಕೊಂಡ ಸಾಲವನ್ನು 24 ತಿಂಗಳೊಳಗೆ(2 ವರ್ಷ) ಬ್ಯಾಂಕುಗಳಿಗೆ ಮರುಪಾವತಿಸಿದ ಮೀನುಗಾರರು ವ್ಯತ್ಯಾಸದ ಬಡ್ಡಿ ಮೊತ್ತಕ್ಕೆ ಪ್ರಯೋಜನ ಪಡೆಯಲು ಅರ್ಹರಿರುತ್ತಾರೆ.

ತಮಗೆ ಅನುಕೂಲವಾಗುವ ಮೀನುಗಾರಿಕೆ ಚಟುವಟಿಕೆಯ ಉದ್ದೇಶಗಳನ್ನು ಅಂತಿಮಗೊಳಿಸಿಕೊಂಡು ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿದ ನಂತರ ಸೂಕ್ತ ಶಿಫಾರಸ್ಸಿನೊಂದಿಗೆ ಅರ್ಜಿದಾರರ ವ್ಯಾಪ್ತಿಯ ಬ್ಯಾಂಕುಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುವುದು. ಪ್ರಸ್ತಾವನೆ ಪರಿಶೀಲನೆ ನಂತರ ಬ್ಯಾಂಕುಗಳು ಸಾಲವನ್ನು ಮಂಜೂರು ಮಾಡುತ್ತವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News