ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸದ ಸವಾರರ ವಿರುದ್ಧ 'ನೋ ಪೆಟ್ರೋಲ್’ ಅಸ್ತ್ರ

Update: 2019-07-29 14:49 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.29: ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಸಂಚಾರಿ ನಿಯಮಗಳ ಉಲ್ಲಂಘನೆ ಅಧಿಕವಾಗುತ್ತಿದೆ. ಹೀಗಾಗಿ, ನಗರ ಸಂಚಾರ ಪೊಲೀಸರು ಅಪಘಾತಗಳಿಂದ ಉಂಟಾಗುವ ಹಾನಿಯನ್ನು ತಡೆಯುವ ಸಲುವಾಗಿ ‘ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮ ಜಾರಿಗೆ ತರಲು ಗಂಭೀರ ಚಿಂತನೆ ನಡೆಸುತ್ತಿದ್ದಾರೆ.

ನಗರದಲ್ಲಿ ಪ್ರತಿದಿನ ಹೆಲ್ಮೆಟ್ ಇಲ್ಲದೆ ವಾಹನ ಸವಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಾರೆ. ಹಲವು ಕಡೆಗಳಲ್ಲಿ ಸಂಚಾರಿ ಪೊಲೀಸರು ತಡೆದು ದಂಡ ವಿಧಿಸಿದರೆ, ಕೆಲವು ಕಡೆಗಳಲ್ಲಿ ಕೈಗೆ ಸಿಗದಂತೆ ಓಡಾಡುತ್ತಿರುತ್ತಾರೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ಅಪಘಾತಗಳಾದ ವೇಳೆ ಹೆಚ್ಚು ಜನರು ಮೃತಪಡುತ್ತಿರುವುದು ಕಂಡುಬರುತ್ತದೆ.

ಈ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂಬುದನ್ನು ಜಾಗೃತಿ ಮೂಡಿಸುವ ಸಲುವಾಗಿ ಕಠಿಣ ನಿಯಮ ಜಾರಿಗೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಬಂಕ್‌ಗಳಿಗೆ ಬಂದರೆ ಪೆಟ್ರೋಲ್ ನೀಡದಂತೆ ಸೂಚಿಸುವ ಕಾನೂನು ಜಾರಿಗೆ ಚಿಂತನೆ ನಡೆದಿದ್ದು, ಶೀಘ್ರದಲ್ಲಿಯೇ ಜಾರಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ದಿಲ್ಲಿಯ ನೋಯ್ಡ ಹಾಗೂ ಉತ್ತರ ಪ್ರದೇಶದ ಆಲಿಘರ್ ನಗರಗಳಲ್ಲಿ ಇಂತಹ ನಿಯಮ ರೂಪಿಸಲಾಗಿದ್ದು, ಬೆಂಗಳೂರು ನಗರದಲ್ಲಿ ಇದನ್ನು ಜಾರಿ ಮಾಡಿದರೆ ಮೂರನೆ ನಗರವಾಗಲಿದೆ.

ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ನೀಡದಂತೆ ಬೆಂಗಳೂರು ನಗರದ ಪೆಟ್ರೋಲ್ ಬಂಕ್‌ಗಳ ಮಾಲಕರ ಬಳಿ ಸಭೆ ನಡೆಸಬೇಕಿದೆ. ಅವರ ಸಹಕಾರವೂ ಇದಕ್ಕೆ ಮುಖ್ಯವಾಗಲಿದೆ. ಈ ಕುರಿತು ಸಭೆಗಳನ್ನು ನಡೆಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜಧಾನಿಯಲ್ಲಿ ಪ್ರಸಕ್ತ ವರ್ಷದ ಜನವರಿಯಿಂದ ಜೂನ್ ಅಂತ್ಯದಲ್ಲಿ ನಡೆದ ಬೈಕ್ ಅಪಘಾತ ಪ್ರಕರಣಗಳಲ್ಲಿ 105 ಜನರು ಮೃತಪಟ್ಟಿದ್ದು, 667 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡುವುದು ಕಡ್ಡಾಯ ಎಂದು ಮೋಟಾರು ವಾಹನ ಕಾಯಿದೆಯಲ್ಲಿ ಹೇಳಲಾಗಿದೆ. ಹೀಗಿದ್ದರೂ, ಅನೇಕರು ಅದನ್ನು ಪಾಲನೆ ಮಾಡುವುದಿಲ್ಲ. ಹೀಗಾಗಿ, ಈ ನಿಯಮ ಜಾರಿ ಮಾಡಲು ಮುಂದಾಗಿದ್ದೇವೆಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನೋ ಹೆಲ್ಮೆಟ್ ನೋ ಪೆಟ್ರೋಲ್ ನಿಯಮ ಸಾಮಾಜಿಕ ಬದ್ಧತೆಯ ನಿಯಮದ ಅಡಿಯಲ್ಲಿ ರೂಪಿತಗೊಳ್ಳುವಂತಹದ್ದು. ಬೈಕ್ ಅಪಘಾತಗಳಿಂದ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ನಿಯಮ ಮಹತ್ವದ್ದಾಗಿದೆ. ನಿಯಮದ ರೂಪುರೇಷೆ ಬಗ್ಗೆ ಪೆಟ್ರೋಲ್ ಬಂಕ್‌ಗಳ ಮಾಲಕರ ಜತೆ ಚರ್ಚೆ ನಡೆಸಿ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

-ಪಿ.ಹರಿಶೇಖರನ್, ಸಂಚಾರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News