ಪಿಒಪಿ ಗಣೇಶ ಮೂರ್ತಿ ಉತ್ಪಾದಕರಿಗೆ ಬಿಬಿಎಂಪಿಯಿಂದ ನೋಟಿಸ್

Update: 2019-07-29 18:05 GMT

ಬೆಂಗಳೂರು, ಜು.29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವಂತೆ ಅಭಿಯಾನ ಆರಂಭಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಬಿಎಂಪಿಯಿಂದ ಎಲ್ಲ ಮಳಿಗೆಗಳಿಗೆ ನೋಟಿಸ್ ನೀಡಿದೆ.

ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆಯನ್ನು ನಿಷೇಧಿಸಲಾಗಿದೆ. ಇಂತಹ ಮೂರ್ತಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ತಯಾರಿಕೆ ಘಟಕಗಳಿಗೆ ವಾರದ ಹಿಂದೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಆದರೆ ಘಟಕಗಳು ಬಂದ್ ಆಗಿಲ್ಲ. ಈಗಾಗಲೇ ಸಾವಿರಾರು ಮೂರ್ತಿಗಳನ್ನು ತಯಾರಿಸಿ ಇಡಲಾಗಿದ್ದು, ಮತ್ತಷ್ಟು ಮೂರ್ತಿಗಳ ತಯಾರಿಕೆ ನಡೆದಿದೆ.

ಕುಂಬಳಗೋಡು, ಕೆಂಗೇರಿ ಬಳಿ ಐದು ಮಳಿಗೆಗಳಲ್ಲಿ 3 ರಿಂದ 4 ಸಾವಿರ ಪಿಒಪಿ ಮೂರ್ತಿಗಳು ತಯಾರಾಗಿವೆ. ವಾರದ ಹಿಂದಷ್ಟೆ ಇಲ್ಲಿ ತಪಾಸಣೆ ನಡೆಸಿದ ಬಿಬಿಎಂಪಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಆ ಮೂರ್ತಿಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಿದ್ದಾರೆ. ಕೆಲ ಮೂರ್ತಿಗಳು ಹಳೆಯದಾಗಿದ್ದು, ಮತ್ತೆ ಕೆಲವನ್ನು ಹೊಸದಾಗಿ ತಯಾರಿಸಲಾಗಿದೆ. ಮೂರ್ತಿ ತಯಾರಿ ಹಾಗೂ ಮಾರಾಟ ಚಟುವಟಿಕೆಯನ್ನು ಕೂಡಲೇ ನಿಲ್ಲಿಸಬೇಕೆಂದು ನೋಟಿಸ್ ನೀಡಲಾಗಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪಿಒಪಿ ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜಿಸಬಾರದೆಂದು 2014 ರಲ್ಲಿ ಆದೇಶ ಹೊರಡಿಸಿತ್ತು. ಪ್ರತಿ ವರ್ಷ ಗಣೇಶ ಹಬ್ಬಕ್ಕೆ ಮುನ್ನ ಮಾರುಕಟ್ಟೆಗಳಲ್ಲಿ ಪಿಒಪಿ ಮೂರ್ತಿಗಳು ಪ್ರತ್ಯಕ್ಷವಾಗುತ್ತಿದ್ದವು. ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ, ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿ ಪಿಒಪಿ ಮೂರ್ತಿ ತಯಾರಿಕಾ ಮಳಿಗೆಗಳಿಗೆ ಬೀಗ ಮುದ್ರೆ ಜಡಿದಿದ್ದಾರೆ. ಆದರೆ ಈ ವರ್ಷ ಹಲವೆಡೆ ಆರಂಭವಾಗಿರುವ ಮಳಿಗೆಗಳಲ್ಲಿ ಮತ್ತೆ ಪಿಒಪಿ ಮೂರ್ತಿಗಳು ಕಂಡುಬಂದಿವೆ. ಇವುಗಳನ್ನು ಮಾರಾಟ ಮಾಡಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಳಿಗೆಗಳಿಗೆ ನೋಟಿಸ್ ಮೈಸೂರು ರಸ್ತೆಯ ಆರ್‌ವಿ ಎಂಜಿನಿಯರಿಂಗ್ ಕಾಲೇಜು ಬಳಿಯ ಮಳಿಗೆ ಸೇರಿದಂತೆ ಹಲವು ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪಿಒಪಿ ಮೂರ್ತಿಗಳ ಉತ್ಪಾದನೆಯನ್ನು ಕೂಡಲೇ ಸ್ಥಗಿತಗೊಳಿಸದಿದ್ದರೆ ಮಳಿಗೆಗೆ ಬೀಗಮುದ್ರೆ ಹಾಕಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಮಳಿಗೆದಾರರು, ನಾಲ್ಕು ವರ್ಷಗಳ ಹಿಂದೆಯೇ ಪಿಒಪಿ ಮೂರ್ತಿ ತಯಾರಿಕೆ ಕೈ ಬಿಟ್ಟಿದ್ದೇವೆ. ಮಣ್ಣಿನ ಮೂರ್ತಿ ಮಾತ್ರ ತಯಾರಿಸುತ್ತಿದ್ದೇವೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಬಿಎಂಪಿಯಿಂದ ಎಲ್ಲ ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಕುಂಬಳಗೋಡು ಹಾಗೂ ಕೆಂಗೇರಿ ಸುತ್ತಮುತ್ತಲಿನ ಉತ್ಪಾದಕರು ನಗರದೊಳಗೆ ಪಿಒಪಿ ಮೂರ್ತಿ ತಂದು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪರಿಶೀಲನೆ ನಡೆಸಿ ಮಾರಾಟ ಮಾಡದಂತೆ ಸೂಚಿಸಲಾಗಿದೆ.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

ನಗರದ ಹೊರ ವಲಯದಿಂದ ಪಿಒಪಿ ಗಣೇಶ ಮೂರ್ತಿಗಳನ್ನು ರಾಜಧಾನಿಗೆ ತಂದು ಮಾರಾಟ ಮಾಡಬಾರದು. ಒಂದು ಪಕ್ಷ ಮಾರಾಟ ಮಾಡಿದರೆ ಕೆಎಂಸಿ ಕಾಯಿದೆ ಹಾಗೂ ಜಲಮಾಲಿನ್ಯ ಕಾಯಿದೆ-1974 ರ ಪ್ರಕಾರ ಪ್ರಕರಣ ದಾಖಲಿಸಿ, ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

-ಮನೋರಂಜನ್ ಹೆಗ್ಡೆ, ಬಿಬಿಎಂಪಿ ಆರೋಗ್ಯಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News