ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಪ್ರಿಯಾಂಕಾ ಸೂಕ್ತ: ಅಮರೀಂದರ್ ಸಿಂಗ್

Update: 2019-07-30 06:47 GMT

ಚಂಡೀಗಢ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸೂಕ್ತ ಆಯ್ಕೆ. ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಎಲ್ಲೆಡೆಯಿಂದ ಅವರಿಗೆ ಬೆಂಬಲ ಸಿಗಬಲ್ಲದು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

"ಈ ಹುದ್ದೆಗೆ ಪ್ರಿಯಾಂಕಾ ಅತ್ಯುತ್ತಮ ಆಯ್ಕೆ, ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಇರುವುದರಿಂದ ಸಿಡಬ್ಲ್ಯುಸಿ ನಿರ್ಧಾರವನ್ನು ಇದು ಅವಲಂಬಿಸಿದೆ" ಎಂದು ಅವರು ಹೇಳಿದ್ದಾರೆ.

ಪಕ್ಷಾಧ್ಯಕ್ಷ ಹುದ್ದೆಗೆ ರಾಹುಲ್‌ಗಾಂಧಿ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆಯಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ತ್ವರಿತವಾಗಿ ಕರೆಯಬೇಕು ಎಂಬ ಆಗ್ರಹ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮರೀಂದರ್ ಸಿಂಗ್ ಹೇಳಿಕೆಗೆ ವಿಶೇಷ ಮಹತ್ವ ಬಂದಿದೆ.

ಈ ವಾರದಲ್ಲೇ ಸಭೆ ನಡೆಯುವ ನಿರೀಕ್ಷೆ ಇದ್ದು, ಹೊಸ ಅಧ್ಯಕ್ಷರು ಆ.15ರಂದು ಪಕ್ಷದ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು ಎನ್ನುವುದು ಪಕ್ಷದ ಬಹುತೇಕ ಮುಖಂಡರ ಬಯಕೆಯಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಯುವ ಮುಖಂಡರು ಪಕ್ಷದ ಸಾರಥ್ಯ ವಹಿಸಬೇಕು ಎಂದು ಅಮರೀಂದರ್ ಆರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ ಬಹುಪಾಲು ಯುವಜನಾಂಗ ಇರುವ ಹಿನ್ನೆಲೆಯಲ್ಲಿ ಯುವ ಮುಖಂಡರು ಮಾತ್ರ ಜನರ ಜತೆ ನಿಕಟ ಸಂಪರ್ಕ ಸಾಧಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News