ಟಿಪ್ಪು ಜಯಂತಿ ಕಳೆದ ಬಾರಿಗಿಂತಲೂ ಅದ್ಧೂರಿಯಿಂದ ಆಚರಿಸುತ್ತೇವೆ: ಝಮೀರ್ ಅಹ್ಮದ್

Update: 2019-07-30 12:45 GMT

ಬೆಂಗಳೂರು, ಜು.30: ಟಿಪ್ಪು ಸುಲ್ತಾನ್ ಜಯಂತಿ ರದ್ದು ವಿಚಾರ ಸಂಬಂಧ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರುವ ಅನರ್ಹ ಶಾಸಕ ರೋಶನ್ ಬೇಗ್ ಉತ್ತರಿಸಬೇಕು ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಸವಾಲು ಹಾಕಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಪಡಿಸಿರುವ ಬಿಜೆಪಿ ಸರಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಇದರ ನಡುವೆ ಬಿಜೆಪಿ ಸೇರಲು ಮುಂದಾಗಿರುವ ರೋಶನ್ ಬೇಗ್ ಈ ಬಗ್ಗೆ ಉತ್ತರ ನೀಡಬೇಕು ಎಂದರು.

ಟಿಪ್ಪುಸುಲ್ತಾನ್ ಜಯಂತಿ ಆಚರಣೆ ಮಾಡಬೇಕು ಎಂದು 2016ರಲ್ಲಿ ಸಿದ್ದರಾಮಯ್ಯ ಅವರು ತೀರ್ಮಾನ ಮಾಡಿದ್ದರು ಎಂದ ಅವರು, ಕರ್ನಾಟಕ ಮಾತ್ರವಲ್ಲ ಎಲ್ಲ ಕಡೆಗಳಲ್ಲಿಯೂ ಟಿಪ್ಪು ಅಭಿಮಾನಿಗಳಿದ್ದಾರೆ. ಜಾತ್ಯತೀತರು ಟಿಪ್ಪುಸುಲ್ತಾನ್ ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ, ಇನ್ನು ಮುಂದೆಯೂ ನಾವು ಟಿಪ್ಪುಜಯಂತಿ ಆಚರಿಸುತ್ತೇವೆ ಎಂದು ತಿಳಿಸಿದರು.

ಯಡಿಯೂರಪ್ಪ ಸರಕಾರ, ಟಿಪ್ಪು ಜಯಂತಿಯನ್ನು ಇಷ್ಟೊಂದು ತರಾತುರಿಯಲ್ಲಿ ರದ್ದು ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಟಿಪ್ಪುಜಯಂತಿ ಆಚರಣೆ ಮಾಡಲು ಅಥವಾ ರದ್ದುಗೊಳಿಸುವ ಸಲುವಾಗಿ ಯಾವುದೇ ಸರಕಾರ ಸಚಿವ ಸಂಪುಟ ಸಭೆ ಕರೆದು ಅಲ್ಲಿ ತೀರ್ಮಾನ ಮಾಡಬೇಕಾಗುತ್ತದೆ. ಆದರೆ, ಮುಖ್ಯಮಂತ್ರಿ ಒಬ್ಬರೇ ಈ ರೀತಿ ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಹೇಳಿದರು.

ಅದ್ಧೂರಿ ಟಿಪ್ಪು ಜಯಂತಿ

ಕಳೆದ ಬಾರಿಗಿಂತ ಈ ಬಾರಿ ಟಿಪ್ಪುಸುಲ್ತಾನ್ ಜಯಂತಿಯನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡುತ್ತೇವೆ. ಜಯಂತಿಯನ್ನು ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಹೀಗಾಗಿ, ಈ ಬಾರಿಯೂ ಜಯಂತಿಯನ್ನು ಬಹಳ ಸಂಭ್ರಮದಿಂದ ಆಚರಿಸುತ್ತೇವೆ ಎಂದು ಝಮೀರ್ ಅಹ್ಮದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News