ಇಬ್ಬರು ಅನರ್ಹ ಶಾಸಕರು ಮುಂಬೈಯಿಂದ ಬೆಂಗಳೂರಿಗೆ

Update: 2019-07-30 14:50 GMT

ಬೆಂಗಳೂರು, ಜು.30: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರಮೇಶ್ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ್, ಮಂಗಳವಾರ ಮುಂಬೈಯಿಂದ ಬೆಂಗಳೂರಿಗೆ ಹಿಂದಿರುಗಿದ್ದಾರೆ.

ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಶಾಸಕ ಸ್ಥಾನದಿಂದ ನಮ್ಮನ್ನು ಅನರ್ಹಗೊಂಡಿರುವ ಕ್ರಮವನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವೆ ಎಂದರು.

ನ್ಯಾಯಾಲಯದಲ್ಲಿ ಯಾವಾಗ ವಾದ ಮಾಡಬೇಕು ಎಂಬುದರ ಬಗ್ಗೆ ನಮ್ಮ ವಕೀಲರು ನಿರ್ಧರಿಸುತ್ತಾರೆ. ಸದ್ಯಕ್ಕೆ ನಮ್ಮ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಹೆಚ್ಚಿನ ಚರ್ಚೆ ಬೇಡ. ಈ ಹಿಂದೆ ನಡೆದಿರುವ ಪ್ರಕರಣಗಳಿಗೂ, ನಮ್ಮ ಪ್ರಕರಣಗಳಿಗೂ ತಾಳೆ ಮಾಡುವುದು ಬೇಡ ಎಂದು ಅವರು ಮನವಿ ಮಾಡಿದರು. ನಾವು ಮೊದಲೇ ಶಾಸಕ ಸ್ಥಾನಗಳಿಗೆ ನಮ್ಮ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ. ಆದರೂ, ನಮ್ಮನ್ನು ದುರುದ್ದೇಶದಿಂದ ಅನರ್ಹ ಮಾಡಲಾಗಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ನಂಬಿಕೆಯಿದ್ದು, ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗಲಿದೆ ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಸ್ಪೀಕರ್ ಬಗ್ಗೆ ನಾವು ಹೆಚ್ಚಿಗೆ ಮಾತನಾಡುವುದು ಬೇಡ. ಅವರು ಒಳ್ಳೆಯ ವ್ಯಕ್ತಿ. ಆದರೆ, ನಮ್ಮನ್ನು ಯಾಕೆ ಅನರ್ಹ ಮಾಡಿದರೂ ಅನ್ನುವುದು ಗೊತ್ತಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಆದಷ್ಟು ಶೀಘ್ರದಲ್ಲಿ 15 ಮಂದಿ ಶಾಸಕರು ಒಟ್ಟಿಗೆ ಸೇರಿ ಸುದ್ದಿಗೋಷ್ಠಿ ನಡೆಸಿ, ಎಲ್ಲ ವಿಚಾರಗಳನ್ನು ಬಹಿರಂಗಪಡಿಸುತ್ತೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ನಾಪತ್ತೆಯಾಗಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮಗೂ ಈ ವಿಚಾರ ಗೊತ್ತಾಯಿತು. ಎಸ್.ಎಂ.ಕೃಷ್ಣ ನಮ್ಮ ಗುರುಗಳು. ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗುತ್ತೇನೆ ಎಂದರು. ಆದರೆ, ಶ್ರೀಮಂತ ಪಾಟೀಲ್ ಮಾತ್ರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News