ಡಿಕೆಶಿ ಸವಾಲು ಸ್ವೀಕರಿಸಲು ಸಿದ್ಧ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ಅನರ್ಹ ಶಾಸಕ ಭೈರತಿ ಬಸವರಾಜು

Update: 2019-07-30 15:04 GMT

ಬೆಂಗಳೂರು, ಜು.30: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸವಾಲನ್ನು ಸ್ವೀಕರಿಸಲು ಸಿದ್ಧನಿದ್ದು, ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಅನರ್ಹಗೊಂಡಿರುವ ಶಾಸಕ ಭೈರತಿ ಬಸವರಾಜು ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಅವರ ಬೆಂಬಲಿಗರು ಹಾಗೂ ಮತದಾರರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಸದನದಲ್ಲಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಸವಾಲು ಎಸೆದಿರುವ ಅವರ ಬಳಿ ಹಣ, ತೋಳ್ಬಲ ಎಲ್ಲ ಇರಬಹುದು. ನಾವೇನು ಬಳೆ ತೊಟ್ಟು ಕುಳಿತಿಲ್ಲ ಎಂದು ತಿರುಗೇಟು ನೀಡಿದ ಬೈರತಿ ಬಸವರಾಜು, ನನ್ನ ಕ್ಷೇತ್ರದ ಜನರೇ ಸವಾಲು ಸ್ವೀಕರಿಸಲು ತಯಾರಿದ್ದಾರೆ. ನಾನೂ ಸವಾಲ್ ಸ್ವೀಕರಿಸುತ್ತೇನೆ. ಮುಂದಿನ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದರು.

ಬಿಜೆಪಿಗೆ ಹೋಗುವ ನಿರ್ಧಾರ ಏನೂ ಮಾಡಿಲ್ಲ. ಕ್ಷೇತ್ರದ ಮತದಾರರು, ಮುಖಂಡರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವೆ. ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್ ಬಳಿ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಕುರಿತು ಮಾತುಕತೆ ನಡೆಸಲು ಮುಂದಾದ ಸಂದರ್ಭದಲ್ಲಿ ಸಾಮಾನ್ಯರಂತೆ ಏಕವಚನದಲ್ಲಿ ಮಾತನಾಡುತ್ತಿದ್ದರು. ಅವರು ನಮ್ಮ ಕ್ಷೇತ್ರಕ್ಕೆ ಯಾವುದಾದರೂ ಒಂದು ಕೊಡುಗೆ ನೀಡಿದ್ದಾರಾ ಎಂದು ಪ್ರಶ್ನಿಸಿದ ಅವರು, ನೀಡಿದ್ದಾದರೆ ಕ್ಷೇತ್ರಕ್ಕೆ ಬಂದು ಹೇಳಲಿ ಎಂದು ಸವಾಲು ಹಾಕಿದರು.

ಹಣ ಪಡೆದಿಲ್ಲ: ಧರ್ಮಸ್ಥಳದ ಮಂಜುನಾಥನಾಣೆ ಯಾವ ಪಕ್ಷದಿಂದಲೂ ನಾನೊಂದು ರೂಪಾಯಿ ಹಣ ಪಡೆದಿಲ್ಲ. ನಾನು ದುಡ್ಡಿಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಇಲ್ಲಸಲ್ಲದ ಮಾತುಗಳು ಹರಿದಾಡುತ್ತಿವೆ. ನಮ್ಮದು ಏನಿದ್ದರೂ ಕೊಡುವ ಕೈಯೇ ಹೊರತು ತೆಗೆದುಕೊಳ್ಳುವುದಲ್ಲ. ಕಾಂಗ್ರೆಸ್ ನಾಯಕರು ಹಾಗೂ ಸಚಿವರಿಂದ ಮಾನಸಿಕ ಹಿಂಸೆ ಹಾಗೂ ಅವರ ನಡೆ ನನ್ನ ಈ ಸ್ಥಿತಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News