ಉದ್ಯಮಿ ಸಿದ್ಧಾರ್ಥ್ ಕಣ್ಮರೆ: ಎಸ್ಸೆಂ ಕೃಷ್ಣ ನಿವಾಸಕ್ಕೆ ರಾಜಕೀಯ ನಾಯಕರು, ಗಣ್ಯರ ದೌಡು

Update: 2019-07-30 15:18 GMT

ಬೆಂಗಳೂರು, ಜು. 30: ‘ಕೆಪೆ ಕಾಫಿ ಡೇ’ ಮಾಲಕ, ಉದ್ಯಮಿ ಸಿದ್ಧಾರ್ಥ ನಿಗೂಢ ರೀತಿಯಲ್ಲಿ ಕಣ್ಮರೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಸ್ಸೆಂ ಕೃಷ್ಣ ನಿವಾಸಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಿಎಂಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ಹಲವು ಮುಖಂಡರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿದರು.

ಮಂಗಳವಾರ ಬೆಳಗ್ಗೆಯಿಂದಲೇ ಸದಾಶಿವನಗರದಲ್ಲಿ ಎಸ್ಸೆಂ ಕೃಷ್ಣ ಅವರ ನಿವಾಸಕ್ಕೆ ಧಾವಿಸಿದ ರಾಜಕೀಯ ಮುಖಂಡರು, ಸಿನಿಮಾ ನಟರು ಹಾಗೂ ಕುಟುಂಬದ ಆಪ್ತರು ಕೃಷ್ಣ ಅವರು ಸೇರಿದಂತೆ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಯಾವುದೇ ಕಾರಣಕ್ಕೆ ಆತಂಕಗೊಳ್ಳಬೇಡಿ ಎಂದು ಮನವಿ ಮಾಡಿದರು.

ನೆರವಿಗೆ ಮನವಿ: ಸಿದ್ಧಾರ್ಥ ಆತ್ಮಹತ್ಯೆ ಶಂಕೆ ಹಿನ್ನೆಲೆಯಲ್ಲಿ ಅವರ ಪತ್ತೆಗೆ ಅಗತ್ಯ ನೆರವು ಕೋರಿ ಸಂಸದರಾದ ನಳೀನ್ ಕುಮಾರ್ ಕಟೀಲ್, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಮಧ್ಯೆ ನೇತ್ರಾವತಿ ನದಿಯಲ್ಲಿ ಸಿದ್ಧಾರ್ಥ ಅವರಿಗಾಗಿ ಶೋಧ ಕಾರ್ಯಕ್ಕೆ ಹೆಲಿಕಾಪ್ಟರ್ ಕಾರ್ಯಾಚರಣೆ ಸೇರಿ ಎಲ್ಲ ರೀತಿಯ ನೆರವು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವ ಸಿಎಂ ಯಡಿಯೂರಪ್ಪ, ಸಿದ್ಧಾರ್ಥ ಅವರನ್ನು ತ್ವರಿತಗತಿ ಪತ್ತೆಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೊಲೀಸ್ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ನಿರ್ದೇಶನ ನೀಡಿದ್ದಾರೆಂದು ಗೊತ್ತಾಗಿದೆ.

ಮಾಜಿ ಸಿಎಂಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯ, ವೀರಪ್ಪಮೊಯ್ಲಿ, ಜಗದೀಶ್ ಶೆಟ್ಟರ್, ಮುಖಂಡ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್. ಆರ್.ವಿ.ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಸುರೇಶ್‌ಕುಮಾರ್, ಕುಮಾರ್ ಬಂಗಾರಪ್ಪ, ನಟ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News