ಪ್ರಪಂಚಕ್ಕೆ ‘ಕಾಫಿ ಘಮಲು’ ಪರಿಚಯಿಸಿದ ಸಿದ್ಧಾರ್ಥ್ ನಡೆದು ಬಂದ ಹಾದಿ

Update: 2019-07-30 16:53 GMT

ಬೆಂಗಳೂರು, ಜು. 30: ರಾಜ್ಯ, ದೇಶ ಹಾಗೂ ಪ್ರಪಂಚಕ್ಕೆ ಕಾಫಿ ಘಮಲನ್ನು ಪಸರಿಸಿದ ಕೆಫೆ ಕಾಫಿ ಡೇ ಸಂಸ್ಥಾಪಕ, ಖ್ಯಾತ ಉದ್ಯಮಿ, ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ್ ಅವರಿಗೆ ಸಂಕಷ್ಟದಲ್ಲಿದ್ದ ಕಾಫಿ ಉದ್ಯಮಕ್ಕೆ ಮಾರುಕಟ್ಟೆ ಕಲ್ಪಿಸಿದ ಹೆಗ್ಗಳಿಕೆ ಇದೆ.

ದೇಶ-ವಿದೇಶಗಳಲ್ಲಿ 1600ಕ್ಕೂ ಹೆಚ್ಚು ಕೆಫೆ ಕಾಫಿ ಡೇ, 50 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಿ, ಸುಮಾರು 50 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಹಿವಾಟು ನಡೆಸುತ್ತಿರುವ ಸಿದ್ಧಾರ್ಥ್ ಅವರ ನಿಗೂಢ ರೀತಿಯ ಕಣ್ಮರೆ ಎಲ್ಲರನ್ನೂ ಆತಂಕಕ್ಕೆ ದೂಡಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌತಹಳ್ಳಿಯ (ಚೇತನಹಳ್ಳಿ ಎಸ್ಟೇಟ್) ಗಂಗಯ್ಯ ಹೆಗ್ಡೆ ಮತ್ತು ವಾಸಂತಿ ದಂಪತಿ ಪುತ್ರ ಸಿದ್ಧಾರ್ಥ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪುತ್ರಿ ಮಾಳವಿಕಾ ಅವರನ್ನು ವಿವಾಹವಾಗಿದ್ದರು. ಸಿದ್ದಾರ್ಥ್ ಮಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು.

ಕಾಫಿ ಬೆಳೆಯುತ್ತಿದ್ದ ಕುಟುಂಬದಲ್ಲಿ ಹುಟ್ಟಿದ್ದರೂ, ಕಾಫಿ ಉದ್ಯಮಕ್ಕೆ ಕಾಲಿಡಲು ಹಿಂಜರಿಯುತ್ತಿದ್ದರು. ವಿದ್ಯಾಭ್ಯಾಸದ ನಂತರ 1983ರಲ್ಲಿ ತನ್ನ 24ನೆ ವಯಸ್ಸಿನಲ್ಲಿ ಮುಂಬೈನಲ್ಲಿ ಪೋರ್ಟ್‌ಫೋಲಿಯೋ ಮ್ಯಾನೇಜ್‌ಮೆಂಟ್ ತರಬೇತಿಗೆ ಜೆ.ಎಂ. ಫೈನಾನ್ಷಿಯಲ್ ಲಿ.ನಲ್ಲಿ ಟ್ರೇನಿ ಕೆಲಸಕ್ಕೆ ಸೇರಿಕೊಂಡರು.

ಕಾಫಿ ಉದ್ಯಮ: ಆ ಬಳಿಕ ಅವರ ತಂದೆಯಿಂದ ಹಣ ಪಡೆದು ಸ್ವಂತ ಉದ್ಯಮ ಆರಂಭಿಸಿದರು. 30ಸಾವಿರ ರೂ.ಶೇರು ಮಾರುಕಟ್ಟೆಯ ಕಾರ್ಡ್‌ನೊಂದಿಗೆ ಸಿದ್ದಾರ್ಥ್ ಬೆಂಗಳೂರಿಗೆ ವಾಪಾಸಾದರು. 1993ರಲ್ಲಿ ಕಾಫಿ ಉದ್ಯಮಕ್ಕೆ ಕಾಲಿಟ್ಟ ಸಿದ್ದಾರ್ಥ್, ಕಾಫಿ ಬೀಜಗಳ ವ್ಯಾಪಾರ ಮತ್ತು ರಫ್ತು ಪ್ರಾರಂಭಿಸಿದರು. ಎಬಿಸಿ ಕಾಫಿ ಕ್ಯೂರಿಂಗ್ ಕಂಪೆನಿ ಸ್ಥಾಪಿಸಿದರು. ಜೊತೆಗೆ ಹಾಸನದಲ್ಲಿ ಕಾಫಿ ಬೀಜಗಳ ಕ್ಯೂರಿಂಗ್ ಘಟಕವನ್ನು ಪ್ರಾರಂಭಿಸಿದರು. ಜರ್ಮನಿಯ ಕಾಫಿ ವ್ಯಾಪಾರಿ ಚಿಬೊಗೆ ಇವರ ಕಾಫಿ ಬೀಜಗಳನ್ನು ರಫ್ತು ಆರಂಭಿಸಿದರು. ಹ್ಯಾಮ್ ಬರ್ಗ್‌ನಲ್ಲಿ ಚಿಬೊ ಚಿಕ್ಕದೊಂದು ಮಳಿಗೆಯಲ್ಲಿ ಕಾಫಿ ಉದ್ಯಮ ಪ್ರಾರಂಭಿಸಿದ್ದರು, ಕೆಲವೇ ವರ್ಷಗಳಲ್ಲಿ ಅದೊಂದು ಮಿಲಿಯನ್ ಡಾಲರ್ ಉದ್ಯಮವಾಗುವಷ್ಟು ಅಭಿವೃದ್ಧಿ ಹೊಂದಿತು.

ಇದನ್ನು ನೋಡಿದ ಸಿದ್ದಾರ್ಥ್ ಭಾರತದಲ್ಲಿ ತಮ್ಮದೆ ಕಾಫಿ ಮಳಿಗೆ ತೆರೆಯಬೇಕೆಂದು ಪಣತೊಟ್ಟರು. ದಕ್ಷಿಣ ಭಾರತ ಫಿಲ್ಟರ್ ಕಾಫಿಗೆ ಹೆಸರುವಾಸಿ. ಇದನ್ನೇ ಗಮನದಲ್ಲಿಟ್ಟುಕೊಂಡು ಮೊದಲು ಕಾಫಿಪುಡಿ ಮಾರಾಟ ಮಾಡಲು ಪ್ರಾರಂಭಿಸಿದ ಸಿದ್ದಾರ್ಥ್, ಇದಕ್ಕಾಗಿ 20 ಮಳಿಗೆಗಳನ್ನು ಸ್ಥಾಪಿಸಿದರು. ಕಾಫಿ ಬೀಜ ಹಾಗೂ ಕಾಫಿ ಪುಡಿ ಮಾರಾಟಕ್ಕೂ ಒಂದು ಕಪ್ ಕಾಫಿ ಮಾರಾಟಕ್ಕೂ ಇರುವ ಲಾಭದ ಪ್ರಮಾಣ ತಿಳಿದು ಸಿದ್ದಾರ್ಥ್ ಕೆಫೆ ಕಾಫಿ ಡೇ ಆರಂಭಿಸಿದರು.

ಕೆಫೆ ಕಾಫಿ ಡೇ  

1996ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ವಿ.ಜಿ.ಸಿದ್ಧಾರ್ಥ್ ಅವರು ಪ್ರಾರಂಭಿಸಿದ ಕೆಫೆ ಕಾಫಿ ಡೇ ಇಂದು ದೇಶದ ಅತಿದೊಡ್ಡ ರಿಟೇಲ್ ಕೆಫೆ ಸಮೂಹ ಎಂಬ ಕೀರ್ತಿಗೆ ಪಾತ್ರವಾಗಿದೆ. ಯುವಜನರ ಪಾಲಿನ ಸಿಸಿಡಿ, ಹಬೆಯಾಡುವ ಕಾಫಿ ಜೊತೆ ಕೂತು ಹರಟೆ, ಚರ್ಚೆ ಮಾಡುವ ಇಷ್ಟದ ಜಾಗ ಹಾಗು ಪ್ರಯಾಣದ ನಡುವೆ ಉಪಹಾರ, ಕಾಫಿ ಸೇವಿಸಿ ದಣಿವು ನಿವಾರಿಸಿಕೊಳ್ಳುವ ಕೆಫೆಯಾಗಿ ಇಂದು ದೇಶದೆಲ್ಲೆಡೆ ಮಾತ್ರವಲ್ಲ ಆಸ್ಟ್ರಿಯಾ, ಝೆಕ್ ರಿಪಬ್ಲಿಕ್ , ಮಲೇಷಿಯಾ ಇತ್ಯಾದಿ ದೇಶಗಳಲ್ಲೂ ಖ್ಯಾತಿ ಪಡೆದಿದೆ. ಕಾಫಿಗೆ ಇದ್ದ ಸೀಮಿತ ಮಾರುಕಟ್ಟೆಯನ್ನು ಅಗಾಧವಾಗಿ ವಿಸ್ತರಿಸಿ ಅದರ ಬೆಳೆಗಾರರಿಗೆ ಹೊಸ ಅವಕಾಶಗಳ ಬಾಗಿಲು ತೆರೆದ ಹಾಗೂ ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಶ್ರೇಯಸ್ಸು ಸಿಸಿಡಿ ಹಾಗು ಸಿದ್ಧಾರ್ಥ್ ಅವರದ್ದು. ಈಗ ದೇಶದ ಉದ್ದಗಲಗಳಲ್ಲಿ ಸುಮಾರು ಎರಡು ಸಾವಿರ ಸಿಸಿಡಿ ಕೆಫೆ ಗಳಿವೆ. 

ಸಿದ್ಧಾರ್ಥ್ 1,607 ಕೆಫೆ ಕಾಫಿ ಡೇ, 579 ಎಕ್ಸ್‌ಪ್ರೆಸ್ ಕಿಯೋಸ್ಕ್ ಮತ್ತು 415 ಫ್ರೆಶ್ ಮತ್ತು ಗ್ರೌಂಡ್ ಮಳಿಗೆಗಳನ್ನು ಹೊಂದಿದ್ದರು. ಇದಲ್ಲದೆ, ಆಸ್ಟ್ರಿಯಾ, ಯೂರೋಪ್‌ನ ಜೆಕ್ ರಿಪಬ್ಲಿಕ್ ಮತ್ತು ದುಬೈನಲ್ಲೂ ಕಾಫಿ ಮಳಿಗೆಗಳನ್ನು ಹೊಂದಿರುವುದು ಇವರ ಉದ್ಯಮಶೀಲತೆಗೆ ಸಾಕ್ಷಿಯಾಗಿದೆ.

ಸಿದ್ಧಾರ್ಥ್ ಗೆ ಐಟಿ ಕಿರುಕುಳ ನೀಡಿಲ್ಲ: ಕೆಫೆ ಕಾಫಿ ಡೇ ಕಂಪೆನಿಯ ಮಾಲಕ ಸಿದ್ಧಾರ್ಥ್ ಅವರ ಆಸ್ತಿ ತಪಾಸಣೆ ನಡೆಸಿದ್ದು, ಸಮರ್ಪಕ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ಆದರೆ, ಅವರಿಗೆ ಯಾವುದೇ ಕಿರುಕುಳ ನೀಡಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಸ್ಪಷ್ಟನೆ ನೀಡಿವೆ.

ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಕಾಫಿ ಉದ್ಯಮ, ಶೇರು ವಹಿವಾಟು ಸೇರಿದಂತೆ ವಿವಿಧ ವ್ಯವಹಾರದಲ್ಲಿ ತೊಡಗಿರುವ ಸಿದ್ಧಾರ್ಥ್ ಅವರು ದೊಡ್ಡ ಮೊತ್ತದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ತೆರಿಗೆ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಅವರಿಗೆ ದಂಡವನ್ನು ವಿಧಿಸಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

ಪತ್ರದ ಬಗ್ಗೆ ತನಿಖೆ ಅಗತ್ಯ: ಸಿದ್ದಾರ್ಥ್ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಉಲ್ಲೇಖಿತ ಅಂಶಗಳ ಬಗ್ಗೆ ಹಾಗೂ ಅವರ ಸಹಿಯ ತಾಳೆಯ ಬಗ್ಗೆಯೂ ತನಿಖೆ ಅಗತ್ಯವಿದೆ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಪ್ರತಿಕ್ರಿಯೆಗೆ ನಿರಾಕರಿಸಿವೆ. ಆದರೆ ಕಾಫಿ ಡೇ ಕಚೇರಿ ಸಿಬ್ಬಂದಿ ಅದು ಸಿದ್ಧಾರ್ಥ್ ಅವರ ಪತ್ರವೆಂದು ಖಚಿತಪಡಿಸಿದೆ. 

ಇಲಾಖೆ ಅವರಿಗೆ ಸಹಕರಿಸಿದೆ: ‘ಮೈಂಡ್‌ಟ್ರೀ ಕಂಪೆನಿ ಅಕ್ರಮ ಸಂಬಂಧ ಆ ಶೇರುಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿತ್ತು. ಆ ವೇಳೆ ಸಿದ್ಧಾರ್ಥ್ ಅವರು ಮೈಂಡ್‌ಟ್ರೀ ಶೇರು ಮಾರಾಟ ಮಾಡಬೇಕೆಂದು ಕೋರಿದ ವೇಳೆ ಅದನ್ನು ಬಿಡುಗಡೆ ಮಾಡಿ, ಅವರು ಸೂಚಿಸಿದ ಬೇರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಅವರಿಗೆ ಕಾನೂನು ರೀತಿಯಲ್ಲಿ ಐಟಿ ಇಲಾಖೆ ಸಹಕರಿಸಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News