ಸಿದ್ಧಾರ್ಥ ಹೆದರುವ ಅವಶ್ಯಕತೆ ಇರಲಿಲ್ಲ: ಎಚ್.ಡಿ.ದೇವೇಗೌಡ

Update: 2019-07-30 18:15 GMT

ಬೆಂಗಳೂರು, ಜು.30: ಉದ್ಯಮಿ ಸಿದ್ಧಾರ್ಥ ನಾಪತ್ತೆ ಪ್ರಕರಣ ಒಂದು ದುರಂತ. ಅವರು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುತ್ತಿದ್ದರು. ಷೇರು ಮೌಲ್ಯ ಕಡಿಮೆ ಆಗಿರಬಹುದು. ಅಷ್ಟಕ್ಕೇ ಹೆದರುವ ಅವಶ್ಯಕತೆ ಇರಲಿಲ್ಲವೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಉದ್ಯಮಿ ಸಿದ್ಧಾರ್ಥ 35 ವರ್ಷಗಳ ಪರಿಚಯ. ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು. ಸಾಕಷ್ಟು ಆಸ್ತಿಯು ಇತ್ತು. ಹೀಗಾಗಿ ಅವರು ಹೆದರುವ ಅಗತ್ಯವಿರಲಿಲ್ಲವೆಂದು ತಿಳಿಸಿದರು.

ನಾಪತ್ತೆ ಆಗಿರುವ ಉದ್ಯಮಿ ಸಿದ್ಧಾರ್ಥ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಅಳಿಯರಾಗಿದ್ದಾರೆ. ಈ ಪ್ರಕರಣದಿಂದಾಗಿ ಎಸ್.ಎಂ.ಕೃಷ್ಣ ನೋವು ಅನುಭವಿಸುವ ಸ್ಥಿತಿ ಬಂದಿದೆ. ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದೇನೆ. ಆದರೂ ಅವರ ನೋವು ಅವರಿಗೆ ಇದ್ದೇ ಇರುತ್ತದೆ ಎಂದು ಅವರು ಹೇಳಿದರು.

ಸಿದ್ಧಾರ್ಥಗೆ ಐಟಿ ಅಧಿಕಾರಿಗಳು ಕಿರುಕುಳ ಕೊಟ್ಟಿದ್ದಾರೆ ಎಂಬುದರ ಬಗ್ಗೆ  ಪ್ರತಿಕ್ರಿಯಿಸಿದ ಅವರು, ಯಾವ ಸಂದರ್ಭದಲ್ಲಿ ಯಾವ ಸಂಸ್ಥೆಗಳು ಹೇಗೆ ಕೆಲಸ ಮಾಡುತ್ತವೆ ಅಂತ ಎಲ್ಲರಿಗೂ ಗೊತ್ತಿದೆ. ಮೇಲಿಂದ ಸೂಚನೆ ಬಂದ ಹಾಗೆ ವರ್ತನೆ ಮಾಡುತ್ತಾರೆ. ನನಗೂ ಅದಕ್ಕೂ ಸಂಬಂಧ ಇಲ್ಲ. ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 59ಕಡೆ ಐಟಿ ದಾಳಿ ಆಗಿತ್ತು ಎಂದು ಅವರು ಮಾರ್ಮಿಕವಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News