ಟಿಪ್ಪು ಜಯಂತಿ ರದ್ದತಿಗೆ ಎಸ್‌ಡಿಪಿಐ ಖಂಡನೆ

Update: 2019-07-30 18:27 GMT
ಇಲ್ಯಾಸ್ ಮಹಮ್ಮದ್ ತುಂಬೆ

ಬೆಂಗಳೂರು, ಜು.30: ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರದ್ದು ದ್ವೇಷದ ರಾಜಕಾರಣ, ಅಪ್ರಬುದ್ಧ ಹಾಗೂ ಅವಿವೇಕದ ಕ್ರಮ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಆಕ್ಷೇಪಿಸಿದೆ.

ತನ್ನ ಶೌರ್ಯ, ಎದೆಗಾರಿಕೆ ಹಾಗೂ ಆಡಳಿತ ಕ್ರಮಗಳಿಗೆ ಪ್ರಸಿದ್ದವಾದ ಟಿಪ್ಪುಸುಲ್ತಾನ್ ನಮ್ಮ ರಾಜ್ಯದ ಮಾತ್ರವಲ್ಲದೆ ದೇಶದ ಹೆಮ್ಮೆಯಾಗಿದ್ದಾರೆ. ತಂತ್ರಜ್ಞಾನ, ನೀರಾವರಿ, ಕೃಷಿ, ಕನ್ನಡ ಸಾಹಿತ್ಯ, ಸಾಮಾಜಿಕ ಸುಧಾರಣಾ ಕ್ಷೇತ್ರಗಳಲ್ಲಿ ಟಿಪ್ಪುಸುಲ್ತಾನ್‌ರಂತಹ ಅಪ್ರತಿಮ ಕೊಡುಗೆ ನೀಡಿದ ರಾಜ ದೇಶದಲ್ಲಿ ಮತ್ತೊಬ್ಬರಿಲ್ಲ ಎಂದು ಇತಿಹಾಸ ಹೇಳುತ್ತಿದೆ. ಇಂತಹ ಕೀರ್ತಿ ಮುಸ್ಲಿಮ್ ರಾಜನಿಗೆ ಸಲ್ಲುತ್ತದೆ ಎಂಬ ಏಕೈಕ ಕಾರಣಕ್ಕೆ ಸಂಘಪರಿವಾರ ಟಿಪ್ಪು ವಿರುದ್ಧ ಸುಳ್ಳಿನ ಸರಮಾಲೆಯನ್ನು ಪ್ರಚಾರ ಮಾಡುತ್ತಿದೆ.

ದೇಶದ ಇತಿಹಾಸದಲ್ಲಿ ಮುಸ್ಲಿಮ್ ರಾಜರು ಚಕ್ರವರ್ತಿಗಳ ಅಧ್ಯಾಯಗಳನ್ನು ತಿರುಚಿ ಕೋಮುವಾದದ ವೈಷಮ್ಯವನ್ನು ಬಿತ್ತುವುದು ಸಂಘಪರಿವಾರದ ಚಾಳಿಯಾಗಿದೆ. ಇದನ್ನು ಈ ದೇಶದ ಪ್ರಜ್ಞಾವಂತ ನಾಗರಿಕರು ಚೆನ್ನಾಗಿ ಅರಿತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಕರ್ನಾಟಕದ ಬಿಜೆಪಿ ಸರಕಾರ ಇದೀಗ ’ಟಿಪ್ಪು ಜಯಂತಿ’ಯನ್ನು ರದ್ದು ಮಾಡಿದೆ. ಮೈಸೂರಿನ ಹುಲಿ ಟಿಪ್ಪು ಸುಲ್ತಾನರ ವಿರುದ್ಧ ಕರ್ನಾಟಕದ ಬಿಜೆಪಿ ಸರಕಾರ ಮಾಡುವ ಅಪಪ್ರಚಾರವನ್ನು ಎಸ್‌ಡಿಪಿಐ ಸಹಿಸುವುದಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News