ಉನ್ನಾವೋ ಅತ್ಯಾಚಾರಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ದಿಲ್ಲಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

Update: 2019-08-02 06:11 GMT

ಹೊಸದಿಲ್ಲಿ, ಆ. 1: ಉನ್ನಾವೊ ಅತ್ಯಾಚಾರ ಹಾಗೂ ಅಪಘಾತಕ್ಕೆ ಸಂಬಂಧಿಸಿ ದಾಖಲಾಗಿರುವ ಎಲ್ಲ ಐದು ಪ್ರಕರಣಗಳನ್ನು ದಿಲ್ಲಿ ನ್ಯಾಯಾಲಯಕ್ಕೆ ವರ್ಗಾಯಿಸಿ ಗುರುವಾರ ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ಸಂತ್ರಸ್ತೆಗೆ ಮಧ್ಯಂತರ ಪರಿಹಾರವಾಗಿ 25 ಲಕ್ಷ ರೂಪಾಯಿ ನೀಡುವಂತೆ ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ, ಅತ್ಯಾಚಾರ ಸಂತ್ರಸ್ತೆ ಜೀವನ್ಮರಣ ಹೋರಾಟ ನಡೆಸಲು ಕಾರಣವಾಗಿರುವ ಟ್ರಕ್-ಕಾರು ಢಿಕ್ಕಿ ಪ್ರಕರಣದ ತನಿಖೆಯನ್ನು 7 ದಿನಗಳ ಒಳಗೆ ಪೂರ್ಣಗೊಳಿಸುವಂತೆ ಸಿಬಿಐಗೆ ನಿರ್ದೇಶಿಸಿದೆ.

ವಿಚಾರಣಾ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ದಿನನಿತ್ಯ ನಡೆಸಬೇಕು ಹಾಗೂ 45 ದಿನಗಳ ಒಳಗೆ ವಿಚಾರಣೆ ಪೂರ್ಣಗೊಳಿಸಬೇಕು. ಇಂದು ನೀಡಿದ ಆದೇಶದ ತೆರವು ಹಾಗೂ ತಿದ್ದುಪಡಿ ಕೋರಿ ಸಲ್ಲಿಸುವ ಯಾವುದೇ ಮನವಿ ಸ್ವೀಕರಿಸುವುದಿಲ್ಲ ಎಂದು ಪೀಠ ಹೇಳಿದೆ.

  ಅತ್ಯಾಚಾರ ಸಂತ್ರಸ್ತೆ, ಆಕೆಯ ತಾಯಿ ಹಾಗೂ ಕುಟುಂಬದ ಇತರ ಸದಸ್ಯರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ರಕ್ಷಣೆ ಒದಗಿಸಬೇಕು. ಕಮಾಂಡೆಂಟ್ ಶ್ರೇಣಿಯ ಅಧಿಕಾರಿ ವಿಳಂಬಿಸದೆ ಅನುಸರಣಾ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿದೆ.

ಅತ್ಯಾಚಾರ ಸಂತ್ರಸ್ತೆಗೆ ಮಧ್ಯಂತರ ಪರಿಹಾರವಾಗಿ 25 ಲಕ್ಷ ರೂಪಾಯಿ ನೀಡುವಂತೆ ಪೀಠ ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶಿಸಿದೆ.

ರಕ್ಷಣೆ ಕೋರಿ ಸಂತ್ರಸ್ತೆ ನ್ಯಾಯಾಲಯಕ್ಕೆ ಬರೆದ ಪತ್ರವನ್ನು ನೀಡಲು ವಿಳಂಬ ಮಾಡಿದ ರಿಜಿಸ್ಟ್ರಿಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಮೂವರು ಪೊಲೀಸ್ ಸಿಬ್ಬಂದಿ ಅಮಾನತು

ಲಕ್ನೋ: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಗಂಭೀರವಾಗಿ ಗಾಯಗೊಳ್ಳಲು ಕಾರಣವಾಗಿರುವ ರಾಯ್‌ಬರೇಲಿ ರಸ್ತೆ ಅಪಘಾತ ಸಂಭವಿಸಿದ ನಾಲ್ಕು ದಿನಗಳ ಬಳಿಕ ಸಂತ್ರಸ್ತೆಗೆ ಭದ್ರತೆ ನೀಡಿದ್ದ ಇಬ್ಬರು ಮಹಿಳಾ ಕಾನ್ಸ್‌ಟೆಬಲ್ ಸಹಿತ ಮೂವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.

 ಬಂದೂಕುಧಾರಿ ಸುದೇಶ್ ಕುಮಾರ್ ಹಾಗೂ ಇಬ್ಬರು ಮಹಿಳಾ ಕಾನ್ಸ್‌ಟೆಬಲ್‌ಗಳಾದ ರೂಬಿ ಪಟೇಲ್, ಸುನಿತಾ ದೇವಿಯನ್ನು ಉನ್ನಾವೊ ಪೊಲೀಸ್ ಅಧೀಕ್ಷಕ ಮಾಧವ ಪ್ರಸಾದ್ ವರ್ಮಾ ಅಮಾನತುಗೊಳಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ನ ವಕ್ತಾರ ಹೇಳಿದ್ದಾರೆ.

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ನಿವಾಸಕ್ಕೆ 6 ಪೊಲೀಸ್ ಸಿಬ್ಬಂದಿಯ ರಕ್ಷಣೆ ನೀಡಲಾಗಿದೆ. ಅಲ್ಲದೆ ಅವರ ಪ್ರಯಾಣಿಸುವ ಸಂದರ್ಭ ರಕ್ಷಣೆ ನೀಡಲು ಮೂವರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಮೂವರು ಪೊಲೀಸರ ನಿರ್ಲಕ್ಷ ಸಾಬೀತಾಗಿದೆ ಎಂದು ವರ್ಮಾ ಹೇಳಿದ್ದಾರೆ.

ಬೆದರಿಕೆ ಬಗ್ಗೆ ಪತ್ರ ಬರೆದಿದ್ದ ವಕೀಲ

ಉನ್ನಾವೊ: ತನ್ನ ಜೀವಕ್ಕೆ ಬೆದರಿಕೆ ಇದೆ. ಆದುದರಿಂದ ಕೂಡಲೇ ತನಗೆ ಆಯುಧ ಪರವಾನಿಗೆ ನೀಡಬೇಕು ಎಂದು ಕೋರಿ ಅತ್ಯಾಚಾರ ಸಂತ್ರಸ್ತೆಯ ಪರ ವಕೀಲ ಸುಮಾರು 15 ದಿನಗಳ ಹಿಂದೆ ಬರೆದ ಪತ್ರ ಗುರುವಾರ ಬೆಳಕಿಗೆ ಬಂದಿದೆ.

ತನಗೆ ಆಯುಧ ಪರವಾನಿಗೆ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಎಂದು ಆಗ್ರಹಿಸಿ ವಕೀಲ ಮಹೇಂದ್ರ ಸಿಂಗ್ ಜಿಲ್ಲಾ ದಂಡಾಧಿಕಾರಿಗೆ ಪತ್ರ ಬರೆದಿದ್ದರು. ‘‘ನನ್ನನ್ನು ಕೊಲೆ ಮಾಡಬಹುದು ಎಂಬ ಆತಂಕ ಕಾಡುತ್ತಿದೆ’’ ಎಂದು ಮಹೇಂದ್ರ ಸಿಂಗ್ ಅವರ ಜುಲೈ 15ರ ಪತ್ರ ಹೇಳಿದ್ದರು.

38 ಪತ್ರ ಬರೆದ ಕುಟುಂಬ

ಲಕ್ನೋ: ತಮ್ಮ ಜೀವಕ್ಕೆ ಅಪಾಯ ಇದೆ. ತಮಗೆ ಭದ್ರತೆ ನೀಡುವಂತೆ ಕೋರಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಉನ್ನತ ಸರಕಾರಿ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕಳೆದ ಒಂದು ವರ್ಷದಿಂದ ಸುಮಾರು 36 ಪತ್ರಗಳನ್ನು ಬರೆದಿದೆ.

ನಾವು ಅಧಿಕಾರಿಗಳಿಗೆ ಪತ್ರಗಳನ್ನು ಕಳುಹಿಸಿದ್ದೆವು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ಆದುದರಿಂದ ಜುಲೈ 12ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಪತ್ರ ಬರೆದೆವು ಎಂದು ಅತ್ಯಾಚಾರ ಸಂತ್ರಸ್ತೆಯ ಮಾವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News