ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ಗೆ ಅನಿಲ್ ಕಪೂರ್ ರಾಯಭಾರಿ

Update: 2019-08-02 07:08 GMT

ಬೆಂಗಳೂರು, ಆ.2: ವಿಶ್ವದಾದ್ಯಂತ 250 ಶೋರೂಂಗಳನ್ನು ಹೊಂದಿರುವ ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಚಿನ್ನಾಭರಣಗಳ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ತನ್ನ ಬ್ರಾಂಡ್ ಅಂಬಾಸಿಡರ್‌ನ್ನಾಗಿ ಬಾಲಿವುಡ್‌ನ ಖ್ಯಾತ ನಟ ಅನಿಲ್ ಕಪೂರ್ ಅವರನ್ನು ನೇಮಕ ಮಾಡಿಕೊಂಡಿದೆ.

ಅನಿಲ್ ಕಪೂರ್ ಅತ್ಯಂತ ಹಿರಿಯ ಮತ್ತು ಖ್ಯಾತ ನಟರಾಗಿದ್ದು, ಹಾಲಿವುಡ್, ಬಾಲಿವುಡ್‌ನ ಹಲವಾರು ಸಿನೆಮಾಗಳಲ್ಲಿ ನಟಿಸಿದ್ದಾರೆ ಮತ್ತು ಟಿವಿ ಸರಣಿಗಳಲ್ಲಿಯೂ ನಟಿಸಿದ್ದಾರೆ. ಸಿನಿ ಜಗತ್ತಿನಲ್ಲಿ ನಟರಾಗಿ ಸುದೀರ್ಘ 40 ವರ್ಷಗಳಿಂದಲೂ ಸಕ್ರಿಯವಾಗಿರುವ ಅವರು, 2005ರಿಂದ ಚಿತ್ರ ನಿರ್ಮಾಪಕರೂ ಆಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಅನಿಲ್ ಕಪೂರ್, ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಒಮ್ಮೆ ಸ್ಕ್ರೀನ್ ಆ್ಯಕ್ಟರ್ಸ್‌ ಗಿಲ್ಡ್ ಅವಾರ್ಡ್ ಮತ್ತು ಆರು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ‘ಮಲಬಾರ್ ಪ್ರಾಮೀಸಸ್’ ಎಂಬ ಹೊಸ ಟಿವಿ ವಾಣಿಜ್ಯ ಸರಣಿಗಳಲ್ಲಿ ಅನಿಲ್ ಕಪೂರ್ ಕಾಣಿಸಿಕೊಳ್ಳಲಿದ್ದು, ಈ ಟಿವಿ ಜಾಹೀರಾತನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಈಗಾಗಲೇ ಕರೀನಾ ಕಪೂರ್ ಖಾನ್, ತಮನ್ನಾ ಭಾಟಿಯಾ ಮತ್ತು ಮಿಸ್ ವರ್ಲ್ಡ್ ಮನೂಷಿ ಚಿಲ್ಲಾರ್(2017) ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್‌ಗಳನ್ನಾಗಿ ನೇಮಕ ಮಾಡಿಕೊಂಡಿದೆ.

ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ.ಪಿ ಅಹ್ಮದ್ ಅವರು ಅನಿಲ್ ಕಪೂರ್ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿರುವ ಬಗ್ಗೆ ಮಾತನಾಡಿ, ‘‘ಮಲಬಾರ್ ಕುಟುಂಬಕ್ಕೆ ಅನಿಲ್ ಕಪೂರ್ ಅವರನ್ನು ಸ್ವಾಗತಿಸಲು ನಮಗೆ ಸಂತಸವೆನಿಸುತ್ತಿದೆ. ಕಳೆದ 5 ವರ್ಷಗಳಿಂದ ಹಲವಾರು ಸ್ಟೋರ್‌ಗಳ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ನಾವು ಅನಿಲ್ ಕಪೂರ್ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೇವೆ. ಇದು ನಮ್ಮ ಮತ್ತು ಅವರ ನಡುವಿನ ಸಂಬಂಧದ ಮುಂದುವರಿದ ಭಾಗವಾಗಿದೆ. ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಕಪೂರ್ ಜನಪ್ರಿಯತೆ ನಮ್ಮ ಬ್ರಾಂಡ್‌ಗೆ ಹೆಚ್ಚಿನ ಬಲ ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಜನಪ್ರಿಯತೆ ಮತ್ತು ನಮ್ಮ ಬ್ರಾಂಡಿನ ಆಭರಣಗಳ ವಿಶ್ವಾಸಾರ್ಹತೆ ಮೂಲಕ ನಮ್ಮ ವ್ಯವಹಾರವನ್ನು ವಿಸ್ತರಣೆ ಮಾಡುವಲ್ಲಿ ನೆರವಾಗುತ್ತದೆ’’ ಎಂದು ಅಭಿಪ್ರಾಯಪಟ್ಟರು.

ಅನಿಲ್ ಕಪೂರ್ ಮಾತನಾಡಿ, ‘‘ನಾನು ನಂಬಿಕೆ ಇಟ್ಟುಕೊಂಡಿರುವ ಮಲಬಾರ್ ಬ್ರಾಂಡ್ ಅನ್ನು ಶಿಫಾರಸು ಮಾಡುತ್ತೇನೆ ಮತ್ತು ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ನನ್ನ ಮೇಲೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇಟ್ಟಿರುವ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ ಮತ್ತು ಇಂತಹ ಸಂಸ್ಥೆಯ ಉತ್ಪನ್ನಗಳಿಗೆ ನಾನು ರಾಯಭಾರಿಯಾಗುತ್ತಿರುವುದು ನನಗೆ ಹೆಮ್ಮೆ ತಂದಿದೆ. ಭಾರತ ಮತ್ತು ವಿದೇಶಗಳಲ್ಲಿ ನಡೆದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಹಲವಾರು ಕಾರ್ಯಕ್ರಮಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ಇದೀಗ ಈ ಸಂಸ್ಥೆಯೊಂದಿಗೆ ಸಹಯೋಗ ಹೊಂದುತ್ತಿರುವುದು ಒಂದು ರೀತಿಯಲ್ಲಿ ತವರಿಗೆ ಮರಳಿದಂತಾಗಿದೆ’’ ಎಂದು ಹರ್ಷ ವ್ಯಕ್ತಪಡಿಸಿದರು.

ಭಾರತ, ಮಧ್ಯ ಪೂರ್ವ, ಆಗ್ನೇಯ ಏಶ್ಯ ಮತ್ತು ಅಮೆರಿಕ ಸೇರಿದಂತೆ 10 ದೇಶಗಳಲ್ಲಿ ಮಲಬಾರ್ ಗ್ರೂಪ್ ರೀಟೇಲ್ ಔಟ್‌ಲೆಟ್‌ಗಳು ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಬನ್ನೇರುಘಟ್ಟ, ಹೈದರಾಬಾದ್, ವಾಶಿ, ಮಹಾರಾಷ್ಟ್ರದ ಔರಂಗಾಬಾದ್, ಒಡಿಶಾದ ಭುವನೇಶ್ವರವಲ್ಲದೇ, ಬಾಂಗ್ಲಾದೇಶ, ಶ್ರೀಲಂಕಾ, ಆಸ್ಟ್ರೇಲಿಯಾ, ಕೆನಡಾ, ಈಜಿಪ್ಟ್ ಮತ್ತು ಟರ್ಕಿ ಸೇರಿದಂತೆ ಇನ್ನೂ ಹಲವಾರು ದೇಶಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡುವ ಯೋಜನೆ ಹಾಕಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News