ಐಎಂಎ ವಂಚನೆ ಪ್ರಕರಣ: ಎಸ್‌ಐಟಿಯಿಂದ ಐಪಿಎಸ್ ಅಧಿಕಾರಿಯ ವಿಚಾರಣೆ

Update: 2019-08-02 11:49 GMT

ಬೆಂಗಳೂರು, ಆ.2: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರು ಸಿಟ್ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.

ಶುಕ್ರವಾರ ಬೆಳಗ್ಗೆ ಇಲ್ಲಿನ ಸಿಟ್(ಎಸ್‌ಐಟಿ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಅಜಯ್ ಹಿಲೋರಿ ಅವರು ಹೇಳಿಕೆಗಳನ್ನು ತನಿಖಾಧಿಕಾರಿಗಳು ದಾಖಲು ಮಾಡಿಕೊಂಡರು ಎಂದು ತಿಳಿದುಬಂದಿದೆ.

ಅಜಯ್ ಹಿಲೋರಿ ಈ ಹಿಂದೆ ನಗರದ ಪೂರ್ವ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಐಎಂಎ ಅಕ್ರಮ ಕುರಿತು ತನಿಖೆ ನಡೆಸುವಂತೆ ಆರ್‌ಬಿಐ ಸರಕಾರಕ್ಕೆ ಸೂಚನೆ ನೀಡಿತ್ತು. ಬಳಿಕ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಒಡೆತನದ ಕಂಪೆನಿಗಳ ವ್ಯವಹಾರ ಕಾನೂನು ಬದ್ಧವಾಗಿ ನಡೆಯುತ್ತಿದೆ ಎಂದು ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರು ಹೇಳಿದ್ದರು. ಆದರೆ, ಈ ಬಗ್ಗೆ ಆರ್‌ಬಿಐ ಆಕ್ಷೇಪ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ತದನಂತರ ಸರಕಾರ ಪ್ರಕರಣದ ಮರು ವಿಚಾರಣೆಗೆ ಆದೇಶಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಅಜಯ್ ಹಿಲೋರಿ ವಂಚಕ ಕಂಪೆನಿಗೆ ಕ್ಲೀನ್ ಚಿಟ್ ನೀಡಿ, ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಅವರಿಗೆ ವರದಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ.

ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಟ್, ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯೊಬ್ಬರನ್ನು ವಿಚಾರಣೆಗೊಳಪಡಿಸಿದೆ. ಹಲವು ದಾಖಲೆಗಳಿದ್ದರೂ, ವಂಚನೆ ಕಂಪೆನಿಗೆ ಡಿಸಿಪಿಯಾಗಿದ್ದ ವೇಳೆ ಅಜಯ್ ಹಿಲೋರಿ ಅವರು ಕ್ಲೀನ್‌ಚಿಟ್ ನೀಡಿದ್ದರು ಎಂದು ಆರೋಪಿಸಲಾಗಿದೆ.

ಮತ್ತಷ್ಟು ಪೊಲೀಸರಿಗೆ ನೋಟಿಸ್

ಇಲ್ಲಿನ ಪುಲಿಕೇಶಿ ನಗರದ ಎಸಿಪಿ ಆಗಿದ್ದ ಎಸ್.ರಮೇಶ್ ಕುಮಾರ್, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದ ಎಂ.ರಮೇಶ್ ಅವರಿಗೂ ಸಿಟ್ ನೋಟಿಸ್ ನೀಡಿದ್ದು, ಆ.4 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News