ಅಯೋಧ್ಯೆ ಪ್ರಕರಣ: ಆ.6ರಿಂದ ಸುಪ್ರೀಂಕೋರ್ಟ್‌ನಿಂದ ಪ್ರತಿದಿನ ವಿಚಾರಣೆ

Update: 2019-08-02 09:18 GMT

ಹೊಸದಿಲ್ಲಿ, ಆ.8: ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಜಮೀನು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ಸಮಿತಿ ಯಶಸ್ವಿಯಾಗದಿರುವುದನ್ನು ಗಮನಿಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ಸದಸ್ಯರನ್ನು ಒಳಗೊಂಡ ಸಾಂವಿಧಾನಿಕ ನ್ಯಾಯಪೀಠ ಆಗಸ್ಟ್ 6ರಿಂದ ಪ್ರತಿದಿನ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿದೆ.

ತಾನು ಇಂದು ಮಧ್ಯಸ್ಥಿಕೆ ಸಮಿತಿಯಿಂದ ವರದಿ ಸ್ವೀಕರಿಸಿದ್ದು, ಅದು ಅಂತಿಮ ನಿರ್ಧಾರಕ್ಕೆ ಬರಲು ವಿಫಲವಾಗಿದೆ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಮೀನು ವಿವಾದ ಪ್ರಕರಣವನ್ನು ಪ್ರತಿದಿನ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್‌ನ ಸಿಜೆಐ ಗೊಗೊಯ್ ಹೇಳಿದ್ದಾರೆೆ. ಸಿಜೆಐ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಜು.18ರಂದು ಸ್ಥಿತಿಗತಿ ವರದಿ ಸಲ್ಲಿಸುವಂತೆ ಮಧ್ಯಸ್ಥಿಕೆ ಸಮಿತಿಗೆ ಸೂಚಿಸಿತ್ತು.

 ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಎಫ್‌ಎಂಐ ಕಲೀಫುಲ್ಲಾ, ಹಿರಿಯ ವಕೀಲ ಶ್ರೀರಾಮ್ ಪಾಂಚು ಹಾಗೂ ಆಧ್ಯಾತ್ಮಿಕ ಗುರು ಶ್ರೀಶ್ರೀ ರವಿಶಂಕರ್ ಪ್ರಸಾದ್ ಅವರನ್ನೊಳಗೊಂಡ ಮಧ್ಯಸ್ಥಿಕೆ ಸಮಿತಿ ಮಾ.8ರಿಂದ ಫೈಝಾಬಾದ್‌ನಲ್ಲಿ 155 ದಿನಗಳ ಕಾಲ ಸಂಧಾನ ಪ್ರಕ್ರಿಯೆ ನಡೆಸಿತ್ತು. ಹಿಂದೂ ಪರ ಸಂಘಟನೆಗಳ ವಿರೋಧದ ಹೊರತಾಗಿಯೂ ವಿವಾದಕ್ಕೆ ಸಂಬಂಧಪಟ್ಟ ಪಕ್ಷ ಹಾಗೂ ವ್ಯಕ್ತಿಗಳೊಂದಿಗೆ ಹಲವು ಸಭೆಗಳನ್ನು ಆಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News