ಅಪರಾಧವೇ ಅಧಿಕಾರವಾದಾಗ

Update: 2019-08-03 05:05 GMT

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳು ಈ ದೇಶದ ಅಧಿಕಾರ ಸೂತ್ರ ಹಿಡಿದ ಬಿಜೆಪಿ ಎಂಬ ಪಕ್ಷವನ್ನು ದೇಶದ ಮುಂದೆ ಬೆತ್ತಲೆಯಾಗಿ ನಿಲ್ಲಿಸಿವೆ.ಉನ್ನಾವೊ ಅತ್ಯಾಚಾರ ಮತ್ತು ಆನಂತರ ನಡೆದ ಅಪಘಾತ ಪ್ರಕರಣದಲ್ಲಿ ಎಲ್ಲ ಮುಖಗಳ ಮುಖವಾಡಗಳು ಕಳಚಿ ಬಿದ್ದಿವೆ. ತನ್ನ ಮೇಲೆ ನಡೆದ ಅತ್ಯಾಚಾರದ ವಿರುದ್ಧ ದನಿಯೆತ್ತಿದ ತಪ್ಪಿಗಾಗಿ ಸಂತ್ರಸ್ತ ಮಹಿಳೆ ಭಾರೀ ಬೆಲೆ ತೆರಬೇಕಾಯಿತು.ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ತೂಗುಯ್ಯೆಲೆಯಾಡುತ್ತಿರುವ ಈ ಹೆಣ್ಣುಮಗಳಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರಕ್ಕೆ ಆದೇಶ ನೀಡಿದೆ.ಉನ್ನಾವೊ ಅತ್ಯಾಚಾರ ಹಾಗೂ ಅಪಘಾತಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲ ಐದು ಪ್ರಕರಣಗಳನ್ನು ದಿಲ್ಲಿ ನ್ಯಾಯಾಲಯಕ್ಕೆ ವರ್ಗಾಯಿಸಿ ಗುರುವಾರ ಸುಪ್ರೀಂ ಕೋರ್ಟ್ ಆದೇಶ ನೀಡಿದೆ

 ಈ ಮಹಿಳೆಯ ಕತೆ ಧಾರುಣವಾಗಿದೆ, ಕೇಳಿದರೆ ಕರುಳು ಚುರ್ ಎನ್ನುತ್ತದೆ. ಈ ಮಹಿಳೆಯ ಮೇಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅತ್ಯಾಚಾರ ಮಾಡಿದ್ದ. ನಾಲ್ಕು ಬಾರಿ ಶಾಸನ ಸಭೆಗೆ ಚುನಾಯಿತನಾಗಿ ಬಂದ ಈತ ಅತ್ಯಂತ ಪ್ರಭಾವಿ ರಾಜಕಾರಣಿ. ಈ ಘಟನೆ ನಡೆದು ಎರಡು ವರ್ಷಗಳಾದರೂ ಯೋಗಿ ಸರಕಾರ ಆಕೆ ನೀಡಿದ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮನೆಯ ಮುಂದೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದಳು. ಆದರೂ ಕ್ರೌರ್ಯವೇ ಮೈವೆತ್ತ ಯೋಗಿ ಸರಕಾರ ಕಿವಿಗೊಡಲಿಲ್ಲ.

ತನ್ನ ಮೇಲೆ ನಡೆದ ಅತ್ಯಾಚಾರದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಈಕೆ ಭಾರೀ ಬೆಲೆ ತೆರಬೇಕಾಯಿತು. ನ್ಯಾಯ ಕೇಳಿದ ತಪ್ಪಿಗಾಗಿ ತನ್ನ ಕುಟುಂಬದ ನಾಲ್ವರನ್ನು ಕಳೆದುಕೊಂಡಳು. ಸಾವಿಗೀಡಾದವರಲ್ಲಿ ಆಕೆಯ ತಂದೆಯೂ ಸೇರಿದ್ದಾರೆ. ಅವರು ಪೊಲೀಸ್ ವಶದಲ್ಲಿ ಹೆಣವಾದರು. ಸಾವಿಗೀಡಾದ ಉಳಿದವರು ಅತ್ಯಾಚಾರವನ್ನು ಕಣ್ಣಾರೆ ಕಂಡ ಸಾಕ್ಷಿಗಳು.

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ ಕೆಲವೇ ತಾಸುಗಳಲ್ಲಿ ಸಂತ್ರಸ್ತೆಯ ಒಬ್ಬ ಚಿಕ್ಕಪ್ಪನನ್ನು ಪಾತಕಿ ಕುಲದೀಪ್‌ಸಿಂಗ್ ಬೆಂಬಲಿಗರು ಕೊಚ್ಚಿ ಕೊಂದು ಹಾಕಿದರು. ಇದಾದ ಆನಂತರ ಹಳೆಯ ಪ್ರಕರಣದ ನೆಪದಲ್ಲಿ ಸಂತ್ರಸ್ತೆಯ ತಂದೆಯನ್ನು ಪೊಲೀಸರು ಬಂಧಿಸಿದರು. ಪೊಲೀಸ್ ವಶದಲ್ಲಿದ್ದಾಗಲೇ ಅವರು ಮರಣ ಹೊಂದಿದರು. ಅವರ ದೇಹದ ಮೇಲೆ ಮತ್ತು ಒಳಗೆ ತೀವ್ರ ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆಯಿಂದ ಬಯಲಿಗೆ ಬಂದಿತ್ತು

ಇದು ಇಲ್ಲಿಗೆ ಮುಗಿಯಲಿಲ್ಲ. ಜೈಲಿಗೆ ಹಾಕಲ್ಪಟ್ಟ ಚಿಕ್ಕಪ್ಪಮಹೇಶ್‌ಸಿಂಗ್ ಅವರನ್ನು ಭೇಟಿಯಾಗಲು ಸಂತ್ರಸ್ತೆ ಮತ್ತು ಆಕೆಯ ವಕೀಲ ಹಾಗೂ ಮಹೇಶ್‌ಸಿಂಗ್‌ರ ಪತ್ನಿ (ಸಂತ್ರಸ್ತೆಯ ಚಿಕ್ಕಮ್ಮ) ಅಲ್ಲದೆ ಇನ್ನೋರ್ವ ಚಿಕ್ಕಮ್ಮ ಕಾರಿನಲ್ಲಿ ರಾಯಬರೇಲಿಗೆ ಪ್ರಯಾಣಿಸುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವಿಗೀಡಾದರು. ಸಂತ್ರಸ್ತೆ ಮತ್ತು ಆಕೆಯ ವಕೀಲ ತೀವ್ರವಾಗಿ ಗಾಯಗೊಂಡರು. ಈಗ ಅವರಿಬ್ಬರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಈ ಅತ್ಯಾಚಾರ 2017ರಲ್ಲಿ ನಡೆದಿದ್ದರೂ ಆರೋಪಿ ವಿರುದ್ಧ ಯೋಗಿ ಎಂದು ಕರೆಸಿಕೊಳ್ಳುವ ಆದಿತ್ಯನಾಥರ ಸರಕಾರ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ.ಅದರ ಬದಲಾಗಿ ಸಂತ್ರಸ್ತೆಯ ಸಂಬಂಧಿಕರು ಮತ್ತು ಸಾಕ್ಷಿಗಳನ್ನು ಕೊಲ್ಲುತ್ತಾ ಬರಲಾಯಿತು. ಕೊನೆಗೆ ಲಾರಿ ಢಿಕ್ಕಿ ಹೊಡೆಸಿ ಆಕೆಯನ್ನೂ ಆಕೆಯ ವಕೀಲನನ್ನೂ ಕೊಲ್ಲುವ ಯತ್ನ ನಡೆಯಿತು. ಆಗ ಆಕೆಯ ಇನ್ನೊಬ್ಬ ಚಿಕ್ಕಪ್ಪಇದು ಅಪಘಾತವಲ್ಲ ಕೊಲೆ ಎಂದು ಆರೋಪಿಸಿದ ನಂತರ ಅದು ದೊಡ್ಡ ಸುದ್ದಿಯಾಗಿ ಯೋಗಿ ಸರಕಾರದ ಮುಖವಾಡ ಕಳಚಿ ಬಿತ್ತು. ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ನಂತರ ಸಂಸತ್ತಿನ ಉಭಯ ಸದನಗಳಲ್ಲಿ ಇದು ಪ್ರತಿಧ್ವನಿಸಿತು. ಕೊನೆಗೆ ಎಲ್ಲರೂ ಮುಖಕ್ಕೆ ಉಗುಳಿದ ನಂತರ ಯೋಗಿ ಸರಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತು.

ಉತ್ತರ ಪ್ರದೇಶದಲ್ಲಿ ಇಂಥ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಗೋರಕ್ಷಕರೆಂಬ ಗೂಂಡಾಗಳು ಹಿಂದೆ ಪೊಲೀಸ್ ಅಧಿಕಾರಿಯನ್ನೇ ನಡುಬೀದಿಯಲ್ಲಿ ಕೊಚ್ಚಿ ಹಾಕಿದ್ದರು. ಅಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದು ಯಾವುದೋ ಕಾಲವಾಯಿತು. ಆದರೂ ಬಿಜೆಪಿಗೆ ಮತ್ತು ಆರೆಸ್ಸೆಸ್‌ಗೆ ಯೋಗಿ ಆದಿತ್ಯನಾಥರ ಮೇಲೆ ವಿಶೇಷ ಪ್ರೇಮವಿದ್ದುದರಿಂದ ಅವರನ್ನು ರಕ್ಷಿಸುತ್ತಾ ಬರಲಾಯಿತು. ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯೋಗಿ ಆಡಳಿತವನ್ನು ಹಾಡಿ ಹೊಗಳಿದ್ದರು. ‘‘ಯೋಗಿ ಮೊದಲ ಬಾರಿ ಮುಖ್ಯ ಮಂತ್ರಿಯಾಗಿದ್ದರೂ ದಕ್ಷ ಆಡಳಿತ ನೀಡುತ್ತಿದ್ದಾರೆ’’ ಎಂದು ಸರ್ಟಿಫಿಕೆಟ್ ನೀಡಿದ್ದರು.

 ಕೊನೆಗೆ ಅತ್ಯಾಚಾರಿ ಕುಲದೀಪ್ ಸಿಂಗ್‌ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಜೈಲಿಗೆ ಹಾಕುವ ಮೂಲಕ ಬಿಜೆಪಿ ಮತ್ತು ಯೋಗಿ ಸರಕಾರ ಬೀದಿಯಲ್ಲಿ ಬೆತ್ತಲಾದ ತನ್ನನ್ನು ಮುಚ್ಚಿಕೊಳ್ಳುವ ಯತ್ನ ಮಾಡಿದೆ. ಆದರೂ ಈ ಪಾತಕಿಯನ್ನು ಭೇಟಿಯಾಗಲು ಸಾಕ್ಷಿ ಮಹಾರಾಜರಂತಹ ಬಿಜೆಪಿ ಸಂಸದರು ಜೈಲಿಗೆ ಹೋಗಿದ್ದಾರೆ ಎಂಬುದರಿಂದ ಆತ ಎಷ್ಟು ಪ್ರಭಾವಿ ಎಂದು ಗೊತ್ತಾಗುತ್ತದೆ.

ಈ ಸಂತ್ರಸ್ತ ಮಹಿಳೆ ಕಳೆದ ತಿಂಗಳು ತನಗಾದ ಅನ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆಯದಿದ್ದರೆ ಈ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ. ಈ ಪ್ರಕರಣ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಈ ಪಾತಕಿ ಶಾಸಕನನ್ನು ದಂಡಿಸಿದರೆ ಸಾಲದು, ಯೋಗಿ ಆದಿತ್ಯನಾಥ್ ಕೂಡಾ ರಾಜೀನಾಮೆ ನೀಡಬೇಕು. ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ರಕ್ಷಣೆ ನೀಡುತ್ತ್ತಾ ಬಂದ ಯೋಗಿ ಆದಿತ್ಯನಾಥ್ ಕೂಡ ಇದರ ಹೊಣೆ ಹೊರಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಜಾಣ ಮೌನ ತಾಳುವ ಮೌನಿ ಬಾಬಾ ಪ್ರಧಾನಿ ಮೋದಿಯವರು ಮಾತಾಡಲಿ, ನೊಂದವರಿಗೆ ಸಾಂತ್ವನ ನೀಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News