ರಾಜ್ಯದ ಪರಿಸ್ಥಿತಿ ರಾಜ್ಯಪಾಲರಿಗೆ ಕಾಣುತ್ತಿಲ್ಲವೇ: ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಆಕ್ಷೇಪ

Update: 2019-08-03 07:28 GMT

ಬೆಂಗಳೂರು, ಆ.3: ರಾಜ್ಯದಲ್ಲಿ ನೆರೆ ಹಾವಳಿ, ಬರ ಪರಿಸ್ಥಿತಿಗೆ ಸ್ಪಂದಿಸಬೇಕಾದ ಇಲಾಖೆಗೆ ಮಂತ್ರಿಗಳೇ ಇಲ್ಲದಿರುವುದಕ್ಕೆ, ಸರಕಾರ ರಚನೆಯಾಗಿ ಹಲವು ದಿನಗಳೇ ಕಳೆದರೂ ಮಂತ್ರಿ ಮಂಡಲವೇ ರಚನೆಯಾಗದಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವಿಟರ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪರಿಸ್ಥಿತಿ ರಾಜ್ಯಪಾಲರಿಗೆ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ವಿಶ್ವಾಸಮತ ಯಾಚನೆಗೆ ಸಂದೇಶದ ಮೇಲೆ ಸಂದೇಶ ಕಳುಹಿಸುತ್ತಿದ್ದ ಘನತೆವೆತ್ತ ರಾಜ್ಯಪಾಲರ ಗಮನಕ್ಕೆ. ಸಚಿವರಿಲ್ಲದ ಏಕವ್ಯಕ್ತಿ ಸಂಪುಟದಿಂದಾಗಿ ರಾಜ್ಯದ ಜನತೆ ಅನುಭವಿಸುತ್ತಿರುವ ಬವಣೆ ನಿಮಗೆ ಕಾಣಿಸುತ್ತಿಲ್ಲವೇ?'' ಎಂದು ಮೊದಲ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

"ಅತಿವೃಷ್ಟಿಹಾಗೂ ಅನಾವೃಷ್ಟಿಗಳಿಗೆ ಸ್ಪಂದಿಸಬೇಕಾದ ಕಂದಾಯ, ಕೃಷಿ, ಗ್ರಾಮೀಣ ಅಭಿವೃದ್ಧಿ ಇಲಾಖೆಗಳಿಗೆ ಸಚಿವರೇ ಇಲ್ಲ. ಆದ್ಯತೆ ಅಧಿಕಾರಿಗಳ ವರ್ಗಾವಣೆಯದ್ದೇ? ಸಂಪುಟ ವಿಸ್ತರಣೆಯದ್ದೇ?'' ಎಂದು ತನ್ನ ಎರಡನೇ ಟ್ವೀಟ್‌ನಲ್ಲಿ ಕೇಳಿದ್ದಾರೆ.

"ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಯಡಿಯೂರಪ್ಪ ಅವರು ತೋರಿರುವ ಅತಿ ಅವಸರವನ್ನು ಸಂಪುಟ ವಿಸ್ತರಣೆಯಲ್ಲಿ ತೋರುತ್ತಿಲ್ಲವೇಕೆ? ಅತಿವೃಷ್ಟಿಹಾಗೂ ಅನಾವೃಷ್ಟಿಯಿಂದಾಗಿ ರಾಜ್ಯದ ಜನರು ಸಂಕಟದಲ್ಲಿದ್ದಾರೆ. ಆಡಳಿತ ಯಂತ್ರ ಸ್ತಬ್ದವಾಗಿದೆ. ಇದೇನು ಪ್ರಜಾಪ್ರಭುತ್ವವೇ? ಏಕ ಚಕ್ರಾಧಿಪತ್ಯವೇ?''ಎಂದೂ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News