‘ವಧು ಮಾರಾಟ ದಂಧೆ’ಯ ವಿರುದ್ಧ ಹೋರಾಡುತ್ತಿರುವ ಶಫೀಖುರ್ರಹ್ಮಾನ್ ಗೆ ಪ್ರತಿಷ್ಠಿತ ‘ಗ್ರಿನ್ನೆಲ್ಲ್ ಪ್ರಶಸ್ತಿ’

Update: 2019-08-03 10:16 GMT
Photo: twocircles.net

ಹೊಸದಿಲ್ಲಿ, ಆ.3:  ಭಾರತದಲ್ಲಿ ಹಲವೆಡೆ ನಡೆಯುತ್ತಿರುವ ಅಮಾನವೀಯ ವಧು ಮಾರಾಟ ದಂಧೆಯ ವಿರುದ್ಧ ಸೆಟೆದು ನಿಂತು ಅದನ್ನು ನಿರ್ಮೂಲನೆಗೈಯ್ಯಲು ಅವಿರತ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಶಫೀಖುರ್ರಹ್ಮಾನ್ ಅವರಿಗೆ ಪ್ರತಿಷ್ಠಿತ ‘ಗ್ರಿನ್ನೆಲ್ಲ್ ಪ್ರಶಸ್ತಿ’ ಒಲಿದು ಬಂದಿದೆ.

‘ಗ್ರಿನ್ನೆಲ್ಲ್ ಕಾಲೇಜ್ ಇನ್ನೊವೇಟರ್ ಫಾರ್ ಸೋಶಿಯಲ್ ಜಸ್ಟಿಸ್ ಪ್ರೈಝ್’ ಅಸಾಮಾನ್ಯ ನಾಯಕರಿಗೆ ಹಾಗೂ  ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ದಿಟ್ಟತನದಿಂದ ಹೋರಾಡಿದವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಮೊದಲ ಭಾರತೀಯರಾಗಿದ್ದಾರೆ ಶಫೀಖುರ್ರಹ್ಮಾನ್. ಅವರಿಗೆ ಈ ಪ್ರಶಸ್ತಿಯನ್ನು ಅಮೆರಿಕಾದ ಇಯೊವ ನಗರದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

35 ವರ್ಷದ ಶಫೀಖುರ್ರಹ್ಮಾನ್ ಬಿಹಾರದ ಗಯಾ ಮೂಲದವರು. ಹದಿನೈದು ವರ್ಷದವರಿರುವಾಗಲೇ  ಹೋರಾಟಗಾರರಾಗಬೇಕೆಂಬ ಛಲ ಹೊಂದಿದ್ದ ಅವರು ಬಡವರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುವ ಉದ್ದೇಶದೊಂದಿಗೆ ಕಮ್ಯುನಿಸ್ಟ್ ಪಕ್ಷವನ್ನು ಸೇರಿದ್ದರು. ನಾಲ್ಕು ವರ್ಷ ಪಕ್ಷದಲ್ಲಿದ್ದು ಸಮಾಜದಲ್ಲಿರುವ ಅಸಮಾನತೆ, ಬಡತನ, ಜೀತದಾಳು ಪದ್ಧತಿಯನ್ನು ಕಣ್ಣಾರೆ ಕಂಡಿದ್ದರು. ಮುಂದೆ ಪಕ್ಷದಿಂದ ದೂರ ಸರಿದ ಅವರು 2004ರಲ್ಲಿ ದಿಲ್ಲಿಗೆ ತೆರಳಿ ಅಲ್ಲಿ ವಲಸಿಗ ಕಾರ್ಮಿಕರ ದುಃಸ್ಥಿತಿಯನ್ನು ಕಂಡು ಅವರು ಮರುಗಿದ್ದರು.

ಬಾಂಡೆಡ್ ಲೇಬರ್ ಲಿಬರೇಶನ್ ಫ್ರಂಟ್ ಅಧ್ಯಕ್ಷ ಸ್ವಾಮಿ ಅಗ್ನಿವೇಶ್ ಅವರನ್ನೂ ಶಫೀಖುರ್ರಹ್ಮಾನ್ ಭೇಟಿಯಾಗಿದ್ದರು. ಆ ಸಮಯ ಅಗ್ನಿವೇಶ್ ಅವರು ಶಿಶುಗಳ ಲಿಂಗಾಧರಿತ ಗರ್ಭಪಾತದ ವಿರುದ್ಧ ಹೋರಾಡುತ್ತಿದ್ದರು. ಮುಂದೆ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ಆಂದೋಲನದ  ಬ್ಯಾಕ್ ಆಫೀಸ್ ತಂಡದ ಭಾಗವಾದರು.

ಮಹಿಳೆಯರ ಹಕ್ಕುಗಳು, ಅವರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆಯೂ ತಿಳಿದುಕೊಂಡ ಶಫೀಖುರ್ರಹ್ಮಾನ್  ಖ್ಯಾತ ಮಹಿಳಾವಾದಿ ಲೇಖಕಿ ಕಮಲಾ ಭಾಸಿನ್ ಅವರಿಂದ ಪ್ರಭಾವಿತರಾದರು. 2006ರಲ್ಲಿ  ಅವರು ಬಿಎಸ್‍ಡಬ್ಲ್ಯು ಶಿಕ್ಷಣ ಪಡೆಯುತ್ತಿರುವ  ಸಂದರ್ಭ ಹೆಣ್ಣುಭ್ರೂಣ ಹತ್ಯೆ ಕುರಿತಾದ ಅಧ್ಯಯನಕ್ಕಾಗಿ ಗ್ರಾಮವೊಂದಕ್ಕೆ ಬಂದಿದ್ದ ಸಂದರ್ಭ ಮಾರಾಟವಾಗಿದ್ದ ವಧುವೊಬ್ಬಳು ಸಹಾಯ ಯಾಚಿಸುತ್ತಿದ್ದರೂ ಭಯದಿಂದ ಸಹಾಯ ಮಾಡಲು ಯಾರೂ ಮುಂದೆ ಬಾರದೇ ಇರುವುದನ್ನು ಗಮನಿಸಿದ್ದರು.

ಆದರೆ ಈ ಘಟನೆ ಅವರನ್ನು ಅದೆಷ್ಟು ನಿದ್ದೆಗೆಡಿಸಿತ್ತೆಂದರೆ ಒಂದು ತಿಂಗಳ ನಂತರ ಆ ಯುವತಿಯನ್ನು ಭೇಟಿಯಾಗಲೆಂದು ಆ ಗ್ರಾಮಕ್ಕೆ ತೆರಳಿದಾಗ ಆಕೆಯನ್ನು ಅದಾಗಲೇ ಇನ್ನೊಬ್ಬ ಪುರುಷನಿಗೆ ಮಾರಾಟ ಮಾಡಲಾಗಿತ್ತೆಂದು ತಿಳಿದು ಬಂದಿತ್ತು. ಹೆಣ್ಣು ಮಕ್ಕಳನ್ನು ಈ ರೀತಿ ಹಾಡುಹಗಲೇ ಖರೀದಿಸುವ, ಮಾರಾಟ ಮಾಡುವ ಜಾಲದ ಬಗ್ಗೆ ತಿಳಿದು ಆಗ ಅವರು ದಂಗಾಗಿ ಹೋಗಿದ್ದರು.

ಮುಂದೆ ದಿಲ್ಲಿಗೆ ಮರಳಿದ ನಂತರ ಅವರು  ತಮ್ಮ  ಮಾರ್ಗದರ್ಶಕಿ ಕಮಲಾ ಭಾಸಿನ್ ಅವರ ಸಲಹೆಯಂತೆಯೇ ನಡೆದುಕೊಂಡು ಸಮಾಜದಲ್ಲಿ ತಾವು ಕಾಣ ಬಯಸುವ ಬದಲಾವಣೆಯ ಕುರಿತಾದ ಕಾರ್ಯಯೋಜನೆ ಸಿದ್ಧಪಡಿಸಿದರು. ಅದಕ್ಕಾಗಿ  ಅವರಿಗೆ ಫೆಲೋಶಿಪ್ ಕೂಡ ದೊರೆತು ಮುಂದೆ ದಿಲ್ಲಿಯ ಖ್ಯಾತ ಮಹಿಳಾವಾದಿ ಸಂಘಟನೆ `ಜಗೋರಿ' ಜತೆ ಕೆಲಸ ಮಾಡಿದರು. ನಂತರ 2006ರಲ್ಲ ತಮ್ಮದೇ ಸಂಘಟನೆ `ಎಂಪವರ್ ಪೀಪಲ್' ಆರಂಭಿಸಿದರು.

ಮದುವೆಯ ಹೆಸರಿನಲ್ಲಿ ಮಾರಾಟಗೊಳ್ಳುವ ಮಹಿಳೆಯರಿಗೆ ಸಹಾಯ ಮಾಡುವುದು ಅವರ ಸಂಘಟನೆಯ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಆಗ ಯಾವುದೇ ಸಂಘಟನೆ ಕೆಲಸವೂ ಮಾಡುತ್ತಿರಲಿಲ್ಲ. ದಾನಿಗಳ ನೆರವಿನೊಂದಿಗೆ ಅವರ ಸಂಘಟನೆ ಸಂತ್ರಸ್ತ ಮಹಿಳೆಯರ ಸಹಾಯಕ್ಕೆ ಸನ್ನದ್ಧವಾಗಿತ್ತು.

ರಾಜಧಾನಿ ದಿಲ್ಲಿ ಮೂಲದ ಅವರ ಸಂಘಟನೆ ಉತ್ತರ ಹಾಗೂ ಪೂರ್ವ ಭಾರತದಲ್ಲಿ ಹಲವೆಡೆ ಕಾರ್ಯಾಚರಿಸುತ್ತಿದೆ. ಕಾನೂನು ಸುವ್ಯವಸ್ಥಾ ಏಜನ್ಸಿಗಳೊಂದಿಗೆ ಕೆಲಸ ಮಾಡಿ ಮಾರಾಟ ಮಾಡಲ್ಪಟ್ಟ ವಧುಗಳನ್ನು ಹುಡುಕಿ ಅವರನ್ನು ರಕ್ಷಿಸುವ ಕಾರ್ಯದಲ್ಲಿ ಅವರ ಸಂಘಟನೆ ತನ್ನನ್ನು ತೊಡಗಿಸಿಕೊಂಡಿದೆ.  ಮುಂದೆ ಈ ಸಂತ್ರಸ್ತರಿಗೆ ಪುನರ್ವಸತಿ ಸೌಲಭ್ಯ ಹಾಗೂ ಮತ್ತೆ ಅವರು ಈ ದಂಧೆಗೆ ಬಲಿಯಾಗದಂತೆ ಕ್ರಮವನ್ನೂ ಕೈಗೊಳ್ಳಲಾಗುತ್ತದೆ.

ಯುವಜನತೆಯಲ್ಲಿ ಈ ನಿಟ್ಟಿನಲ್ಲಿ ಶಫೀಖುರ್ರಹ್ಮಾನ್ ಜಾಗೃತಿ ಕೂಡ ಮೂಡಿಸುತ್ತಿದ್ದಾರೆ. ತಮ್ಮ ಕಾರ್ಯದೊಂದಿಗೆ ಕೈಜೋಡಿಸಲು ಅವರು ಹಲವು ಯುವಕರನ್ನೂ ತಮ್ಮ ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಲಿಂಗ ಸಮಾನತೆ, ಮಹಿಳೆಯರಿಗೆ ಆಸ್ತಿ ಮೇಲಿರುವ ಹಕ್ಕು, ಕೌಟುಂಬಿಕ ಹಿಂಸೆ, ಮರ್ಯಾದಾ ಹತ್ಯೆ ಹೀಗೆ ವಿವಿಧ ವಿಚಾರಗಳ ಬಗ್ಗೆ ಅವರು ಜಾಗೃತಿ ಮೂಡಿಸುತ್ತಾರೆ

ಇಲ್ಲಿಯ ತನಕ ಶಫೀಖುರ್ರಹ್ಮಾನ್ ತಮ್ಮ ಸಂಘಟನೆಯ ಮುಖಾಂತರ ಸುಮಾರು 4,000 ಮಹಿಳೆಯರನ್ನು ರಕ್ಷಿಸಿದ್ದಾರೆ ಹಾಗೂ 25,000ಕ್ಕೂ  ಅಧಿಕ ಕೌಟುಂಬಿಕ ಹಿಂಸೆ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಹೋರಾಡಿದ್ದಾರೆ. ಅವರ ಸಂಘಟನೆಯ ಸಹಾಯದಿಂದ  3,000 ಹುಡುಗಿಯರು  ಶಿಕ್ಷಣ ಪಡೆಯುತ್ತಿದ್ದಾರೆ ಹಾಗೂ  ಈ ಮಾರಾಟ ದಂಧೆಯ ಬಲಿಪಶುಗಳಾದ ಮಹಿಳೆಯರ 12,650 ಮಕ್ಕಳಿಗೆ  ದೇಶದ 10 ರಾಜ್ಯಗಳ 85 ಗ್ರಾಮಗಳಲ್ಲಿ ಶಿಕ್ಷಣ ಪಡೆಯಲು ಸಹಾಯ ಮಾಡಲಾಗುತ್ತಿದೆ.

ಅವರ ಈ ಅಸಾಮಾನ್ಯ ಸಮಾಜಸೇವೆಗಾಗಿ ಅವರಿಗೆ ಗ್ರಿನ್ನೆಲ್ ಪುರಸ್ಕಾರದಂಗವಾಗಿ  ಒಂದು ಲಕ್ಷ ಡಾಲರ್ ಬಹುಮಾನ ದೊರೆಯಲಿದೆ. ಈ ಪುರಸ್ಕಾರ ತಮ್ಮ ಸಂಘಟನೆಗೆ ಹಾಗೂ ಅದರ ಹಲವು ಇತರ ಯೋಜನೆಗಳ ಜಾರಿಗೆ ಸಹಕಾರಿಯಾಗಲಿದೆ ಎಂದು ಶಫೀಖುರ್ರಹ್ಮಾನ್ ಹೇಳುತ್ತಾರೆ.

Writer - ನಿಖಾತ್ ಫಾತಿಮಾ, twocircles.net

contributor

Editor - ನಿಖಾತ್ ಫಾತಿಮಾ, twocircles.net

contributor

Similar News