ಐಟಿ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

Update: 2019-08-03 13:24 GMT

ಬೆಂಗಳೂರು, ಆ. 3: ದೇಶದಲ್ಲಿ ‘ತೆರಿಗೆ ಭಯೋತ್ಪಾದನೆ’ ಆರಂಭವಾಗಿದ್ದು, ಒಂದು ರೀತಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಆರೋಪಿಸಿರುವ ಮೇಲ್ಮನೆ ಸದಸ್ಯ ಪ್ರಕಾಶ್ ರಾಠೋಡ್, ಕೆಫೆ ಕಾಫಿ ಡೇ ಮಾಲಕ ಸಿದ್ಧಾರ್ಥ ಐಟಿ ಮುಖ್ಯಸ್ಥರ ಮೇಲೆ ಆರೋಪ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತ ಸಿದ್ಧಾರ್ಥ ಐಟಿ ಕಿರುಕುಳ ಸಂಬಂಧ ಪತ್ರ ಬರೆದಿದ್ದು, ಅದನ್ನೆ ಡೆತ್‌ನೋಟ್ ಎಂದು ಪರಿಗಣಿಸಿ, ಐಟಿ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಐಟಿ, ಇಡಿ, ಸಿಬಿಐ ಸೇರಿದಂತೆ ಸಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಕೇಂದ್ರ ಸರಕಾರ ತನ್ನ ವಿರೋಧಿಗಳ ಮೇಲೆ ದ್ವೇಷ ಪ್ರೇರಿತ ದಾಳಿಗಳನ್ನು ನಡೆಸುತ್ತಿದೆ ಎಂದು ದೂರಿದ ಅವರು, ಲೋಕಸಭೆ ಚುನಾವಣೆಯ ವೇಳೆ ದಾಳಿಗಳನ್ನು ನಡೆಸಲಾಯಿತು. ಇಂತಹ ದಾಳಿಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ ಎಂದರು.

ಬಿಜೆಪಿ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆ ಮೂಲಕ ಲಾಭ ಮಾಡಿಕೊಳ್ಳಲು ಹೊರಟಿದೆ. ಚುನಾವಣೆ ಸಂದರ್ಭದಲ್ಲೆ ರಾಜ್ಯದಲ್ಲಿನ ಹಲವು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಉದ್ಯಮಿಗಳ ಮೇಲೆಯೂ ರಾಜಕೀಯ ಪ್ರೇರಿತ ದಾಳಿಗಳನ್ನು ನಡೆಸಲಾಗುತ್ತಿದೆ. ಐಟಿ ಭಯವನ್ನು ತೋರಿಸಿ ರಾಜ್ಯಸಭಾ ಸದಸ್ಯರನ್ನು ಬೆದರಿಸಲಾಗುತ್ತಿದೆ. ಆ ಮೂಲಕ ಕಾಂಗ್ರೆಸ್ ಪಕ್ಷದ ಹಲವರನ್ನು ಬಿಜೆಪಿಗೆ ಸೆಳೆದುಕೊಳ್ಳಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News