ಅಕ್ಕಮಹಾದೇವಿ ಸಂಪ್ರದಾಯಕ್ಕೆ ಸೆಡ್ಡು ಹೊಡೆದ ದಿಟ್ಟ ಮಹಿಳೆ: ಪ್ರೊ.ವಿಜಯಾ ಕೋರಿಶೆಟ್ಟಿ

Update: 2019-08-03 13:19 GMT

ಬೆಂಗಳೂರು, ಆ.3: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಬಾಹ್ಯ ಹಾಗೂ ಆಂತರಿಕ ಸೌಂದರ್ಯ, ಕಾಯ, ಆತ್ಮದ ನೂತನ ಮೀಮಾಂಸೆಯನ್ನು ಹುಟ್ಟು ಹಾಕಿದ ದಿಟ್ಟ ಮಹಿಳೆ ಅಕ್ಕಮಹಾದೇವಿ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.

ಶನಿವಾರ ನಗರದ ದಿ ಮಿಥಿಕ್ ಸೊಸೈಟಿಯಲ್ಲಿ ಭಾರತೀಯ ದಾರ್ಶನಿಕ ಅನುಸಂಧಾನ ಪರಿಷತ್ ಆಯೋಜಿಸಿದ್ದ ಅಕ್ಕಮಹಾದೇವಿ ದರ್ಶನ - ವಚನಗಳು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಅಕ್ಕಮಹಾದೇವಿ ಸಂಸಾರ, ಕಾಮ, ಭಕ್ತಿ, ಮೋಕ್ಷ ಮುಂತಾದವುಗಳಿಗೆ ಹೊಸ ವ್ಯಾಖ್ಯಾನ ನೀಡುವ ಮೂಲಕ ಪ್ರಭುತ್ವವನ್ನು ಧಿಕ್ಕರಿಸಿ ದಿಗಂಬರತ್ವವನ್ನು ಸ್ವೀಕರಿಸಿದ್ದರು ಎಂದು ತಿಳಿಸಿದರು.

ಸ್ತ್ರೀಯರ ಸ್ವಾತಂತ್ರಕ್ಕಾಗಿ ವಚನಗಳ ಮೂಲಕ ಹೋರಾಟ ನಡೆಸಿ, ಸ್ತ್ರೀ ಸಮಾನತೆ ಎತ್ತಿ ಹಿಡಿದಿದ್ದರು. ಅಕ್ಕಮಹಾದೇವಿಯ ವಚಗಳಲ್ಲಿನ ತತ್ವಗಳನ್ನು ಅಂಬೇಡ್ಕರ್ ಅವರ ಸಮಾನತೆ ತತ್ವ, ಗಾಂಧೀಜಿ ಅವರ ಅಹಿಂಸಾ ತತ್ವಗಳಲ್ಲಿ ಕಾಣಬಹುದು. ಹೀಗಾಗಿ, ಅಕ್ಕಮಹಾದೇವಿ ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದು ನೆನೆದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಡಾ.ಎಸ್.ಆರ್.ಲೀಲಾ ಮಾತನಾಡಿ, ಕೆಲ ಶರಣೆಯರ ವಚನಗಳು ದಾರಿ ತಪ್ಪಿದಂತೆ ಕಾಣುತ್ತಿದ್ದು, ಅಕ್ಕಮಹಾದೇವಿ ಅವರ ವಚನಗಳು ಘನತೆ ಮತ್ತು ಗಾಂಭೀರ್ಯ ಉಳಿಸಿಕೊಂಡಿವೆ. ಆದರೆ, ಅಕ್ಕಮಹಾದೇವಿ ಅವರ ಚಿಂತನೆ ಮತ್ತು ವಚನಗಳಿಗೆ ಪ್ರಚಾರ ಸಿಗುತ್ತಿಲ್ಲ. ಅಕ್ಕನ ಜೀವನದ ಮಗ್ಗುಲಗಳು ಜನರಿಗೆ ತಿಳಿಯಬೇಕಿದೆ. ಅವರು ಕನ್ನಡದ ಕುಲಗೌರವ ಎಂದರು.

ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ಮಾತನಾಡಿ, ಅಕ್ಕಮಹಾದೇವಿ ಅವರ ವಚನಗಳು ಸಾರಸ್ವತ ಲೋಕದಲ್ಲಿ ಉಲ್ಲೇಖವಾಗದೇ ಇರಬಹುದು. ಆದರೆ, ಸಾಮಾನ್ಯರ ಮನಸ್ಸಿಗೆ ಮುಟ್ಟಿವೆ. ಸ್ತ್ರೀ ಚಳವಳಿಯ ಪ್ರತೀಕವಾಗಿದ್ದು, ಆಧ್ಯಾತ್ಮಿಕ ಮತ್ತು ಸಮಾಜಮುಖಿ ಜೀವನ ನಡೆಸಿ, ಸಮಾಜದಲ್ಲಿನ ಅಂಕುಡೊಂಕುಗಳನ್ನು ವಚನದ ಮೂಲಕ ತಿದ್ದಿದ್ದಾರೆ ಎಂದರು.

ಸಂಕಿರಣದಲ್ಲಿ ಡಾ.ಮಂಜುಳಾ(ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಮಹಾದೇವಿ ಅಕ್ಕ), ಬಿ.ಪಿ.ವೀರೇಂದ್ರ ಕುಮಾರ್ (ಅಕ್ಕನ ವಚನಗಳಲ್ಲಿ ಬಿಂಬಿತವಾಗಿರುವ ಸಾಮಾಜಿಕ ಕಳಕಳಿ), ಪ್ರೊ.ಎಂ.ಕೊಟ್ರೇಶ್(ಅಕ್ಕನ ಕಾಲದ ಉಡುತಡಿ ಗ್ರಾಮ), ಡಾ.ಕೆ.ವಸಂತಲಕ್ಷ್ಮಿ(ಹರಿಹರ ಕವಿ ಚಿತ್ರಿಸಿರುವ ಮಹಾದೇವಿಯಕ್ಕ), ಪ್ರೊ.ಡಿ.ವಿ. ಪರಮಶಿವಮೂರ್ತಿ(ಅಕ್ಕಮಹಾದೇವಿ- ಶೂನ್ಯ ಸಂಪಾದನೆ), ಡಾ. ಅನಸೂಯಾದೇವಿ(ಅಕ್ಕನ ವಚನಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳು) ವಿಚಾರಗೋಷ್ಠಿ ನಡೆಸಿದರು.

ಅಕ್ಕಮಹಾದೇವಿ ವಚನಗಳು ಸ್ತ್ರೀಪರ ಚಿಂತನೆ ಮತ್ತು ಚಳವಳಿಗೆ ಭದ್ರಬುನಾದಿ ಹಾಕಿದ್ದು, ಎಲ್ಲ ಕಾಲದಲ್ಲಿಯೂ ಸ್ತ್ರೀ ಸಮಾನತೆ ಎತ್ತಿ ಹಿಡಿಯುತ್ತವೆ.

-ಪ್ರೊ.ವಿಜಯಾ ಕೋರಿಶೆಟ್ಟಿ, ಅಕ್ಕಮಹಾದೇವಿ ಮಹಿಳಾ ವಿವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News