ಉಲ್ಬಣಿಸಿದ ಪ್ರವಾಹ, ತುರ್ತು ಪರಿಹಾರ ಅಗತ್ಯ

Update: 2019-08-07 05:22 GMT

ನೆರೆಯ ಮಹಾರಾಷ್ಟ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಉಲ್ಬಣಿಸಿದೆ. ಅದರಲ್ಲೂ ಮುಖ್ಯವಾಗಿ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಪರಿಸ್ಥಿತಿ ಗಂಭೀರವಾಗಿದೆ. ಚಿಕ್ಕೋಡಿ, ರಾಯಬಾಗ, ಜಮಖಂಡಿ, ಅಥಣಿ, ಲಿಂಗಸುಗೂರು ತಾಲೂಕಿನ ಅನೇಕ ಹಳ್ಳಿಗಳು ಪ್ರವಾಹದ ನೀರಿನಿಂದ ಸುತ್ತುವರಿಯಲ್ಪಟ್ಟಿವೆ. ನದಿ ತೀರದ ಜನರನ್ನು ಸುರಕ್ಷಿತ ತಾಣಗಳಿಗೆ ಕಳುಹಿಸಲಾಗಿದೆ. ಸುಮಾರು ನಲವತ್ತು ಸೇತುವೆಗಳು, ಅನೇಕ ದೇಗುಲಗಳು ನೆರೆ ನೀರಿನಲ್ಲಿ ಮುಳುಗಿವೆ.

ಮಹಾರಾಷ್ಟ್ರದಲ್ಲಿ ಹಗಲೂ ರಾತ್ರಿ ಸುರಿಯುತ್ತಿರುವ ಮಳೆಯಿಂದಾಗಿ ಕೊಯ್ನಿ ಸೇರಿದಂತೆ ಅನೇಕ ಅಣೆಕಟ್ಟುಗಳು ತುಂಬಿ ಎರಡು ಲಕ್ಷ ಕ್ಯೂಸೆಕ್ಸ್‌ಗಿಂತ ಹೆಚ್ಚು ನೀರನ್ನು ಹೊರಬಿಡಲಾಗಿದೆ. ಕೃಷ್ಣಾ, ಭೀಮಾ ನದಿಯ ಆ ನೀರು ಉತ್ತರ ಕರ್ನಾಟಕದ ಬಹುತೇಕ ಕಡೆ ಪ್ರವಾಹದ ಪರಿಸ್ಥಿತಿಯನ್ನುಂಟು ಮಾಡಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇದರ ಜೊತೆಗೆ ಇಲ್ಲೂ ಮಳೆ ಸುರಿಯುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಈ ಪ್ರವಾಹದ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪಮಂಗಳವಾರ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಬೆಳೆ ಹಾನಿಗೆ ತಕ್ಷಣ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಅಗತ್ಯ ಇರುವ ಗ್ರಾಮಗಳ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಸದ್ಯದಲ್ಲಿ ದಿಲ್ಲಿಗೆ ಹೋಗಿ ಪ್ರಧಾನಮಂತ್ರಿ ಅವರನ್ನು ಭೇಟಿಯಾಗಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.
ಹದಿನಾಲ್ಕು ವರ್ಷಗಳ ಹಿಂದೆ ಅಂದರೆ 2005ರಲ್ಲಿ ಇಂಥದ್ದೇ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆಗಲೂ ನದಿ ತೀರದ ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿತ್ತು. ಈ ಬಾರಿ ಅದಕ್ಕಿಂತ ತೀವ್ರ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಈ ಪರಿಸ್ಥಿತಿ ಎದುರಿಸಲು ಸರಕಾರ ಸಿದ್ಧವೆಂದು ಯಡಿಯೂರಪ್ಪಹೇಳುತ್ತಿದ್ದಾರೆ, ಅವರ ಕಾಳಜಿ ಪ್ರಶ್ನಾತೀತ. ಉಳಿದುದೇನೇ ಇರಲಿ ಜನರು ಸಂಕಷ್ಟಕ್ಕೆ ಸಿಲುಕಿದಾಗ ಜನರ ನಡುವೆ ಹೋಗಿ ಪರಿಹಾರ ಕಾರ್ಯದ ಉಸ್ತುವಾರಿ ಮಾಡುವ ಅವರ ಬದ್ಧತೆಯ ಬಗ್ಗೆ ಎರಡು ಮಾತಿಲ್ಲ, ಆದರೆ ಈಗ ಸರಕಾರ ಅಂದರೆ ಅವರೊಬ್ಬರೇ. ಅಧಿಕಾರ ವಹಿಸಿಕೊಂಡು ಎರಡು ವಾರ ಗತಿಸಿದರೂ ರಾಜ್ಯ ಸಚಿವ ಸಂಪುಟ ರಚಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ಅವರು ಅಸಹಾಯಕರು. ದಿಲ್ಲಿಯ ದೊರೆಗಳಿಂದ ಹಸಿರು ನಿಶಾನೆ ಬರದೆ ಯಡಿಯೂರಪ್ಪನವರು ತಮ್ಮ ಸಂಪುಟವನ್ನು ವಿಸ್ತರಿಸುವಂತಿಲ್ಲ. ಹೀಗಾಗಿ ಪ್ರವಾಹ ಪರಿಹಾರ ಕಾರ್ಯ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ನಡುಗಡ್ಡೆಗಳಲ್ಲಿರುವ ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳುವವರೇ ಇಲ್ಲ.
ದಿನದಿಂದ ದಿನಕ್ಕೆ ಮಳೆಯ ಹಾಗೂ ಪ್ರವಾಹದ ಪರಿಸ್ಥಿತಿ ಉಲ್ಬಣಿಸುತ್ತಲೇ ಇದೆ.ತುಂಬ ತಡವಾಗಿ ದಕ್ಷಿಣ ಕರ್ನಾಟಕದ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆ ಸುರಿಯಲಾರಂಭಿಸಿದೆ. ಮುಂದಿನ 24 ಗಂಟೆಗಳಲ್ಲಿ ಅಂದರೆ ದಿನಾಂಕ 7 ಮತ್ತು 8ರಂದು ಭಾರೀ ಮಳೆ ಸುರಿಯಲಿದೆ ಎಂದು ಮನ್ಸೂಚನೆ ಬಂದಿದೆ. ಈಗಾಗಲೇ ಮಳೆಯಿಂದಾಗಿ ರಸ್ತೆ ಮತ್ತು ರೈಲು ಸಂಚಾರ ಅಸ್ತವ್ಯಸ್ತವಾಗಿದೆ.ಹುಬ್ಬಳ್ಳಿ, ಧಾರವಾಡದಂತಹ ಕಡೆಗಳಲ್ಲಿ ಕಳೆದ ಒಂದು ತಿಂಗಳಿಂದ ಧಾರಾಕಾರವಾಗಿ ಸತತ ಮಳೆ ಸುರಿಯುತ್ತಿದೆ.
ಪ್ರವಾಹ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು. ಅನೇಕ ಹಳ್ಳಿಗಳು ನಡುಗಡ್ಡೆಗಳಾಗಿದ್ದು ಅಲ್ಲಿನ ಜನರನ್ನು ಸುರಕ್ಷಿತ ತಾಣಗಳಿಗೆ ಸಾಗಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳ ಪಾತ್ರ ಪ್ರಮುಖವಾಗಿದೆ. ಪ್ರವಾಹ ಪೀಡಿತರಿಗೆ ತಕ್ಷಣ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಿ ಅಲ್ಲಿ ಅವರಿಗೆ ಉತ್ತಮ ಆಹಾರ ಹಾಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು. ಪರಿಹಾರ ಕಾರ್ಯದಲ್ಲಿ ಹಣಕಾಸಿನ ಕೊರತೆ ಉಂಟಾಗಬಾರದು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನಪ್ರತಿನಿಧಿಗಳು ಜನರ ನೆರವಿಗೆ ಧಾವಿಸಬೇಕು. ಅನರ್ಹಗೊಂಡ ಶಾಸಕರ ಕ್ಷೇತ್ರಗಳಲ್ಲಿ ಯಾರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಮುಂಬೈಗೆ ಹೋದ ಶಾಸಕರು ವಾಪಸು ಬಂದಿದ್ದರೂ ಹಲವರು ತಮ್ಮ ಕ್ಷೇತ್ರಗಳಿಗೆ ಬಂದಿಲ್ಲ. ಹೀಗಾಗಿ ಅಧಿಕಾರಿಗಳೇ ಅಲ್ಲಿ ತಮಗೆ ತಿಳಿದಂತೆ ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಇಂತಹ ಕ್ಷೇತ್ರಗಳ ಬಗ್ಗೆ ಮುಖ್ಯ ಮಂತ್ರಿಗಳು ವಿಶೇಷ ಗಮನ ನೀಡಬೇಕಾಗಿದೆ.
ಈ ಬಾರಿಯ ಪ್ರವಾಹ ಮತ್ತು ವರ್ಷಧಾರೆಯಿಂದ ಭಾರೀ ನಷ್ಟ ಉಂಟಾಗಿದೆ.ಕೇಂದ್ರ ಸರಕಾರ ವಿಶೇಷ ನೆರೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು. ಪರಿಸ್ಥಿತಿಯ ಅಧ್ಯಯನಕ್ಕೆ ಕೇಂದ್ರೀಯ ತಂಡ ಭೇಟಿ ನೀಡಬೇಕು. ಎಲ್ಲ ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳಲ್ಲಿ ಉಳಿದು ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಬೇಕು. ಬರೀ ಅಧಿಕಾರಿಗಳಿಗೆ ಬಿಡುವುದು ಸರಿಯಲ್ಲ.
ಪ್ರವಾಹದ ಹೊಡೆತಕ್ಕೆ ಸಿಕ್ಕು ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕದ ಜನರ ನೆರವಿಗೆ ಸರಕಾರ ಧಾವಿಸಬೇಕಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 17 ಗ್ರಾಮಗಳು ಜಲಾವೃತವಾಗಿವೆ. ಜಮಖಂಡಿ, ಮುಧೋಳ ತಾಲೂಕುಗಳಲ್ಲೂ ಇದೇ ಪರಿಸ್ಥಿತಿ ಇದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಈಗ ರಾಜ್ಯ ಸರಕಾರ ವಿಶೇಷ ನೆರವಿಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಬೇಕು. ನೊಂದವರ, ನೀರು ಪಾಲಾದವರ ನೆರವಿಗೆ ಧಾವಿಸಬೇಕು.
ಪ್ರವಾಹದ ಪರಿಸ್ಥಿತಿ ಉಲ್ಬಣಿಸಿದ್ದರೂ ಸರಕಾರ ಗೋಶಾಲೆ ಆರಂಭಿಸದಿರುವ ಬಗ್ಗೆ ರಾಜ್ಯ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹೈಕೋರ್ಟ್ ಆದೇಶದ ನಂತರವೂ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತಂತೆ ಕಾಣುವುದಿಲ್ಲ, ಅಂತಲೇ ಹೈಕೋರ್ಟ್ ಎರಡು ವಾರಗಳ ಗಡುವು ನೀಡಿದೆ. ಇನ್ನು ಮುಂದೆ ಹೀಗಾಗಬಾರದು. ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಎಂದು ದಿಲ್ಲಿಗೆ ಹೋಗಿ ಕುಳಿತುಕೊಳ್ಳದೆ ಬರ ಪರಿಹಾರ ಕಾರ್ಯ ಚುರುಕಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News