ಜಮ್ಮು-ಕಾಶ್ಮೀರ ಮಾಜಿ ಸಿಎಂಗಳ ಅಧಿಕೃತ ನಿವಾಸಕ್ಕೂ ಸಂಚಕಾರ?

Update: 2019-08-07 03:39 GMT
 ಮೆಹಬೂಬಾ ಮುಫ್ತಿ ವಾಸವಿರುವ ಅಧಿಕೃತ ನಿವಾಸ

ಶ್ರೀನಗರ, ಆ.7: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರ ಬಗ್ಗೆ ಪರ- ವಿರೋಧ ಚರ್ಚೆಗಳು ದೇಶದಲ್ಲಿ ನಡೆಯುತ್ತಿರುವ ನಡುವೆಯೇ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೂ ಸಂಚಕಾರ ಬರುವ ಸಾಧ್ಯತೆ ನಿಚ್ಚಳವಾಗಿದೆ.

ಮಂಜು ಮುಸುಕಿದ ಪರ್ವತಗಳ ಬುಡದಲ್ಲಿ ಭವ್ಯ ಬಂಗಲೆಗಳನ್ನು ಅವರ ಜೀವಿತಾವಧಿಯುದ್ದಕ್ಕೂ ಉಚಿತವಾಗಿ ಬಳಸಲು ಇದುವರೆಗೆ ಅವಕಾಶ ಇತ್ತು. ಸಾಂವಿಧಾನಿಕ ಹುದ್ದೆ ಅಲಂಕರಿಸಿದ್ದರು ಎಂಬ ಕಾರಣಕ್ಕೆ ಜೀವಿತಾವಧಿಯುದ್ದಕ್ಕೂ ಸರ್ಕಾರಿ ಬಂಗಲೆಯನ್ನು ಖಾತರಿಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪು ಈ ರಾಜ್ಯಕ್ಕೆ ಅನ್ವಯಿಸುತ್ತಿರಲಿಲ್ಲ. ಆದರೆ ಇದೀಗ 370ನೇ ವಿಧಿ ರದ್ದತಿಯೊಂದಿಗೆ ತೀರ್ಪು, ಜಮ್ಮ- ಕಾಶ್ಮೀರಕ್ಕೂ ಅನ್ವಯವಾಗಲಿದೆ.

ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹೊರತುಪಡಿಸಿ, ಅವರ ಪುತ್ರ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಹಾಗೂ ಗುಲಾಂ ನಬಿ ಆಝಾದ್ ಅವರು ಶ್ರೀನಗರದ ಗುಪ್ಕರ್ ರಸ್ತೆಯ ಉಚಿತ ಸರ್ಕಾರಿ ಬಂಗಲೆಗಳಲ್ಲಿ ವಾಸವಿದ್ದಾರೆ. ಆಝಾದ್ ಅವರನ್ನು ಹೊರತುಪಡಿಸಿ ಉಳಿದೆಲ್ಲ ಮುಖಂಡರು ಈ ಅಧಿಕೃತ ಬಂಗಲೆಗಳನ್ನು ತಮ್ಮ ಅಗತ್ಯತೆಗೆ ಅನುಗುಣವಾಗಿ ಅಧುನೀಕರಿಸಿಕೊಳ್ಳಲು ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ. ಒಮರ್ ಹಾಗೂ ಮುಫ್ತಿ ಕನಿಷ್ಠ 50 ಕೋಟಿ ರೂಪಾಯಿಯನ್ನು ಬಂಗಲೆಗಳ ಆಧುನೀಕರಣಕ್ಕಾಗಿ ಖರ್ಚು ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ರಸ್ತೆ ಮತ್ತು ಕಟ್ಟಡಗಳ ಇಲಾಖೆ, ಮೆಹಬೂಬಾ ಅವರ ತಂದೆ ಹಾಗೂ ಮಾಜಿ ಸಿಎಂ ಮುಫ್ತಿ ಮುಹಮ್ಮದ್ ಸಯೀದ್ ಅವರಿಗೆ ಸೇರಿದ್ದ ಖಾಸಗಿ ನಿವಾಸದ ಆಧುನೀಕರಣಕ್ಕೂ ದೊಡ್ಡ ಮೊತ್ತವನ್ನು ವೆಚ್ಚ ಮಾಡಿದೆ ಎನ್ನಲಾಗಿದೆ. ಅಧಿಕಾರಾವಧಿ ಮುಗಿದರೂ, ಭದ್ರತಾ ಕಾರಣಕ್ಕಾಗಿ ಸರ್ಕಾರಿ ಬಂಗಲೆಗಳಲ್ಲೇ ಉಳಿದಿರುವುದಾಗಿ ಮಾಜಿ ಸಿಎಂಗಳು ಈ ಹಿಂದೆ ಸಮರ್ಥಿಸಿಕೊಂಡಿದ್ದರು.

ಫಾರೂಕ್ ಅವರು ಗುಪ್ಕರ್ ರಸ್ತೆಯಲ್ಲೇ ಮನೆ ಹೊಂದಿದ್ದರೂ, ಅವರ ಪುತ್ರ ಒಮರ್ ಮಾತ್ರ ಅಧಿಕೃತ ನಿವಾಸದಲ್ಲೇ ಉಳಿದಿದ್ದಾರೆ. 2009ರಿಂದ 2014ರವರೆಗೆ ಸಿಎಂ ಆಗಿದ್ದ ಒಮರ್, ಸುಮಾರು 20 ಕೋಟಿ ರೂಪಾಯಿಗಳನ್ನು ಬಂಗಲೆ ಆಧುನೀಕರಣಕ್ಕಾಗಿ ವೆಚ್ಚ ಮಾಡಿದ್ದರು ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಸ್ವಂತ ಮನೆಯಲ್ಲಿ ವಾಸಿಸುವ ಫಾರೂಕ್ ಅಬ್ದುಲ್ಲಾ ಅಧಿಕೃತ ನಿವಾಸಕ್ಕೆ ಪ್ರತಿಯಾಗಿ ಬಾಡಿಗೆ ಪಡೆಯುತ್ತಿದ್ದಾರೆ. ಬಂಗಲೆಯ ಜತೆಗೆ ಸರ್ಕಾರಿ ಸಹಾಯಕರನ್ನೂ ನೇಮಿಸಿಕೊಳ್ಳಲು ಅವಕಾಶವಿದ್ದು, ಅವರ ವೇತನವನ್ನೂ ರಾಜ್ಯ ಬೊಕ್ಕಸದಿಂದ ಭರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News