ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‍ಗೆ ಮುಖ್ಯಮಂತ್ರಿ ಶ್ರದ್ಧಾಂಜಲಿ

Update: 2019-08-07 08:54 GMT

ಹೊಸದಿಲ್ಲಿ, ಆ.7: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರಕ್ಕೆ ಇಂದು ಅಂತಿಮ ನಮನ ಸಲ್ಲಿಸಿದರು.

ಸುಷ್ಮಾ ಸ್ವರಾಜ್ ಉತ್ತಮ ವಾಗ್ಮಿ ಹಾಗೂ ಅಸಾಧಾರಣ ನಾಯಕತ್ವದ ಗುಣ ಹೊಂದಿದ್ದರು. ಭಾರತದ ವಿದೇಶಾಂಗ ಸಚಿವೆಯಾಗಿ ಅದ್ವಿತೀಯ ಸೇವೆ ಸಲ್ಲಿಸಿದ್ದ ಅವರು ಇಂದಿರಾ ಗಾಂಧಿಯ ನಂತರ ಈ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆಯಾಗಿದ್ದರು. ಸಂಕಷ್ಟದಲ್ಲಿರುವ ಜನರ ನೆರವಿಗೆ ಸ್ವಯಂ ಪ್ರೇರಣೆಯಿಂದ ಧಾವಿಸುತ್ತಿದ್ದ ಕಾರಣ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ವಿದೇಶಿ ಮಾಧ್ಯಮಗಳೂ ಅವರನ್ನು ಅತ್ಯಂತ ಜನಪ್ರಿಯ ವಿದೇಶಾಂಗ ಸಚಿವೆ ಎಂದು ಬಣ್ಣಿಸಿದ್ದವು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಸುಷ್ಮಾ ಅವರಿಗೆ ಕರ್ನಾಟಕದೊಂದಿಗೆ ಇದ್ದ ಅವಿನಾಭಾವ ಸಂಬಂಧವನ್ನು ಸ್ಮರಿಸಿಕೊಂಡಿರುವ ಮುಖ್ಯಮಂತ್ರಿ, ಬಳ್ಳಾರಿಯಲ್ಲಿ 1999ರಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದಾಗಿನ ಒಡನಾಟ, ನಂತರ ಸುಮಾರು ಹತ್ತು ವರ್ಷಗಳ ಕಾಲ ಪ್ರತೀ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಆಗಮಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಕನ್ನಡದಲ್ಲೇ ಮಾತನಾಡುತ್ತ, ಜನರಲ್ಲಿ ಒಂದಾಗಿ ಬೆರೆಯುವ ಅವರ ಸ್ವಭಾವ ಅನುಸರಣೀಯ ಎಂದು ತಿಳಿಸಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News