ಜನರ ಕೆಂಗಣ್ಣಿಗೆ ಗುರಿಯಾದ ಸುಮಲತಾರ 'ಡಿನ್ನರ್​ ಮೀಟಿಂಗ್' ಟ್ವೀಟ್

Update: 2019-08-07 11:51 GMT

ಬೆಂಗಳೂರು, ಆ.7: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​  ನಿನ್ನೆ ರಾತ್ರಿ ನಿಧನರಾಗಿದ್ದು, ವಿವಿಧ ಗಣ್ಯರು ಅಗಲಿದ ನಾಯಕಿಗೆ ಸಂತಾಪ ಸೂಚಿಸುತ್ತಿದ್ದಾರೆ. ಆದರೆ ಇದೇ ಸಂದರ್ಭ ಸಂಸದೆ ಸುಮಲತಾ ಅಂಬರೀಷ್​ ಅವರು ಮಾಡಿರುವ ಟ್ವೀಟ್ ವೊಂದು​ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿ ನಾಯಕರ ಜತೆಗಿನ ಡಿನ್ನರ್ ಮೀಟಿಂಗ್​ ಮಾಡಿರುವ ಬಗ್ಗೆ ಪೋಟೋ ಹಾಕಿ ಸುಮಲತಾ ಟ್ವೀಟ್​ ಮಾಡಿದ್ದಾರೆ.  ಆದರೆ ಸುಶ್ಮಾ ಸ್ವರಾಜ್ ನಿಧನದ ನಂತರ ಅವರಿಗೆ ಸಂತಾಪ ಸೂಚಿಸದೆ ಸುಮಲತಾ ಮಾಡಿರುವ ಈ ಡಿನ್ನರ್​ ಮೀಟಿಂಗ್ ಟ್ವೀಟ್ ಬಿಜೆಪಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

ದಿಲ್ಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಜತೆ ಡಿನ್ನರ್​ ಮೀಟಿಂಗ್​ ನಡೆಯಿತು ಎಂದು ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಸುರೇಶ್​ ಅಂಗಡಿ ಮತ್ತು ಪ್ರಹ್ಲಾದ್​ ಜೋಶಿ ಅವರ ಹೆಸರುಗಳನ್ನು ಟ್ಯಾಗ್ ಮಾಡಿ ನಿನ್ನೆ ಮಧ್ಯರಾತ್ರಿ 12:18ಕ್ಕೆ ಸುಮಲತಾ ಟ್ವೀಟ್​ ಮಾಡಿದ್ದಾರೆ.  

ಸುಮಲತಾ ಮಾಡಿರುವ ಟ್ವೀಟ್​ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ‘ಟ್ವೀಟ್​ ಮಾಡಲು ಇದು ಸೂಕ್ತ ಸಮಯವಲ್ಲ ಮೇಡಂ’ ಎಂದು ಓರ್ಬ ಟ್ವಿಟಿಗ ಕಿಡಿಕಾರಿದ್ದಾನೆ. ಭಾರತಕ್ಕೆ ಕೊಡುಗೆ ನೀಡಿದ ಸುಶ್ಮಾ  ಸ್ವರಾಜ್​ರಂತಹ ದಿಗ್ಗಜೆಯನ್ನು ನೆನಪು ಮಾಡಿಕೊಳ್ಳುವಂತಹ ಸಮಯವಿದು.  ಬಿಜೆಪಿ ಅವರ ಭಾವನೆಗೆ ಧಕ್ಕೆ ತರಬೇಡಿ. ಸುಶ್ಮಾ ಜಿ ಇನ್ನಿಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದೆಲ್ಲಾ ಸುಮಲತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೆಟ್ಟಿಗರ ಆಕ್ರೋಶದ ಟ್ವೀಟ್​ಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡದ ಸುಮಲತಾ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ‘’ಮಾಜಿ ವಿದೇಶಾಂಗ ಸಚಿವೆ ಶ್ರೀಮತಿ ಸುಶ್ಮಾ  ಸ್ವರಾಜ್ ಜಿ ಅವರ ಸಾವಿನ ಸುದ್ದಿ ತುಂಬಾ ದುಃಖಕರವಾಗಿದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪ.ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’’ ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News