ಅಭಿನಂದನ್, ಬಾಲಾಕೋಟ್ ದಾಳಿ ಪೈಲಟ್‌ಗಳಿಗೆ ಸೇನಾ ಪ್ರಶಸ್ತಿ?

Update: 2019-08-08 03:51 GMT

ಹೊಸದಿಲ್ಲಿ, ಆ.8: ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಫೆಬ್ರವರಿ 27ರಂದು ಹೊಡೆದುರುಳಿಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹಾಗೂ ಬಾಲಾಕೋಟ್‌ನಲ್ಲಿ ಉಗ್ರರ ನೆಲೆಗಳ ಮೇಲೆ ನಿಖರವಾಗಿ ಬಾಂಬ್ ಹಾಕಿದ ಮಿರಾಜ್-2000 ಪೈಲಟ್‌ಗಳಿಗೆ ಸೇನಾ ಪ್ರಶಸ್ತಿಯನ್ನು ಸರ್ಕಾರ ಘೋಷಿಸಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ವರ್ಧಮಾನ್ ಅವರಿಗೆ ವೀರಚಕ್ರ ಹಾಗೂ ಐದು ಮಂದಿ ಮಿರಾಜ್-2000 ಯುದ್ಧವಿಮಾನ ಪೈಲಟ್‌ಗಳಿಗೆ ವಾಯುಸೇನಾ ಶೌರ್ಯಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಇಬ್ಬರು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

35 ವರ್ಷ ವಯಸ್ಸಿನವರಾಗಿದ್ದ ಅಭಿನಂದನ್ ತಮ್ಮ ಎಂಐಜಿ-21 ಬಿಸನ್ ಯುದ್ಧ ವಿಮಾನಕ್ಕೆ ಪಾಕಿಸ್ತಾನದ ಕ್ಷಿಪಣಿ ಬಡಿಯುವ ಮುನ್ನ ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿ ಸೇನಾ ವಿಮಾನಯಾನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದರು.

ವಿಮಾನದಿಂದ ಕೆಳಗಿಳಿದ ವರ್ಧಮಾನ್ ಅವರನ್ನು ಬಂಧಿಸಿದ ಪಾಕಿಸ್ತಾನ 60 ಗಂಟೆ ಕಾಲ ವಶದಲ್ಲಿಟ್ಟುಕೊಂಡು ಬಳಿಕ ಬಿಡುಗಡ ಮಾಡಿತ್ತು.
ವೀರಚಕ್ರ ಪ್ರಶಸ್ತಿಯು, ಪರಮವೀರ ಚಕ್ರ ಹಾಗೂ ಮಹಾವೀರ ಚಕ್ರ ಬಳಿಕ ದೇಶದ ಯೋಧರಿಗೆ ನೀಡುವ ಮೂರನೇ ಅತಿದೊಡ್ಡ ಶೌರ್ಯ ಪ್ರಶಸ್ತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News