ಬಕ್ರೀದ್ ಹಿನ್ನೆಲೆ: ರೋಷನ್‌ ಬೇಗ್ ನೇತೃತ್ವದ ನಿಯೋಗದಿಂದ ಪೊಲೀಸ್ ಆಯುಕ್ತರ ಭೇಟಿ:

Update: 2019-08-08 16:29 GMT

ಬೆಂಗಳೂರು, ಆ.8: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಾನುವಾರುಗಳ ಸಾಗಾಟದ ವೇಳೆ ಪೊಲೀಸರಿಂದ ಎದುರಾಗುತ್ತಿರುವ ಅಡೆತಡೆ, ಕಿರುಕುಳದಿಂದಾಗಿ ಮುಸ್ಲಿಮರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ ಎಂದು ಮಾಜಿ ಸಚಿವ ಆರ್.ರೋಷನ್ ಬೇಗ್ ಹೇಳಿದ್ದಾರೆ.

ಗುರುವಾರ ಸಂಜೆ ಮುಸ್ಲಿಮ್ ಮುಖಂಡರ ನಿಯೋಗದೊಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿದ ಅವರು, ಹಬ್ಬ ಆಚರಣೆಗೆ ಅಡಚಣೆ ಉಂಟು ಮಾಡಲು ಕೆಲವು ಸಂಘಟನೆಗಳು ಯತ್ನಿಸುತ್ತಿದ್ದು, ಅದಕ್ಕೆ ಪೊಲೀಸರು ಸಹಕಾರ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಸ್ಲಿಮ್ ಮುಖಂಡರ ಅಹವಾಲುಗಳನ್ನು ಆಲಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೊಲೀಸರಿಂದ ಯಾವುದೇ ರೀತಿಯಲ್ಲಿ ಅನಗತ್ಯ ಕಿರುಕುಳ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳನ್ನು ಮುಸ್ಲಿಮ್ ಬಾಂಧವರು ನಂಬಬಾರದು ಎಂದರು.

ನಿರಾತಂಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಿ, ಬೆಂಗಳೂರು ನಗರದ ಪೊಲೀಸರು ನಿಮ್ಮ ಜೊತೆ ಇದ್ದಾರೆ. ಯಾವುದೇ ಕಾರಣಕ್ಕೂ ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದು ಭಾಸ್ಕರ್ ರಾವ್ ಅಭಯ ನೀಡಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯ ಶಕೀಲ್ ಅಹ್ಮದ್, ಮಟನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಿ.ಇಕ್ಬಾಲ್ ಖುರೇಷಿ, ಬೀಫ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಖಾಸಿಮ್ ಜಾನಿ ಖುರೇಷಿ, ಬರ್ಕತ್ ಖುರೇಷಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News