ರಾಜ್ಯದ ನೆರೆ ಪರಿಸ್ಥಿತಿ ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ಪ್ರಧಾನಿಗೆ ಕೆಪಿಸಿಸಿ ಪತ್ರ

Update: 2019-08-08 16:56 GMT

ಬೆಂಗಳೂರು, ಆ.8: ರಾಜ್ಯದಲ್ಲಿ ಈ ಹಿಂದೆ ಯಾವತ್ತೂ ನೋಡದ ರೀತಿಯಲ್ಲಿ ಪ್ರವಾಹ ಪರಿಸ್ಥಿತಿ ಬಂದಿದೆ. ಜನ ಜಾನುವಾರುಗಳು, ಗ್ರಾಮಗಳು ಮುಳುಗಡೆ ಆಗುತ್ತಿವೆ. ಅಪಾರ ಪ್ರಮಾಣದ ಹಾನಿ ಆಗಿದೆ. ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿದೆ. ಇದನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಇಂತಹ ಸಂದರ್ಭದಲ್ಲಿ ರಾಜ್ಯದ ನೆರವಿಗೆ ಧಾವಿಸಬೇಕು. ಎನ್‌ಡಿಆರ್‌ಎಫ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಕೆಲಸಗಳನ್ನು ಮುಂದುವರೆಸುವಂತೆ ಮನವಿ ಮಾಡಿದರು.

ನೆರೆ ಹಾವಳಿಯಿಂದಾಗಿ ಸಂತ್ರಸ್ತರಾಗಿರುವವರಿಗೆ ತುರ್ತಾಗಿ ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ, ದುರ್ದೈವದ ಸಂಗತಿ ಎಂದರೆ ಈ ವೇಳೆ ಮುಖ್ಯಮಂತ್ರಿ ಹೋಗಿ ದಿಲ್ಲಿಯಲ್ಲಿ ಕೂತಿದ್ದರು. ಸಚಿವ ಸಂಪುಟ ಇಲ್ಲದೇ, ಏಕಾಂಗಿಯಾಗಿ ಓಡಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಕೇಂದ್ರ ಸರಕಾರದಿಂದ ಸಹಾಯದ ಒಂದು ಮಾತು ಈ ವರೆಗೆ ಬಂದಿಲ್ಲ. ಅವರು ಇತರೆ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ. ಇಲ್ಲಿ ಅಧಿಕಾರಿಗಳಿಗೆ ಹೇಳಿ ಕೆಲಸ ಮಾಡಿಸುವವರು ಯಾರೂ ಇಲ್ಲ. ಸಚಿವ ಸಂಪುಟ ಇದ್ದಿದ್ದರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕೆಲಸಗಳು ಸಮರ್ಪಕವಾಗಿ ಆಗುತ್ತಿತ್ತು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಗಳಲ್ಲಿ ಜನ, ಜಾನುವಾರು ಹಾಗೂ ಆಸ್ತಿ-ಪಾಸ್ತಿಗಳಿಗೆ ಆಗಿರುವ ಅಪಾರ ಹಾನಿಯ ಹಿನ್ನೆಲೆಯಲ್ಲಿ ಅವರಿಗೆ ನಾವು ಸ್ಪಂದಿಸಲು ಕೆಪಿಸಿಸಿ ವತಿಯಿಂದ ಪ್ರವಾಹ ಸಂತ್ರಸ್ತರ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಎಲ್ಲ ವಿಧಾನಸಭಾ, ವಿಧಾನಪರಿಷತ್ ಮತ್ತು ಸಂಸತ್ ಸದಸ್ಯರು ತಮ್ಮ ಒಂದು ತಿಂಗಳ ವೇತನವನ್ನು (‘KPCC Relief Fund A/C No.0788101056855, Canara Bank, Madhavanagar Branch’) ಗೆ ನೀಡುವಂತೆ ಕೋರಲಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಇಂತಹ ಕೆಲಸಗಳನ್ನು ಯಾವತ್ತು ಮುಂದೆ ಬಂದು ಮಾಡುತ್ತದೆ. ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ಎಲ್ಲ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಕೈ ಜೋಡಿಸುವಂತೆ ನಮ್ಮ ನಾಯಕ ರಾಹುಲ್ ಗಾಂಧಿ ಸಂದೇಶ ಕಳುಹಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ನೆರೆ ಪೀಡಿತ ಪ್ರದೇಶಗಳಿಗೆ ಸೋಮವಾರ ನಾನು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಸರಕಾರದ ಪರಿಹಾರ ಕಾರ್ಯಕ್ಕೆ ನಾವು ಸಹಕಾರ ನೀಡುತ್ತೇವೆ. ಜೊತೆಗೆ ವೈಮಾನಿಕ ಸಮೀಕ್ಷೆಯನ್ನು ನಡೆಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News