ಮಹಾರಾಷ್ಟ್ರದ 5 ಜಿಲ್ಲೆಗಳಲ್ಲಿ ವರುಣನ ಆರ್ಭಟ: ಒಂದು ವಾರದಲ್ಲಿ 25ಕ್ಕೇರಿದ ಸಾವಿನ ಸಂಖ್ಯೆ

Update: 2019-08-08 17:05 GMT

ಪುಣೆ/ಮುಂಬೈ, ಆ. 8: ಪಶ್ಚಿಮ ಮಹಾರಾಷ್ಟ್ರದ ಐದು ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ಮುಂದುವರಿದಿದ್ದು, ಕಳೆದ ಒಂದು ವಾರದಲ್ಲಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 25ಕ್ಕೆ ಏರಿಕೆಯಾಗಿದೆ. ಅಲ್ಲದೆ, 1.32 ಲಕ್ಷ ಮಂದಿ ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ.

‘‘ಪಶ್ಚಿಮ ಮಹಾರಾಷ್ಟ್ರದ 5 ಜಿಲ್ಲೆಗಳಾದ ಪುಣೆ, ಸತಾರಾ, ಸಾಂಗ್ಲಿ, ಕೊಲ್ಹಾಪುರ ಹಾಗೂ ಸೋಲಾಪುರ ತೀವ್ರ ನೆರೆ ಪೀಡಿತವಾಗಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಪುಣೆಯಲ್ಲಿ ನಾಲ್ವರು, ಸತಾರದಲ್ಲಿ 7 ಮಂದಿ, ಸಾಂಗ್ಲಿಯಲ್ಲಿ ಇಬ್ಬರು, ಕೊಲ್ಹಾಪುರದಲ್ಲಿ ಇಬ್ಬರು ಹಾಗೂ ಸೋಲಾಪುರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದಲ್ಲದೆ ಸಾಂಗ್ಲಿಯಲ್ಲಿ ದೋಣಿ ಮಗುಚಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಪುಣೆಯ ವಿಭಾಗೀಯ ಆಯುಕ್ತ ದಿಲೀಪ್ ಮೈಸೇಕರ್ ತಿಳಿಸಿದ್ದಾರೆ.

ಒಟ್ಟು 1.32 ಲಕ್ಷ ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಜಿಲ್ಲಾಡಳಿತ ಸ್ಥಳಾಂತರಿಸಿದೆ. ನಗರ ಪ್ರದೇಶಗಳಲ್ಲಿ ಸಂತ್ರಸ್ತರಾದವರಿಗೆ ಜಿಲ್ಲಾಡಳಿತ ಹಾಗೂ ನಗರಾಡಳಿತ ತಾತ್ಕಾಲಿಕ ಶಿಬಿರಗಳನ್ನು ಆರಂಭಿಸಿದೆ’’ ಎಂದು ಮೈಸೇಕರ್ ಹೇಳಿದ್ದಾರೆ.

ನೆರೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಏರ್‌ಲಿಫ್ಟ್ ಮಾಡಲು ಹಾಗೂ ನೆರವು ನೀಡಲು ಗೋವಾದಿಂದ ನೌಕಾಪಡೆಯ ತಂಡ ಕೊಲ್ಹಾಪುರಕ್ಕೆ ಆಗಮಿಸಿದೆ ಎಂದು ಅವರು ತಿಳಿಸಿದ್ದಾರೆ. ವಿಭಾಗೀಯ ಆಯುಕ್ತರ ಕಚೇರಿ ಹವಾಮಾನ ಇಲಾಖೆ ಹಾಗೂ ನೀರಾವರಿ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಅಣೆಕಟ್ಟಿನಿಂದ ನೀರು ಬಿಡುಗಡೆ ನಿರ್ವಹಿಸಲು ನಿರಾವರಿ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮೈಸೇಕರ್ ತಿಳಿಸಿದ್ದಾರೆ. ಪಶ್ಚಿಮ ಮಹಾರಾಷ್ಟ್ರದ ಐದು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದು ನೆರೆ ಉಂಟಾಗಲು ಕಾರಣ. ಆಗಸ್ಟ್ 10ರ ವರೆಗೆ ಪಶ್ಚಿಮ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ದೋಣಿ ಮಗುಚಿ 9 ಸಾವು

ಸಾಂಗ್ಲಿ ಜಿಲ್ಲೆಯಲ್ಲಿ ಗುರುವಾರ ದೋಣಿ ಮಗುಚಿ 9 ಮಂದಿ ಮೃತಪಟ್ಟಿದ್ದಾರೆ. 30ರಿಂದ 32 ಜನರನ್ನು ಕರೆದೊಯ್ಯುತ್ತಿದ್ದ ಖಾಸಗಿ ರಕ್ಷಣಾ ಕಾರ್ಯಾಚರಣೆಯ ದೋಣಿ ಪಾಲಸ್ ತಾಲೂಕಿನ ಬ್ರಹ್ಮನಾಲ್ ಗ್ರಾಮದ ಸಮೀಪ ಮಗುಚಿ ದುರಂತ ಸಂಭವಿಸಿದೆ ಎಂದು ಪುಣೆಯ ವಿಭಾಗೀಯ ಆಯುಕ್ತ ದೀಪಕ್ ಮೈಸೇಕರ್ ತಿಳಿಸಿದ್ದಾರೆ. ಇದುವರೆಗೆ 9 ಮೃತದೇಹಗಳು ಪತ್ತೆಯಾಗಿವೆ. 19 ಮಂದಿ ಈಜಿ ಪಾರಾಗುವಲ್ಲಿ ಸಫಲರಾಗಿದ್ದಾರೆ. ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ನಾಪತ್ತೆಯಾದವರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ ಎಂದು ಮೈಸೇಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News