ಪಿಂಕ್ ಬೇಬಿ ಯೋಜನೆ ಉದ್ದೇಶ ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ: ಮೇಯರ್ ಗಂಗಾಂಬಿಕೆ

Update: 2019-08-08 18:24 GMT

ಬೆಂಗಳೂರು, ಆ.8: ಪ್ರತಿಯೊಬ್ಬ ಹೆಣ್ಣು ಮಗುವಿಗೂ ಶಿಕ್ಷಣ ಸಿಗಬೇಕು ಹಾಗೂ ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣವಾಗಬೇಕು ಎಂಬ ಉದ್ದೇಶದಿಂದ ಪಿಂಕ್ ಬೇಬಿ ಯೋಜನೆಯಡಿ 5 ಲಕ್ಷ ರೂ. ರೂಪಾಯಿಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ರೂಪದಲ್ಲಿ ಇಡಲಾಗುತ್ತದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.

ಗುರುವಾರ ಬಿಬಿಎಂಪಿಯ ಕಚೇರಿಯಲ್ಲಿ ಪಾಲಿಕೆ ವ್ಯಾಪ್ತಿಗೆ ಒಳಪಡುವ 24 ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸಿದ ಮೊದಲ ಹೆಣ್ಣುಮಗುವಿಗೆ 5 ಲಕ್ಷ ರೂ. ನೀಡುವ ಪಿಂಕ್ ಬೇಬಿ ಯೋಜನೆಯಡಿ 19 ಫಲಾನುಭವಿಗಳಿಗೆ ಬಾಂಡ್ ವಿತರಿಸಿ ಮಾತನಾಡಿದ ಅವರು, 2018ನೇ ಸಾಲಿನಲ್ಲಿ ವರ್ಷದ ಮೊದಲನೇ ದಿನ ಹುಟ್ಟಿದ ಒಂದು ಹೆಣ್ಣು ಮಗುವಿಗೆ 5 ಲಕ್ಷ ರೂಪಾಯಿ ಬಾಂಡ್ ವಿತರಿಸಲಾಗಿತ್ತು. ಬಳಿಕ 2019ನೆ ಸಾಲಿನಲ್ಲಿ ಪಾಲಿಕೆ ವ್ಯಾಪ್ತಿಗೆ ಒಳಪಡುವ 24 ಆಸ್ಪತ್ರೆಗಳಲ್ಲಿ ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಈ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ಬಜೆಟ್‌ನಲ್ಲಿ 1.20 ಕೋಟಿ ರೂ. ಮೀಸಲಿರಿಸಲಾಯಿತು.

ಪಾಲಿಕೆ ವ್ಯಾಪ್ತಿಯ 24 ಆಸ್ಪತ್ರೆಗಳ ಪೈಕಿ ಕಾವೇರಿಪುರ, ದಾಸಪ್ಪಹಾಗೂ ಯಶವಂತಪುರ ಹೆರಿಗೆ ಆಸ್ಪತ್ರೆಗಳನ್ನು ಪುನರ್ ನವೀಕರಣ ಮಾಡಲಾಗುತ್ತಿದೆ. ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಯಲ್ಲಿ ಹೊರರಾಜ್ಯದ ಮಗು ಜನಿಸಿದ್ದು ಈ ಯೋಜನೆ ಅನ್ವಯವಾಗುವುದಿಲ್ಲ. ಮೂಡಲಪಾಳ್ಯ ಆಸ್ಪತ್ರೆಯಲ್ಲಿ ಜನಿಸಿದ ಮಗುವಿನ ದಾಖಲಾತಿಗಳನ್ನು ಪಾಲಿಕೆಗೆ ಸಲ್ಲಿಸದ ಪರಿಣಾಮ 19 ಆಸ್ಪತ್ರೆಗಳಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ ಬಾಂಡ್ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ಅವರು ನೀಡಿದರು.

ಶಿಕ್ಷಣ ಕೊಡಿಸದಿದ್ದರೆ ಹಣ ಪಾಲಿಕೆಗೆ

ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಮಗವಿನ ವಿದ್ಯಾಭ್ಯಾಸಕ್ಕೆ ಉಪಯೋಗಿಸಬಹುದು. 18 ವರ್ಷ ತುಂಬಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಬಯಸಿದಲ್ಲಿ ಯೋಜನೆಯಡಿ ಇಟ್ಟಿರುವ ಸಂಪೂರ್ಣ ಠೇವಣಿ ಮೊತ್ತವನ್ನು ಪೋಷಕರ ಖಾತೆಗೆ ವರ್ಗಾಯಿಸಲಾಗುವುದು. ಒಂದು ವೇಳೆ ಮಗುವಿಗೆ ಶಿಕ್ಷಣ ಕೊಡಿಸದ ಪಕ್ಷದಲ್ಲಿ ಮಗುವಿಗೆ ಮೀಸಲಿಟ್ಟಿರುವ ಠೇವಣಿ ಹಣವನ್ನು ಪಾಲಿಕೆ ಖಾತೆಗೆ ಹಿಂಪಡೆಯಲಾಗುತ್ತದೆ ಎಂದು ಮೇಯರ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News