ಜಮ್ಮುವಿನಲ್ಲಿ ನಿರ್ಬಂಧ ತೆರವು, ಕಾಶ್ಮೀರದಲ್ಲಿ ಮುಂದುವರಿಕೆ

Update: 2019-08-14 18:14 GMT

ಶ್ರೀನಗರ, ಆ.14: ಕಾಶ್ಮೀರ ಕಣಿವೆಯಲ್ಲಿ ವಿಧಿಸಲಾಗಿದ್ದ ನಿರ್ಭಂದ ಮುಂದುವರಿಯಲಿದೆ. ಆದರೆ ಜಮ್ಮುವಿನಲ್ಲಿ ತೆರವುಗೊಳಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಜಮ್ಮುವಿನಲ್ಲಿ ನಿರ್ಬಂಧ ತೆರವುಗೊಳಿಸಲಾಗಿದೆ. ಆದರೆ ಕಾಶ್ಮೀರದ ಕೆಲವು ಭಾಗಗಳಲ್ಲಿ ಇನ್ನೂ ಕೆಲವು ದಿನ ಮುಂದುವರಿಯಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುನೀರ್ ಖಾನ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು ಶ್ರೀನಗರ ಹಾಗೂ ಇತರ ಪ್ರದೇಶಗಳಲ್ಲಿ ನಿರ್ಧಿಷ್ಟ ಸ್ಥಳಕ್ಕೆ ಸೀಮಿತಗೊಂಡು ಕೆಲವು ಘಟನೆ ನಡೆದಿದ್ದು ಅವನ್ನು ಸ್ಥಳೀಯವಾಗಿಯೇ ಪರಿಹರಿಸಲಾಗಿದೆ ಎಂದು ಖಾನ್ ಹೇಳಿದ್ದಾರೆ. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಾಗಿರಲಿ ಅಥವಾ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯವಾಗಿರಲಿ, ನಾಗರಿಕರಿಗೆ ತೊಂದರೆಯಾಗದಂತೆ ಅದನ್ನು ನಿರ್ವಹಿಸಲು ಆಡಳಿತ ಗರಿಷ್ಟ ಪ್ರಯತ್ನ ಮಾಡುತ್ತದೆ ಎಂದವರು ಹೇಳಿದ್ದಾರೆ.

 ಶ್ರೀನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದಿಂದ ನಿರ್ಬಂಧ ತೆರವುಗೊಳಿಸಲಾಗಿದೆ . ನಾಗರಿಕ ಪೂರೈಕೆ, ಔಷಧ ಸೌಲಭ್ಯಗಳ ಪೂರೈಕೆಗೆ ತೊಂದರೆಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಹಜವಾಗಿದೆ ಮತ್ತು ವಿಮಾನ ನಿಲ್ದಾಣ ಕಾರ್ಯಾಚರಿಸುತ್ತಿದೆ . ಸ್ಥಳೀಯಾಡಳಿತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಅಗತ್ಯಬಿದ್ದರೆ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ರಾಜ್ಯದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಕಳೆದ ವಾರಾಂತ್ಯ ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಂಸಾಚಾರ ನಡೆದಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ನಿರಾಕರಿಸಿದ್ದ ರಾಜ್ಯಪಾಲ ಸತ್ಯಪಾಲ್ ಮಲಿಕ್, ಕೆಲವು ಕಲ್ಲೆಸೆತದ ಘಟನೆ ಬಿಟ್ಟರೆ ಬೇರೆ ಯಾವುದೇ ಹಿಂಸಾಚಾರ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಕೆಲವರು ಪೆಲೆಟ್ ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸ್ಪಷ್ಟ ಚಿತ್ರಣ ನೀಡಬೇಕು ಎಂದು ವಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370ನೇ ವಿಧಿಯನ್ನು ಆಗಸ್ಟ್ 5ರಂದು ಕೇಂದ್ರ ಸರಕಾರ ರದ್ದುಗೊಳಿಸಿದ್ದು ಇದರ ಹಿಂದಿನ ದಿನ(ಆಗಸ್ಟ್ 4ರಿಂದ)ದಿಂದ ಕಾಶ್ಮೀರದಲ್ಲಿ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು ಜನ ಗುಂಪುಗೂಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಟೆಲಿಫೋನ್ ಮತ್ತು ಇಂಟರ್‌ನೆಟ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿದ್ದು ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸಹಿತ ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿಡಲಾಗಿದೆ.

ಹಲವರಿಗೆ ಪೆಲೆಟ್ ಗುಂಡೇಟು: ಅಧಿಕಾರಿಗಳ ಹೇಳಿಕೆ

ಈ ಮಧ್ಯೆ, ಕಾಶ್ಮೀರದಲ್ಲಿ ಕಳೆದ ಒಂದು ವಾರದಿಂದ ಒಂದೇ ಒಂದು ಗುಂಡು ಹಾರಿಲ್ಲ ಎಂದು ಹೇಳಿದ್ದ ಭದ್ರತಾ ಪಡೆಗಳು ಬುಧವಾರ ವ್ಯತಿರಿಕ್ತ ಹೇಳಿಕೆ ನೀಡಿದ್ದು, ಪೆಲೆಟ್ ಗುಂಡೇಟಿನಿಂದ ಕೆಲವರು ಗಾಯಗೊಂಡಿದ್ದಾರೆ ಎಂದಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಕೆಲವರು ಭದ್ರತಾ ಪಡೆಗಳ ಪೆಲೆಟ್ ಗುಂಡೇಟಿನಿಂದ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗಿದೆ. ಯಾರಿಗೂ ಗಂಭೀರ ಪ್ರಮಾಣದ ಗಾಯವಾಗಿಲ್ಲ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುನೀರ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News